ಭಾನುವಾರ, ಮೇ 29, 2022
30 °C

ಬ್ಯಾಡ್‌ ಬ್ಯಾಂಕ್ ಆರಂಭಕ್ಕೆ ಅನುಮೋದನೆ ಪೂರ್ಣ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬ್ಯಾಡ್ ಬ್ಯಾಂಕ್ ಅಥವಾ ರಾಷ್ಟ್ರೀಯ ಆಸ್ತಿ ಪುನರ್‌ರಚನಾ ಕಂಪನಿಯು (ಎನ್‌ಎಆರ್‌ಸಿಎಲ್‌) ಕಾರ್ಯಾಚರಣೆ ಆರಂಭಿಸಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದುಕೊಂಡಿದ್ದು, ಒಟ್ಟು 38 ಎನ್‌ಪಿಎ (ಅನುತ್ಪಾದಕ ಸಾಲ) ಖಾತೆಗಳು ಈ ಕಂಪನಿಗೆ ವರ್ಗಾವಣೆ ಆಗಲಿವೆ.

ಇಷ್ಟು ಖಾತೆಗಳಲ್ಲಿನ ಸಾಲದ ಒಟ್ಟು ಮೊತ್ತವು ₹ 82,845 ಕೋಟಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅಧ್ಯಕ್ಷ ದಿನೇಶ್ ಖರಾ ಹೇಳಿದ್ದಾರೆ. 38 ಎನ್‌ಪಿಎ ಖಾತೆಗಳನ್ನು ಕಂಪನಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯಲಿದೆ. ಮೊದಲ ಹಂತದಲ್ಲಿ ಮಾರ್ಚ್‌ಗೆ ಮುನ್ನ ಒಟ್ಟು 15 ಎನ್‌ಪಿಎ ಖಾತೆಗಳನ್ನು ಕಂಪನಿಗೆ ವರ್ಗಾವಣೆ ಮಾಡಲಾಗುತ್ತದೆ. ಇಷ್ಟು ಖಾತೆಗಳಲ್ಲಿನ ಸಾಲದ ಒಟ್ಟು ಮೊತ್ತವು ₹ 50 ಸಾವಿರ ಕೋಟಿ.

ಇಂಡಿಯಾ ಡೆಟ್ ರೆಸಲ್ಯೂಷನ್ ಕಂಪನಿ ಲಿ. (ಐಡಿಆರ್‌ಸಿಎಲ್‌) ಕೂಡ ಕಾರ್ಯಾಚರಣೆ ಆರಂಭಿಸಲು ಅಗತ್ಯವಿರುವ ಅನುಮೋದನೆಗಳನ್ನು ಪಡೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಈ ಕಂಪನಿಯು ಅನುತ್ಪಾದಕ ಆಸ್ತಿಗಳನ್ನು ನಿರ್ವಹಿಸಲಿದ್ದು, ಇದಕ್ಕೆ ಮಾರುಕಟ್ಟೆ ತಜ್ಞರ ನೆರವು ಪಡೆಯಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ನೇ ಸಾಲಿನ ಬಜೆಟ್ ಭಾಷಣದಲ್ಲಿ, ಬ್ಯಾಡ್ ಬ್ಯಾಂಕ್ ಆರಂಭಿಸುವ ಘೋಷಣೆ ಮಾಡಿದ್ದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಅಂದಾಜು ₹ 2 ಲಕ್ಷ ಕೋಟಿ ಮೊತ್ತದ ಅನುತ್ಪಾದಕ ಸಾಲದ ಸಮಸ್ಯೆಯನ್ನು ಬ್ಯಾಡ್ ಬ್ಯಾಂಕ್ ಮೂಲಕ ಇತ್ಯರ್ಥಪಡಿಸುವುದಾಗಿಯೂ ಅವರು ಹೇಳಿದ್ದರು.

₹ 2 ಲಕ್ಷ ಕೋಟಿಯಲ್ಲಿ ಒಂದಿಷ್ಟು ಮೊತ್ತವು ಕಳೆದು ಒಂದು ವರ್ಷದ ಅವಧಿಯಲ್ಲಿ ಇತ್ಯರ್ಥ ಕಂಡಿದೆ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಜೆ. ಸ್ವಾಮಿನಾಥನ್ ಹೇಳಿದ್ದಾರೆ. ಎನ್‌ಎಆರ್‌ಸಿಎಲ್‌ನ ಬಹುಪಾಲು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹೊಂದಿವೆ. ಐಡಿಆರ್‌ಸಿಎಲ್‌ನ ಬಹುಪಾಲು ಷೇರುಗಳು ಖಾಸಗಿ ಬ್ಯಾಂಕ್‌ಗಳ ಕೈಯಲ್ಲಿ ಇವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.