ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಎಸ್‌ಎಂಇ’ ಉದ್ಯಮ ಸಲಹೆ | ಕಡಿಮೆ ಬಂಡವಾಳದೊಂದಿಗೆ ವ್ಯವಹಾರ ಪ್ರಾರಂಭಿಸಬಹುದೇ?

Last Updated 21 ಜುಲೈ 2020, 19:31 IST
ಅಕ್ಷರ ಗಾತ್ರ

ಪ್ರಶ್ನೆ:ನಾನು ಇತ್ತೀಚೆಗಷ್ಟೇ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಉದ್ಯೋಗ ದೊರಕುವುದು ದುಸ್ತರವಾಗಿದೆ. ನಾನು ಉದ್ಯೋಗಕ್ಕಾಗಿ ಯಾರನ್ನು ಭೇಟಿ ಮಾಡಿದರೂ 3-4 ತಿಂಗಳ ನಂತರ ಬರುವಂತೆ ತಿಳಿಸುತ್ತಿದ್ದಾರೆ. ನಾನು ಆರ್ಥಿಕವಾಗಿ ಸ್ಥಿತಿವಂತ ಕುಟುಂಬಕ್ಕೆ ಸೇರಿದವನಲ್ಲ. ನನ್ನ ವಿದ್ಯಾಭ್ಯಾಸಕ್ಕಾಗಿ ನಾನು ಸಾಲ ಪಡೆದಿದ್ದು, ಅದರ ಮರುಪಾವತಿ ಪ್ರಾರಂಭಿಸಬೇಕಿದೆ. ನನಗೆ ಉದ್ಯೋಗ ದೊರಕುವವರೆಗೂ ಸಾಲ ಮರುಪಾವತಿ ಮುಂದೂಡಬಹುದೇ? ಅತಿ ಕಡಿಮೆ ಬಂಡವಾಳದೊಂದಿಗೆ (₹ 10,000- ₹ 15,000) ಯಾವುದಾದರೂ ವ್ಯವಹಾರ ಪ್ರಾರಂಭಿಸಬಹುದೇ? ನಾನು ಯಾವ ವ್ಯವಹಾರ ಮಾಡಬಹುದು?
–ಬಾಬು, ಗದಗ

ಉತ್ತರ: ಹೌದು. ಸಾಕಷ್ಟು ಸಂಖ್ಯೆಯ ಯುವಕರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲನೆಯದಾಗಿ, ನೀವು ನಿಮ್ಮ ಬ್ಯಾಂಕಿಗೆ ತೆರಳಿ ಸಾಲ ಮರುಪಾವತಿಗಾಗಿ ದೀರ್ಘಾವಧಿಯ ಸಮಯಾವಕಾಶ ಕೋರಿ. ಪ್ರಸ್ತುತ ಸನ್ನಿವೇಶದಲ್ಲಿ ಬ್ಯಾಂಕು ನಿಮ್ಮ ಕೋರಿಕೆ ಮನ್ನಿಸುತ್ತದೆ. ಎರಡನೆಯದಾಗಿ, ಈ ಸಮಯವನ್ನು ನಿಮ್ಮ ಕೌಶಲಗಳನ್ನು ಹರಿತಗೊಳಿಸಿಕೊಳ್ಳಲು ಬಳಸಿಕೊಳ್ಳಿ. ಆರ್ಥಿಕ ಪರಿಸ್ಥಿತಿಯು ನಿಧಾನವಾಗಿ ಸುಧಾರಿಸುತ್ತಿದ್ದಂತೆಯೇ ಹಲವಾರು ಕಂಪನಿಗಳು ನೇಮಕಾತಿಯನ್ನು ಪ್ರಾರಂಭಿಸುತ್ತವೆ ಮತ್ತು ತಾಂತ್ರಿಕ ಶಿಕ್ಷಣ ಪಡೆದಿರುವ ನಿಮಗೆ ಆಗ ಹಲವು ಉತ್ತಮ ಅವಕಾಶಗಳು ದೊರೆಯುತ್ತವೆ. ಕಡಿಮೆ ಬಂಡವಾಳದಿಂದ ಪ್ರಾರಂಭಿಸಬಹುದಾದ ವ್ಯವಹಾರಗಳೆಂದರೆ – ಆನ್‌ಲೈನ್ ಟ್ಯೂಷನ್, ಟೆಲಿಮಾರ್ಕೆಟಿಂಗ್, ಕೇಟರಿಂಗ್ ಇತ್ಯಾದಿ ಸೇವೆಗಳನ್ನು ಒದಗಿಸುವುದು. ವ್ಯಾಪಾರ ಮಾಡುವ ಅವಕಾಶಗಳಿದ್ದರೂ ಲಾಕ್‌ಡೌನ್ ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಅವು ಸೂಕ್ತವಲ್ಲ.

**
ಪ್ರಶ್ನೆ:ನನ್ನ ಪತಿ ಆಹಾರ ಸಂಸ್ಕರಣ ಘಟಕ ನಡೆಸುತ್ತಿದ್ದರು. ನಮ್ಮಲ್ಲಿ 10 ಜನ ಕೆಲಸಗಾರರಿದ್ದಾರೆ. ನನ್ನ ಪತಿಯವರ ಅಕಾಲಿಕ ಮರಣದ ನಂತರ ನಾನು ಉದ್ಯಮವನ್ನು ಕಳೆದ ಎಂಟು ತಿಂಗಳುಗಳಿಂದ ನಡೆಸುತ್ತಿದ್ದೇನೆ. ನಾನು ಈ ಉದ್ಯಮವನ್ನು ವಿಸ್ತರಿಸುವ ಯೋಜನೆ ಹೊಂದಿದ್ದೇನೆ. ನಾನು ಮಹಿಳೆಯಾಗಿರುವುದರಿಂದ ಯಂತ್ರೋಪಕರಣಗಳನ್ನು ಖರೀದಿಸಲು ನನಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆಯೇ? ಅಂತಹ ಯೋಜನೆಗಳಿಂದ ಪ್ರಯೋಜನ ಪಡೆಯಲು ಅನುಸರಿಸಬೇಕಾದ ವಿಧಾನಗಳೇನು?
ಅಮೃತ, ಮಂಡ್ಯ

ಉತ್ತರ: ನಿಮ್ಮ ಪತಿಯವರ ನಿಧನ ವಿಷಾದನೀಯ. ಇಂತಹ ಪರಿಸ್ಥಿತಿಯಲ್ಲಿಯೂ ಉದ್ಯಮವನ್ನು ಮುಂದುವರಿಸಿರುವ ಹಲವಾರು ಮಹಿಳೆಯರನ್ನು ನಾವು ಕಂಡಿದ್ದೇವೆ. ಮಹಿಳೆಯರಿಗಾಗಿ ಅನ್ನಪೂರ್ಣ, ಸ್ತ್ರೀ ಶಕ್ತಿ ಯೋಜನೆ, ಓರಿಯಂಟ್ ಮಹಿಳಾ ಯೋಜನೆ, ಪಿಎನ್‌ಬಿ ಮಹಿಳಾ ನಿಧಿ ಯೋಜನೆ, ದೇನಾ ಶಕ್ತಿ, ಸೆಂಟ್ ಕಲ್ಯಾಣಿ ಇತ್ಯಾದಿ ಯೋಜನೆಗಳು ಬ್ಯಾಂಕುಗಳಲ್ಲಿ ಲಭ್ಯ. ಈ ಪೈಕಿ ಹಲವಾರು ಯೋಜನೆಗಳನ್ನು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಕರ್ಷಣೀಯ ಸೌಲಭ್ಯಗಳೊಂದಿಗೆ ಒದಗಿಸಲಾಗುತ್ತಿದೆ. ನಿಮ್ಮ ಆಹಾರ ಸಂಸ್ಕರಣ ಉದ್ಯಮದ ಬ್ಯಾಂಕ್ ವಹಿವಾಟು ಉತ್ತಮವಾಗಿದ್ದಲ್ಲಿ ಈ ಯೋಜನೆಗಳಲ್ಲಿ ನಿಮಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಹೊಸ ಉದ್ಯಮಗಳಿಗಾಗಿಯೇ ಕೇಂದ್ರ ಸರ್ಕಾರವು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯನ್ನು ಜಾರಿಗೆ ತಂದಿದೆ. ಮೇಲಾಗಿ ಟ್ರೆಡ್ (TREAD - Trade Related Entrepreneurship Assistance and Development) – ವ್ಯಾಪಾರಕ್ಕೆ ಸಂಬಂಧಿಸಿದ ಉದ್ಯಮಶೀಲತೆಗೆ ನೆರವು ಮತ್ತು ಅಭಿವೃದ್ಧಿ – ಎಂಬ ಯೋಜನೆ ಕೂಡ ಮಹಿಳಾ ಉದ್ಯಮಿಗಳಿಗೇ ಮೀಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ, ತರಬೇತಿ ಮತ್ತು ಸಮಾಲೋಚನೆ ಸೇವೆಗಳನ್ನು ಒದಗಿಸುವುದರ ಮೂಲಕ ಮಹಿಳಾ ಸಬಲೀಕರಣ ಸಾಧಿಸುವುದು ಈ ಯೋಜನೆಯ ಉದ್ದೇಶ. ಸಾಲ ನೀಡುವ ಸಂಸ್ಥೆಗಳು ನಿರ್ಧರಿಸಿದ ಯೋಜನಾ ವೆಚ್ಚದ ಶೇಕಡ 30ರಷ್ಟು ಮೊತ್ತವನ್ನು ಸರ್ಕಾರವು ನೆರವಿನ ರೂಪದಲ್ಲಿ ನೀಡುತ್ತದೆ. ಈ ಯೋಜನೆಯಡಿ ತರಬೇತಿ ಕಡ್ಡಾಯ. ನೀವು ಗರಿಷ್ಟ ₹ 12 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ಪಡೆಯಬಹುದಾಗಿದೆ.

**
ಪ್ರಶ್ನೆ:ನಾವು ಸಾವಯವ ಅಕ್ಕಿಯನ್ನು ಖರೀದಿಸಿ, ಸಂಸ್ಕರಣ ಮಾಡಿ ಉತ್ಪನ್ನವನ್ನು ಬ್ರಾಂಡ್ ಮಾಡಿದ ಹೆಸರಿನಲ್ಲಿ ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತೇವೆ. ಕೋವಿಡ್ ಸಾಂಕ್ರಾಮಿಕ ಹರಡುವ ಮೊದಲು ನಾವು ಉತ್ಪನ್ನ ರಫ್ತು ಮಾಡುವ ಯೋಜನೆ ಹೊಂದಿದ್ದೆವು. ಪ್ರಸ್ತುತ ಸನ್ನಿವೇಶದಲ್ಲಿ ಖರೀದಿದಾರರನ್ನು ಭೇಟಿ ಮಾಡುವ ಉದ್ದೇಶಕ್ಕಾಗಿ ವಿದೇಶ ಪ್ರಯಾಣ ಮಾಡುವುದು ಅಸಾಧ್ಯ. ಇಂತಹ ಸಂದರ್ಭದಲ್ಲಿ ವಿದೇಶಗಳಲ್ಲಿರುವ ಖರೀದಿದಾರರನ್ನು ಗುರುತಿಸುವ ಬಗೆ ಹೇಗೆ?
ಸಮಯ್, ಬೆಳಗಾವಿ

ಉತ್ತರ: ವಿಶ್ವದಲ್ಲಿ ದೊರಕುವ ಎಲ್ಲ ಬಗೆಯ ಅಕ್ಕಿಗಳ ಪೈಕಿ ಬಾಸ್ಮತಿ ಮತ್ತು ಬ್ರೌನ್ ರೈಸ್ ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (The Agricultural and Processed Food Products Export Development Authority - APEDA) ಹಲವಾರು ಕೃಷಿ ಉತ್ಪನ್ನಗಳ ರಫ್ತು ಮತ್ತು ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದೆ. ಈ ಸಂಸ್ಥೆಯು ರಫ್ತುದಾರರೊಂದಿಗೆ ಸಂಪರ್ಕದಲ್ಲಿದ್ದು, ಹಲವಾರು ಕಾರ್ಯಕ್ರಮಗಳ ಮೂಲಕ ಬೆಂಬಲ ನೀಡುತ್ತದೆ. ಮಾರ್ಗದರ್ಶನಕ್ಕಾಗಿ ನೀವು ಈ ಸಂಸ್ಥೆಯನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT