ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತೂಟ್‌ ಬ್ಲ್ಯೂನ ಅಗ್ಗದ ಗೃಹ ವಿಮೆ

Last Updated 4 ಜೂನ್ 2019, 19:31 IST
ಅಕ್ಷರ ಗಾತ್ರ

ಹಿಂದಿನ ವರ್ಷ ಸುರಿದ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಯಿಂದ ರಾಜ್ಯದ ಮಡಿಕೇರಿ ಮತ್ತು ನೆರೆಯ ರಾಜ್ಯ ಕೇರಳದಲ್ಲಿ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದರು. ಮನೆ – ಮಠ ಕಳೆದುಕೊಂಡು ಬೀದಿ ಪಾಲಾದರು. ಪ್ರವಾಹ, ಸುನಾಮಿ, ಭೂಕಂಪದಂತಹ ನೈಸರ್ಗಿಕ ಪ್ರಕೋಪಗಳಲ್ಲಿ ಜನರು ಹತ್ತಾರು ಸಂಕಷ್ಟಗಳಿಗೆ ಗುರಿಯಾಗುತ್ತಾರೆ. ಸೂರು ಕಳೆದುಕೊಂಡು ಬೀದಿಗೆ ಬಂದು ನಿಲ್ಲುತ್ತಾರೆ. ಹೊಸ ಬದುಕು ಕಟ್ಟಿಕೊಳ್ಳಲು ಬಳಿಯಲ್ಲಿ ಬಿಡಿಗಾಸೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮನೆ, ಮನೆಯಲ್ಲಿನ ಚಿನ್ನಾಭರಣ, ಬೆಲೆಬಾಳುವ ಸರಕುಗಳಿಗೆ ವಿಮೆ ಇಳಿಸಿದ್ದರೆ ಹೊಸ ಬದುಕು ಕಟ್ಟಿಕೊಳ್ಳುವುದು ಸುಲಭವಾಗುತ್ತದೆ. ಜನಸಾಮಾನ್ಯರ ಇಂತಹ ಅಗತ್ಯ ಈಡೇರಿಸುವ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಮುತ್ತೂಟ್‌ ಫಿನ್‌ಕಾರ್ಪ್‌, ‘ಮುತ್ತೂಟ್‌ ಬ್ಲ್ಯೂ ಹೋಂ ಇನ್ಶೂರೆನ್ಸ್‌’ ಯೋಜನೆ ಜಾರಿಗೆ ತಂದಿದೆ.

ಗೃಹ ವಿಮೆ ಕ್ಷೇತ್ರದಲ್ಲಿ ಹೆಚ್ಚಿನ ವಿಮೆ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿಲ್ಲ. ಸಾಮಾಜಿಕ ಮತ್ತು ಆರ್ಥಿಕವಾಗಿ ತಳಮಟ್ಟದಲ್ಲಿರುವ ಬಹುತೇಕ ಕುಟುಂಬಗಳು ನೈಸರ್ಗಿಕ ಪ್ರಕೋಪಗಳಿಂದ ಮನೆ ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತವೆ. ದೇಶದಲ್ಲಿ ಗೃಹ ವಿಮೆಗೆ ಸಂಬಂಧಿಸಿದ ಉತ್ಪನ್ನಗಳೂ ಸಾಕಷ್ಟಿಲ್ಲ. ವಿಮೆ ಪಡೆಯುವ ಪ್ರಕ್ರಿಯೆ ಸಂಕೀರ್ಣವಾಗಿರುವ ಅಥವಾ ಕೈಗೆಟುಕದೇ ಇರುವ ಕಾರಣಕ್ಕೆ ವಿಮೆ ಸೌಲಭ್ಯವೂ ಕನಿಷ್ಠ ಮಟ್ಟದಲ್ಲಿ ಇದೆ. ಈ ಅಂತರ ತುಂಬಲು ಈ ವಿಮೆ ಯೋಜನೆ ಜಾರಿಗೆ ತರಲಾಗಿದೆ.

ಪ್ರತಿ ವರ್ಷ ನವೀಕರಣ

‘ನೈಸರ್ಗಿಕ ಪ್ರಕೋಪ ಅಲ್ಲದೆ, ಕಳ್ಳತನ, ಬೆಂಕಿ ಅನಾಹುತ ಸಂದರ್ಭದಲ್ಲಿಯೂ ವಿಮೆ ಪರಿಹಾರ ಲಭ್ಯ ಇದೆ. ಮನೆಯ ಯಜಮಾನ ಆಕಸ್ಮಿಕವಾಗಿ ಮೃತಪಟ್ಟರೆ ಕುಟುಂಬಕ್ಕೆ ₹ 1ಲಕ್ಷದ ಪರಿಹಾರವೂ ಇಲ್ಲಿ ದೊರೆಯಲಿದೆ. ಈ ಗೃಹ ವಿಮೆಯನ್ನು ಪ್ರತಿ ವರ್ಷ ನವೀಕರಿಸಬೇಕು. ಅತಿ ಕಡಿಮೆ ಕಂತು. ಕಡಿಮೆ ದಾಖಲೆ ಮತ್ತು ತುಂಬ ಸರಳ ಬಗೆಯಲ್ಲಿ ವಿಮೆ ಪರಿಹಾರ ವಿತರಣೆ – ಇವು ಈ ಯೋಜನೆಯ ಪ್ರಮುಖ ಲಕ್ಷಣಗಳಾಗಿವೆ’ ಎಂದು ಮುತ್ತೂಟ್ ಫಿನ್‍ಕಾರ್ಪ್ ಲಿಮಿಟೆಡ್‍ನ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಶ್ರೀರಾಂ ಕುಮಾರ್ ಹೇಳುತ್ತಾರೆ.

‘135 ವರ್ಷದ ಹಳೆಯ ಸಂಸ್ಥೆಯಾಗಿರುವ ಮುತ್ತೂಟ್‌ ಫಿನ್‌ ಕಾರ್ಪ್‌, ಗ್ರಾಮೀಣ ಭಾಗದಲ್ಲಿ ವ್ಯಾಪಕ ಜಾಲ ಹೊಂದಿದೆ. ಗ್ರಾಮೀಣ ಜನರ ಮನಸ್ಥಿತಿಯನ್ನು ಸಂಸ್ಥೆಯು ಚೆನ್ನಾಗಿ ಅರ್ಥೈಸಿಕೊಂಡಿದೆ.

ವಿಮೆ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಸಂಸ್ಥೆಯು, ಜೀವ ವಿಮೆ ಮತ್ತು ಸಾಮಾನ್ಯ ವಿಮೆ ಸೌಲಭ್ಯ ಒದಗಿಸುತ್ತಿದೆ. ಸಣ್ಣ ಕಿರಾಣಿ ಅಂಗಡಿ ಮಾಲೀಕರು, ತರಕಾರಿ ಮಾರುವವರು, ಬೀದಿ ಬದಿ ವ್ಯಾಪಾರಿಗಳಿಗೆ ಅಗ್ಗದ ಮತ್ತು ಸರಳ ವಿಮೆ ಸೌಲಭ್ಯ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ.

ಪ್ರತ್ಯೇಕ ವಿಮೆ ಯೋಜನೆ

‘ಸ್ವಂತ ಮನೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ – ಹೀಗೆ ಎರಡು ಪ್ರತ್ಯೇಕ ವಿಮೆ ಯೋಜನೆಗಳನ್ನು ಸಂಸ್ಥೆ ಪರಿಚಯಿಸಿದೆ. ಸ್ವಂತ ಮನೆಯ ವಿಮೆ ಯೋಜನೆಯಲ್ಲಿ ಕಟ್ಟಡಕ್ಕೆ ಮಾತ್ರ ವಿಮೆ ಒದಗಿಸಲಾಗುತ್ತದೆ. ವರ್ಷಕ್ಕೆ₹ 10 ಲಕ್ಷದಿಂದ ₹ 1ಕೋಟಿವರೆಗೆ ವಿಮೆ ಇಳಿಸಬಹುದು. ಬೆಂಕಿ, ಪ್ರವಾಹ, ಸುನಾಮಿ, ಭೂಕಂಪದಂತಹ ಸಂದರ್ಭದಲ್ಲಿ ಕಟ್ಟಡಕ್ಕೆ ಆಗುವ ಹಾನಿ ತುಂಬಿ ಕೊಡುವ ವಿಮೆ ಯೋಜನೆ ಇದಾಗಿದೆ. ಒಂದು ವೇಳೆ ಕಟ್ಟಡ ಸಂಪೂರ್ಣ ನಾಶವಾದರೆ ವಿಮೆಯ ಪೂರ್ಣ ಮೊತ್ತ ಪಾವತಿಸಲಾಗುವುದು. ಭಾಗಶಃ ನಾಶವಾಗಿದ್ದರೆ ದುರಸ್ತಿಗೆ ಹಣ ನೀಡಲಾಗುವುದು.

‘ಕಟ್ಟಡಕ್ಕೆ ₹ 10 ಲಕ್ಷ, ಮನೆಯಲ್ಲಿನ ಪೀಠೋಪಕರಣಗಳಿಗೆ ₹ 2.5 ಲಕ್ಷ, ಕಳ್ಳತನದ ವಿರುದ್ಧ ರಕ್ಷಣೆಗೆ ₹ 2.50 ಲಕ್ಷ, ಚಿನ್ನಾಭರಣಗಳ ಕಳ್ಳತನ ವಿರುದ್ಧ ₹ 50 ಸಾವಿರ, ವಿಮೆ ಖರೀದಿಸಿದ ಮನೆ ಯಜಮಾನ ಆಕಸ್ಮಿಕವಾಗಿ ನಿಧನರಾದರೆ ₹ 1 ಲಕ್ಷ ಪರಿಹಾರ – ಹೀಗೆ ಬೇರೆ, ಬೇರೆ ವಿಮೆ ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿರುತ್ತದೆ. ಕಟ್ಟಡದ ಮೌಲ್ಯ ಆಧರಿಸಿ ಬೇರೆ, ಬೇರೆ ಮೊತ್ತದ ವಿಮೆ ಪಡೆದುಕೊಳ್ಳಬಹುದು.

‘ಮನೆಯಲ್ಲಿನ ಟಿವಿ, ಫ್ರಿಜ್‌, ಕಂಪ್ಯೂಟರ್‌ಗಳು ವಿದ್ಯುತ್‌ ಏರಿಳಿತದಿಂದ ಕೆಟ್ಟು ಹೋದರೆ, ಸೇವಾ ಕೇಂದ್ರಗಳು ನಿಗದಿಪಡಿಸುವ ದುರಸ್ತಿ ವೆಚ್ಚದಲ್ಲಿ ಸವಕಳಿ ಕಳೆದು ಉಳಿದ ಮೊತ್ತವನ್ನು ಮರಳಿಸುವ ಸೌಲಭ್ಯ ಇಲ್ಲಿದೆ.

‘ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಕಟ್ಟಡ ಹೊರತುಪಡಿಸಿ, ಮನೆಯಲ್ಲಿನ ಬೆಲೆಬಾಳುವ ಸರಕುಗಳಿಗೆ ವಿಮೆ ಸೌಲಭ್ಯ ಒದಗಿಸಲಾಗುವುದು. ಈ ಎರಡೂ ಬಗೆಯ ವಿಮೆಯಲ್ಲಿ ವರ್ಷಕ್ಕೆ ಕಂತಿನ ಮೊತ್ತ ₹ 699 ದಿಂದ ₹ 3,499ವರೆಗೆ ಇರಲಿದೆ. ಕಡಿಮೆ ಆದಾಯದ ವರ್ಗದವರಿಗೆ ಕೈಗೆಟುಕುವ ದರದ ದೇಶದ ಏಕೈಕ ವಿಶಿಷ್ಟ ಗೃಹ ವಿಮೆ ಇದಾಗಿದೆ. ಜನ ಸಾಮಾನ್ಯರಿಗಾಗಿಯೇ ಈ ಯೋಜನೆ ರೂಪಿಸಲಾಗಿದೆ. ಶ್ರೀಮಂತರೂ ವಿಮೆ ಪ್ರಯೋಜನ ಪಡೆಯಬಹುದು. ಅವರಿಗಾಗಿ ಬೇರೆ ಯೋಜನೆಗಳಿವೆ’ ಎಂದು ಶ್ರೀರಾಂ ಕುಮಾರ್‌ ಹೇಳುತ್ತಾರೆ.

‘ವಿಮೆ ಪರಿಹಾರ ಪಡೆಯುವಾಗ ಮಾತ್ರ ಮನೆಯ ದಾಖಲೆಗಳು ಅಗತ್ಯವಾಗಿ ಬೇಕಾಗುತ್ತವೆ. ಮನೆಯಲ್ಲಿ ಕಳ್ಳತನ ನಡೆದಾಗ ಎಫ್‌ಐಆರ್ ಆಧರಿಸಿ ಮತ್ತು ಕಳ್ಳತನ ಪತ್ತೆಯಾಗದೆ 6 ತಿಂಗಳು ಕಳೆದ ನಂತರ ಪರಿಹಾರದ ಮೊತ್ತ ನೀಡಲಾಗುವುದು. ಸಂಸ್ಥೆಯು ಆರೋಗ್ಯ ವಿಮೆ ಸೌಲಭ್ಯವನ್ನೂ ಪರಿಚಯಿಸಿದೆ.

‘ಗ್ರಾಮೀಣ ಪ್ರದೇಶದಲ್ಲಿನ ಸಾಮಾನ್ಯ ವಿಮೆ ಅಗತ್ಯಗಳನ್ನು ಈಡೇರಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ದೇಶದಾದ್ಯಂತ ವಿಸ್ತರಿಸಲಾಗಿದೆ. ಯಾರೇ ಆದರೂ ಈ ವಿಮೆ ಪಡೆಯಬಹುದು. ವರ್ಷಕ್ಕೆ ₹ 600 ರಿಂದ ₹ 700 ಪಾವತಿಸಿ ಅಂದರೆ, ಪ್ರತಿ ದಿನ ₹ 2 ಲೆಕ್ಕದಲ್ಲಿ ವಿಮೆ ಸೌಲಭ್ಯ ಪಡೆದು, ಮನೆ ಮತ್ತು ಮನೆಯಲ್ಲಿನ ಬೆಲೆ ಬಾಳುವ ಸ್ವತ್ತುಗಳ ಸುರಕ್ಷತೆ ಬಗ್ಗೆ ನೆಮ್ಮದಿಯಿಂದ ಇರಬಹುದು’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT