ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಪ್ಟೊ ಕರೆನ್ಸಿ ಸುರಕ್ಷತೆಗೆ ಸಹಕಾರಕ್ಕೆ ಪ್ರಧಾನಿ ಮೋದಿ ಆಗ್ರಹ

Last Updated 18 ನವೆಂಬರ್ 2021, 15:30 IST
ಅಕ್ಷರ ಗಾತ್ರ

ಮುಂಬೈ: ಬಿಟ್‌ಕಾಯಿನ್‌ ಹಾಗೂ ಅದರಂತಹ ಇತರ ಕ್ರಿಪ್ಟೊ ಕರೆನ್ಸಿಗಳು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು ಜಗತ್ತಿನ ಪ್ರಜಾತಂತ್ರ ದೇಶಗಳು ಪರಸ್ಪರ ಸಹಕಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಾಯಿಸಿದರು.

ಸೈಬರ್ ತಂತ್ರಜ್ಞಾನ ಕುರಿತ ‘ಸಿಡ್ನಿ ಡಯಲಾಗ್’ ವೇದಿಕೆಯಲ್ಲಿ ವರ್ಚುವಲ್ ಆಗಿ ಭಾಷಣ ಮಾಡಿದ ಮೋದಿ ಅವರು ಈ ಮಾತು ಹೇಳಿದರು. ಕ್ರಿಪ್ಟೊ ಕರೆನ್ಸಿಗಳನ್ನು ಭಯೋತ್ಪಾದಕ ಸಂಘಟನೆಗಳು ಹಾಗೂ ಸಂಘಟಿತ ಅಪರಾಧ ಎಸಗುವ ಗುಂಪುಗಳು ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಆತಂಕ ವ್ಯಕ್ತವಾಗಿದೆ. ಇಂತಹ ಕ್ರಿಪ್ಟೊ ಕರೆನ್ಸಿಗಳು ಅರ್ಥ ವ್ಯವಸ್ಥೆಗಳನ್ನು ಅಸ್ಥಿರಗೊಳಿಸುವ ಅಪಾಯವನ್ನೂ ತಂದೊಡ್ಡಿವೆ ಎಂಬ ಕಳವಳ ಕೂಡ ವ್ಯಕ್ತವಾಗಿದೆ.

‘ಕ್ರಿ‍ಪ್ಟೊ ಕರೆನ್ಸಿಗಳು ನಮ್ಮ ಯುವಕರನ್ನು ಹಾಳು ಮಾಡಬಲ್ಲವು. ಇವು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳುವುದು ಮುಖ್ಯ’ ಎಂದು ಮೋದಿ ಅವರು ಹೇಳಿದರು. ಕ್ರಿಪ್ಟೊ ಕರೆನ್ಸಿಗಳನ್ನು ಯಾವುದೇ ಪಾವತಿಗಳಿಗೆ ಬಳಸುವಂತೆ ಇಲ್ಲ, ಅವುಗಳಲ್ಲಿ ಹಣ ಹೂಡಿಕೆ ಮಾತ್ರ ಮಾಡಬಹುದು ಎಂದು ಹೇಳಬಹುದಾದ ನಿಯಮಗಳನ್ನು ಕೇಂದ್ರದ ಅಧಿಕಾರಿಗಳು ರೂಪಿಸುತ್ತಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

‘ಭಾರತದಲ್ಲಿ ತಂತ್ರಜ್ಞಾನದ ಅತಿದೊಡ್ಡ ಉತ್ಪನ್ನ ದತ್ತಾಂಶ. ನಾವು ದತ್ತಾಂಶ ಸುರಕ್ಷತೆಗೆ, ಖಾಸಗಿತನದ ರಕ್ಷಣೆಗೆ ಶಕ್ತ ವ್ಯವಸ್ಥೆಯೊಂದನ್ನು ಕಟ್ಟಿಕೊಂಡಿದ್ದೇವೆ. ದತ್ತಾಂಶವನ್ನು ನಾವು ಜನರನ್ನು ಸಶಕ್ತಗೊಳಿಸಲು ಬಳಸುತ್ತಿದ್ದೇವೆ’ ಎಂದು ಪ್ರಧಾನಿ ಹೇಳಿದರು.

‘ಹಿಂದಕ್ಕೆ ಕರೆಸಲು ಯತ್ನ’: ಆರ್ಥಿಕ ಅಪರಾಧಗಳನ್ನು ಎಸಗಿ, ವಿದೇಶಕ್ಕೆ ಪರಾರಿಯಾಗಿರುವವರನ್ನು ದೇಶಕ್ಕೆ ವಾಪಸ್ ಕರೆತರಲು ಎಲ್ಲ ಬಗೆಯ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಪ್ರಧಾನಿಯವರು ಸಾಲ ನೀಡಿಕೆ ಮತ್ತು ಆರ್ಥಿಕ ಬೆಳವಣಿಗೆ ಕುರಿತ ವಿಚಾರ ಸಂಕಿರಣವೊಂದರಲ್ಲಿ ಹೇಳಿದರು.

‘ಬ್ಯಾಂಕ್‌ಗಳು ಸಂಪತ್ತು ಸೃಷ್ಟಿಸುವವರಿಗೆ ಮತ್ತು ಉದ್ಯೋಗ ಸೃಷ್ಟಿಸುವವರಿಗೆ ಬೆಂಬಲ ನೀಡಬೇಕು’ ಎಂದರು. ಆರು–ಏಳು ವರ್ಷಗಳಿಂದ ಬ್ಯಾಂಕಿಂಗ್ ವಲಯದಲ್ಲಿ ತಂದಿರುವ ಸುಧಾರಣೆಗಳ ಫಲವಾಗಿ ದೇಶದ ಬ್ಯಾಂಕ್‌ಗಳು ಇಂದು ಹೆಚ್ಚು ಶಕ್ತಿಯುತವಾಗಿದೆ ಎಂದು ತಿಳಿಸಿದರು.

2022ರ ಆಗಸ್ಟ್‌ 15ರ ವೇಳೆಗೆ ಬ್ಯಾಂಕ್‌ಗಳ ಪ್ರತಿ ಶಾಖೆಯೂ ಡಿಜಿಟಲ್ ಆಗಿ ವಹಿವಾಟು ನಡೆಸುವ ಕನಿಷ್ಠ 100 ಗ್ರಾಹಕರನ್ನು ಹೊಂದಿರಬೇಕು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT