ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LPGಗೆ ಆಧಾರ್‌ ಜೋಡಣೆ | ಇ–ಕೆವೈಸಿಗೆ ಕಾಲಮಿತಿ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

Published 10 ಜುಲೈ 2024, 0:12 IST
Last Updated 10 ಜುಲೈ 2024, 0:12 IST
ಅಕ್ಷರ ಗಾತ್ರ

ನವದೆಹಲಿ: ‘ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಕಲಿ ಬಳಕೆದಾರರನ್ನು ಪತ್ತೆ ಹಚ್ಚಲು ಎಲ್‌ಪಿಜಿಗೆ ಗ್ರಾಹಕರ ಆಧಾರ್‌ ಸಂಖ್ಯೆ ಜೋಡಣೆ ಕಾರ್ಯ ಮಾಡುತ್ತಿವೆ. ಆದರೆ, ಸರ್ಕಾರವು ಈ ಪ್ರಕ್ರಿಯೆ ಪೂರ್ಣಗೊಳಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ’ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.

ಅಡುಗೆ ಅನಿಲ ಸಿಲಿಂಡರ್ ಗ್ರಾಹಕರು ಇ–ಕೆವೈಸಿ ಅಪ್‌ಡೇಟ್‌ ಮಾಡಲು ಗ್ಯಾಸ್‌ ಏಜೆನ್ಸಿಗಳಿಗೆ ಎಡತಾಕುತ್ತಿದ್ದಾರೆ. ಇದರಿಂದ ತೊಂದರೆ ಎದುರಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮತ್ತು ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಅವರು, ಸಚಿವ ಪುರಿ ಅವರಿಗೆ ಪತ್ರ ಬರೆದಿದ್ದರು. 

ಸರ್ಕಾರ ಮತ್ತು ತೈಲ ಕಂಪನಿಗಳ ಈ ನಿರ್ಧಾರದಿಂದ  ಗ್ಯಾಸ್‌ ಏಜೆನ್ಸಿಗಳ ಮುಂದೆ ಗ್ರಾಹಕರ ನೂಕುನುಗ್ಗಲು ಉಂಟಾಗುತ್ತಿದೆ. ಅವರ ದೈನಂದಿನ ಬದುಕಿಗೂ ಪೆಟ್ಟು ಬೀಳುತ್ತಿದೆ ಎಂದು ಗಮನ ಸೆಳೆದಿದ್ದರು. 

ಇದಕ್ಕೆ ಮಂಗಳವಾರ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ‘ಗ್ರಾಹಕರ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ತೈಲ ಕಂಪನಿಗಳ ಬಳಿ ಸಾಕಷ್ಟು ಆಯ್ಕೆಗಳಿವೆ. ಆದರೆ, ಇದನ್ನು ಪೂರ್ಣಗೊಳಿಸಲು ಕಂಪನಿ ಅಥವಾ ಸರ್ಕಾರವು ಯಾವುದೇ ಸಮಯ ನಿಗದಿಪಡಿಸಿಲ್ಲ. ಅಲ್ಲದೆ, ತೈಲ ಕಂಪನಿಗಳು ಕೂಡ ಏಜೆನ್ಸಿಗಳ ವ್ಯಾಪ್ತಿಗೆ ಬರುವ ಗ್ರಾಹಕರ ಸಂಖ್ಯೆಯ ಬಗ್ಗೆ ಮಾಹಿತಿ ಪ್ರಕಟಿಸಿಲ್ಲ ಎಂದು ಹೇಳಿದ್ದಾರೆ.

ವಾಣಿಜ್ಯ ಸಿಲಿಂಡರ್‌ ಬಳಕೆದಾರರ ಪಟ್ಟಿಯಲ್ಲಿರುವ ಕೆಲವರು ಆಗಾಗ್ಗೆ ದಿನಬಳಕೆಯ ಸಿಲಿಂಡರ್‌ ಬುಕಿಂಗ್‌ ಮಾಡುತ್ತಾರೆ. ಇಂತಹ ಬಳಕೆದಾರರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಗ್ರಾಹಕರಿಗೆ ನೀಡುವ ಸಬ್ಸಿಡಿ ಸೌಲಭ್ಯ ಪಡೆಯಲು ಎಲ್‌ಪಿಜಿ ಬಳಕೆದಾರರು ಆಧಾರ್‌ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕರು ತೈಲ ಕಂಪನಿಗಳ ಮೊಬೈಲ್‌ ಆ್ಯಪ್‌ ಮೂಲಕವೂ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಗ್ಯಾಸ್‌ ಏಜೆನ್ಸಿ ಕಚೇರಿಗಳಿಗೂ ಭೇಟಿ ನೀಡಬಹುದು ಅಥವಾ ಮನೆಗೆ ಬಾಗಿಲಿಗೆ ಸಿಲಿಂಡರ್‌ ತರುವ ವಿತರಕರಿಗೆ ವಿವರ ನೀಡುವ ಮೂಲಕವೂ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಸಿಲಿಂಡರ್‌ ವಿತರಕರು ಇ–ಕೆವೈಸಿ ಸಂಬಂಧ ಗ್ರಾಹಕರ ನೈಜತೆಯನ್ನು ಪರಿಶೀಲಿಸಬಹುದಾಗಿದೆ. ಅಲ್ಲದೆ, ಸ್ಥಳದಲ್ಲಿಯೇ ಗ್ರಾಹಕರ ಆಧಾರ್‌ ಸಂಖ್ಯೆ ಪಡೆದು ಆ್ಯಪ್‌ನಲ್ಲಿ ಅಪ್‌ಡೇಟ್‌ ಮಾಡಬಹುದಾಗಿದೆ. ಒಟಿಪಿ ಮೂಲಕ ಬಳಕೆದಾರರು ಸ್ಥಳದಲ್ಲಿಯೇ ಈ ಪ್ರಕ್ರಿಯೆಯನ್ನು ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಎಲ್‌ಪಿಜಿಗೆ ಗ್ರಾಹಕರ ಆಧಾರ್‌ ಸಂಖ್ಯೆ ಜೋಡಣೆ ಪ್ರಕ್ರಿಯೆಯು ಕಳೆದ ಎಂಟು ತಿಂಗಳಿನಿಂದಲೂ ನಡೆಯುತ್ತಿದೆ
ಹರ್ದೀಪ್ ಸಿಂಗ್ ಪುರಿ ಸಚಿವ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT