ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇ ಉದ್ಯಮ ಸಲಹೆ

Last Updated 3 ಜೂನ್ 2020, 3:09 IST
ಅಕ್ಷರ ಗಾತ್ರ

‘ಕೋವಿಡ್-19’ ಪಿಡುಗಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳು ‌ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಗ್ಲೋಬಲ್‌ ಅಲಯನ್ಸ್‌ ಫಾರ್‌ ಮಾಸ್‌ ಎಂಟರ್‌ಪ್ರಿನ್ಯೂಅರ್‌ಶಿಪ್‌ (ಜಿಎಎಂಇ) ಸಹ ಸ್ಥಾಪಕ ಮದನ್‌ ಪದಕಿ ಅವರು ಉದ್ಯಮಿಗಳು ಎದುರಿಸುತ್ತಿರುವ ಬಿಕ್ಕಟ್ಟಿಗೆ ಇಲ್ಲಿ ಪರಿಹಾರ ಸೂಚಿಸುತ್ತಾರೆ. ಪ್ರಶ್ನೆ, ಸಲಹೆಗಳಿಗೆ ಸಹಾಯವಾಣಿ (73977 79520) ಮತ್ತು ಇ–ಮೇಲ್‌gamesupportnetwork@massentrepreneurship.orgಸಂಪರ್ಕಿಸಬಹುದು.

***

ಚೇತನ್‌, ಬೆಂಗಳೂರು

ಪ್ರಶ್ನೆ: ನಾನು ಒಂದು ಸಣ್ಣ ಹೋಟೆಲ್ ವ್ಯಾಪಾರ ಮಾಡುತ್ತಿದ್ದೇನೆ. ನನ್ನ ಹೋಟೆಲ್ ಹೆಚ್ಚಾಗಿ ಕಚೇರಿಗಳೇ ಇರುವ ಸ್ಥಳದಲ್ಲಿದೆ. ಈ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಉದ್ಯೋಗಿಗಳುಭೋಜನಕ್ಕಾಗಿ ನನ್ನ ಹೋಟೆಲಿಗೆ ಬರುತ್ತಿದ್ದರು. ಲಾಕ್‌ಡೌನ್ ಕಾರಣದಿಂದಾಗಿ ಈಗ ಎಲ್ಲ ಉದ್ಯೋಗಿಗಳು ತಮ್ಮ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ಬಳಿ ಇರುವ ಮೂಲ ಸೌಕರ್ಯವನ್ನು ಲಾಭದಾಯಕವಾಗಿ ಬಳಸುವ ಬಗೆ ಹೇಗೆ?

ಪ್ರಸ್ತುತ ಪರಿಸ್ಥಿತಿಯಲ್ಲಿ ಹೋಟೆಲ್‌ಗಳೂ ಸೇರಿದಂತೆ ಆಹಾರ ಸೇವೆಗಳ ಉದ್ಯಮ ಕ್ಷೇತ್ರವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಪರಿಸ್ಥಿತಿಯು ಸದ್ಯದಲ್ಲೇ ಸುಧಾರಿಸಬಹುದು ಎಂಬ ನಿರೀಕ್ಷೆ ಇದ್ದರೂ, ಹೆಚ್ಚಿನ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ತಮ್ಮ ಉದ್ಯೋಗಿಗಳಿಗೆ ಉತ್ತೇಜನ ನೀಡುತ್ತಿರುವುದರಿಂದ ವ್ಯಾಪಾರ ಮೊದಲಿನ ಮಟ್ಟಕ್ಕೆ ಬರಲು ಸ್ವಲ್ಪ ಸಮಯ ತಗಲುತ್ತದೆ.ಆಹಾರವನ್ನು ಪಾರ್ಸೆಲ್ ನೀಡುವುದರ ಮೂಲಕ ಪ್ರಸ್ತುತ ನಿಮ್ಮ ಬಳಿ ಲಭ್ಯವಿರುವ ಮೂಲ ಸೌಕರ್ಯ ಬಳಸಬಹುದಾಗಿದೆ. ನಿಮ್ಮ ಸೇವೆಯನ್ನು ಹತ್ತಿರವಿರುವ ವಾಸ ಪ್ರದೇಶಗಳಿಗೆ ಕೇಟರಿಂಗ್ ರೂಪದಲ್ಲಿ ವಿಸ್ತರಿಸಬಹುದಾಗಿದೆ. ಕೇವಲ ಪಾರ್ಸೆಲ್ ಸೇವೆ ಒದಗಿಸುವುದು ನಿಮಗೆ ಲಾಭದಾಯಕವಲ್ಲ. ಹೊಸ ಗ್ರಾಹಕರನ್ನು ಸಂಪರ್ಕಿಸಲು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿರಿ. ನಿಮ್ಮ ಹೋಟೆಲ್‌ನಲ್ಲಿ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಂಡು ಮತ್ತು ಅಂತರ ಕಾಯ್ದುಕೊಳ್ಳುವ ಮೂಲಕ ಗ್ರಾಹಕರಲ್ಲಿ ಭರವಸೆ ಮೂಡಿಸಿರಿ.

***

ನೀತಾ, ಮಂಗಳೂರು

ಪ್ರಶ್ನೆ: ನಾನು ಟೇಲರಿಂಗ್ ಅಂಗಡಿ ನಡೆಸುವ ಮಹಿಳಾ ಉದ್ಯಮಿಯಾಗಿದ್ದು, ಮಹಿಳೆಯರಿಗೆ ಅವರ ಅವಶ್ಯಕತೆಗೆ ತಕ್ಕಂತೆ ಬಟ್ಟೆಗಳನ್ನು ಹೊಲಿದು ಕೊಡುತ್ತೇನೆ. ಇತ್ತೀಚೆಗೆ ಮುಖಗವಸು ಹೊರತು ಪಡಿಸಿ ಮತ್ತಾವುದೇ ಕೆಲಸ ನನಗೆ ದೊರೆತಿಲ್ಲ. ನನ್ನ ಬಳಿ ಉತ್ತರ ಭಾರತದ ನಾಲ್ಕು ಜನ ಟೇಲರ್‌ಗಳು ಕೆಲಸ ಮಾಡುತ್ತಿದ್ದು ಅವರಿಗೆ ನಾನು ಸಂಬಳ ನೀಡುತ್ತಿದ್ದೇನೆ. ಈಗ ನನ್ನ ಉಳಿತಾಯದ ಹಣವೂ ಕರಗುತ್ತಿದೆ. ದೊಡ್ಡ ಗಾರ್ಮೆಂಟ್ ಕಂಪನಿಗಳಿಂದ ನನಗೆ ಆರ್ಡರ್‌ಗಳು ದೊರೆಯುವಂತೆ ನೀವು ನನಗೆ ಸಹಾಯ ಮಾಡಬಲ್ಲಿರಾ?

ದೇಶದಲ್ಲಿ ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಮತ್ತೆಲ್ಲ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಎಲ್ಲ ಪ್ರಮುಖ ಗಾರ್ಮೆಂಟ್ ತಯಾರಿಕಾ ಕಂಪನಿಗಳ ವ್ಯವಹಾರಕ್ಕೂ ತೊಂದರೆಯಾಗಿದೆ. ಮೇಲಾಗಿ ಈ ಗಾರ್ಮೆಂಟ್ ಕಂಪನಿಗಳ ಬಳಿಯಲ್ಲಿಯೂ ಯಾವುದೇ ಕೆಲಸವಿಲ್ಲದ ಕಾರ್ಮಿಕರಿದ್ದಾರೆ. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ಗಾರ್ಮೆಂಟ್ ಕಂಪನಿಗಳೊಂದಿಗೆ ಮಾರುಕಟ್ಟೆ ಹೊಂದಾಣಿಕೆಯ ಅವಕಾಶಗಳು ಬಹಳ ಕಡಿಮೆ. ಇದರ ಬದಲಾಗಿ, ಸಣ್ಣ ಪಟ್ಟಣಗಳಲ್ಲಿ ಹೋಮ್ ಫರ್ನಿಷಿಂಗ್, ಮಕ್ಕಳ ಉಡುಗೆ-ತೊಡುಗೆ, ಜೀನ್ಸ್ ಇತ್ಯಾದಿಗಳನ್ನು ಮಾರಾಟ ಮಾಡುವ ರಿಟೇಲ್ ಅಂಗಡಿಗಳಿಗೆ ಸರಕು ಒದಗಿಸಬಹುದಾಗಿದೆ. ಮುಖಗವಸು, ಕೈಗವಸುಗಳು ಮತ್ತು ಇತ್ಯಾದಿ ವೈಯಕ್ತಿಕ ಸುರಕ್ಷತೆಗಾಗಿ ಬಳಸುವ ದಿರಿಸುಗಳನ್ನು ತಯಾರು ಮಾಡಬಹುದಾಗಿದೆ. ಪ್ರಸ್ತುತ ಮಾರುಕಟ್ಟೆ ಬೇಡಿಕೆ ಗಮನಿಸಿದಾಗಿ ಈ ರೀತಿಯ ಉತ್ಪನ್ನಗಳು ನಿಮಗೆ ಹೊಸ ಗ್ರಾಹಕರನ್ನು ಒದಗಿಸುತ್ತವೆ. ನೀವು ತಯಾರು ಮಾಡುವ ಮಾಸ್ಕ್ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಥಳೀಯ ಅಂಗಡಿಗಳನ್ನು ನೀವು ಸಂಪರ್ಕಿಸಬಹುದಾಗಿದೆ.

***

ರವೀಂದ್ರನ್, ಕೊಪ್ಪಳ

ಪ್ರಶ್ನೆ: ನಾನು ವೃತ್ತಿಯಿಂದ ಬಡಗಿಯಾಗಿದ್ದು, ಐದು ಜನ ನನ್ನೊಂದಿಗೆ ಕೆಲಸ ಮಾಡುತ್ತಾರೆ. ಹಲವಾರು ವರ್ಷಗಳಿಂದ ನಾನು ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿಗಳನ್ನು ತಯಾರು ಮಾಡುತ್ತಿದ್ದೇನೆ. ಸರ್ಕಾರಿ ಕಚೇರಿಗಳಿಗೆ ಈ ಉತ್ಪನ್ನಗಳನ್ನು ಸರಬರಾಜು ಮಾಡಲು ನಾನು ಯಾವ ಕ್ರಮ ತೆಗೆದುಕೊಳ್ಳಬೇಕು?

ಸರ್ಕಾರದ ಖರೀದಿ ನೀತಿ ಪ್ರಕಾರ, ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು / ಇಲಾಖೆಗಳು ತಮಗೆ ಅವಶ್ಯಕವಾಗಿರುವ ಸಾಮಗ್ರಿ ಮತ್ತು ಸೇವೆಗಳ ಪೈಕಿ ಶೇಕಡಾ 25 ರಷ್ಟನ್ನು ಸರ್ಕಾರಿ ಉದ್ದಿಮೆಗಳು / ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಂದ ಪಡೆಯತಕ್ಕದ್ದು. ಸರ್ಕಾರಿ ಸಂಸ್ಥೆಗಳು ಈ ಖರೀದಿಯನ್ನು ಇಮಾರ್ಕೆಟ್ ಪ್ಲೇಸ್ ಎಂಬ ವೆಬ್‌ಸೈಟ್‌ ಮೂಲಕ ಮಾಡುತ್ತವೆ. ಸರ್ಕಾರಕ್ಕೆ ಸೇವೆ ಒದಗಿಸಲಿಚ್ಛಿಸುವ ಸಂಸ್ಥೆಗಳು ಈ ಜಾಲತಾಣದಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳತಕ್ಕದ್ದು. ಸಾಮಗ್ರಿಗಳನ್ನು ಖರೀದಿಸುವ ಅಥವಾ ಸೇವೆಗಳನ್ನು ಬಳಸಿಕೊಳ್ಳಲು ಆಸಕ್ತಿ ಇರುವ ಸರ್ಕಾರಿ ಇಲಾಖೆ / ಸಂಸ್ಥೆಗಳು ಈ ಜಾಲತಾಣದಲ್ಲಿ ಅತಿ ಕಡಿಮೆ ದರ ನಮೂದಿಸಿರುವ ಸಂಸ್ಥೆಗಳ ಮೂಲಕ ಖರೀದಿ ಮಾಡುತ್ತವೆ. ನೀವು https://gem-registration.in/ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT