ಮಂಗಳವಾರ, ಸೆಪ್ಟೆಂಬರ್ 17, 2019
25 °C

ಚಿನ್ನ ಹೊರಗೆ ಸಾಗಿಸಿಲ್ಲ: ಆರ್‌ಬಿಐ ಸ್ಪಷ್ಟನೆ

Published:
Updated:

ಮುಂಬೈ: ದೇಶದಿಂದ ಹೊರಗೆ ಚಿನ್ನವನ್ನು ಸಾಗಿಸಿಲ್ಲ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ.

ಈ ಸಂಬಂಧ ಪ್ರಕಟವಾದ ಸುದ್ದಿಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರೀಯ ಬ್ಯಾಂಕ್‌, 2014ರಲ್ಲಿ ಅಥವಾ ನಂತರದ ಅವಧಿಯಲ್ಲಿ ತನ್ನ ಬಳಿ ಇರುವ ಸಂಗ್ರಹದಿಂದ ಚಿನ್ನವನ್ನು ದೇಶದಿಂದ ಹೊರಗೆ ಸಾಗಿಸಿಲ್ಲ ಎಂದು ಹೇಳಿದೆ.

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಬಳಿ ಇರುವ ಚಿನ್ನದ ಸಂಗ್ರಹವನ್ನು ಇತರ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳ ಬಳಿ ಇರಿಸುವ ಸಂಪ್ರದಾಯ ಬಳಕೆಯಲ್ಲಿ ಇದೆ. ಸುರಕ್ಷತೆ ದೃಷ್ಟಿಯಿಂದ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನಂತಹ ಕಡೆಗಳಲ್ಲಿ ಸಂಗ್ರಹಿಸಿ ಚಿನ್ನ ಇರಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

200 ಟನ್‌ಗಳಷ್ಟು ಚಿನ್ನವನ್ನು ಆರ್‌ಬಿಐ 2014ರಲ್ಲಿ ಸ್ವಿಟ್ಜರ್ಲೆಂಡ್‌ಗೆ ರಹಸ್ಯವಾಗಿ ಸ್ಥಳಾಂತರಿಸಿತ್ತೆ? ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿತ್ತು.

ಚಿನ್ನದ ಸಂಗ್ರಹ ಹೆಚ್ಚಳ: ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿ ಇರುವ ಚಿನ್ನದ ಸಂಗ್ರಹವು ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ 8.4 ಟನ್‌ಗಳಷ್ಟು ಹೆಚ್ಚಾಗಿ 608.8 ಟನ್‌ಗಳಿಗೆ ಏರಿದೆ.

ಈ ಪ್ರಮಾಣದ ಚಿನ್ನದ ಸಂಗ್ರಹದಿಂದ ಆರ್‌ಬಿಐ, ಈಗ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಹೊಂದಿದ 11ನೆ ಕೇಂದ್ರೀಯ ಬ್ಯಾಂಕ್‌ ಆಗಿದೆ ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ತಿಳಿಸಿದೆ.

ಅಮೆರಿಕವು ವಿಶ್ವದಲ್ಲಿಯೇ ಅತಿಹೆಚ್ಚು ಪ್ರಮಾಣದ ಚಿನ್ನದ ಹೊಂದಿದೆ. ಅದರ ಬಳಿ 8,133.5 ಟನ್‌ಗಳಷ್ಟು ಚಿನ್ನ ಇದೆ.

ನಂತರದ ಸ್ಥಾನದಲ್ಲಿ ಜರ್ಮನಿ, ಇಟಲಿ ಮತ್ತು ಫ್ರಾನ್ಸ್‌ ದೇಶಗಳಿವೆ. ಚೀನಾದ ಕೇಂದ್ರೀಯ ಬ್ಯಾಂಕ್‌ ಬಳಿ 1,885.5 ಟನ್‌ ಚಿನ್ನದ ಸಂಗ್ರಹ ಇದೆ.

 

Post Comments (+)