ನವದೆಹಲಿ: 2024–25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಅಂತಿಮ ದಿನವಾದ ಜುಲೈ 31ರವರೆಗೆ 7.28 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಹೊಸ ದಾಖಲೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಕಳೆದ ವರ್ಷದ 6.77 ಕೋಟಿ ತೆರಿಗೆದಾರರು ಐಟಿಆರ್ ಸಲ್ಲಿಸಿದ್ದರು ಎಂದು ಇಲಾಖೆಯು ಶುಕ್ರವಾರ ತಿಳಿಸಿದೆ.
ರಿಟರ್ನ್ಸ್ ಸಲ್ಲಿಸಿದವರಲ್ಲಿ 5.27 ಕೋಟಿ ತೆರಿಗೆದಾರರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದ 2.01 ಕೋಟಿ ತೆರಿಗೆದಾರರು ಹಳೆ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ. ಐಟಿಆರ್ ಸಲ್ಲಿಕೆಗೆ ಕೊನೆಯ ದಿನದಂದು 69.92 ಲಕ್ಷ ತೆರಿಗೆದಾರರು ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ವಿವರಿಸಿದೆ.
58.57 ಲಕ್ಷ ತೆರಿಗೆದಾರರು ಮೊದಲ ಬಾರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಇದು ತೆರಿಗೆ ವ್ಯಾಪ್ತಿ ವಿಸ್ತರಣೆಯ ಸೂಚಕವಾಗಿದೆ ಎಂದು ತಿಳಿಸಿದೆ.