ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರದಲ್ಲಿ ಯಥಾಸ್ಥಿತಿ: ಆಶ್ಚರ್ಯ ಮೂಡಿಸಿದ ರಿಸರ್ವ್‌ ಬ್ಯಾಂಕ್ ನಡೆ

ಚೇತರಿಕೆಗೆ ಬೆಂಬಲ ಅಬಾಧಿತ
Last Updated 11 ಫೆಬ್ರುವರಿ 2022, 2:44 IST
ಅಕ್ಷರ ಗಾತ್ರ

ನವದೆಹಲಿ: ಅರ್ಥ ವ್ಯವಸ್ಥೆಯಲ್ಲಿ ವಿಸ್ತೃತ ನೆಲೆಗಟ್ಟಿನ ಹಾಗೂ ದೀರ್ಘಕಾಲ ಉಳಿದುಕೊಳ್ಳುವ ಚೇತರಿಕೆಗೆ ಬೆಂಬಲ ಮುಂದುವರಿಸುವ ತೀರ್ಮಾನ ಕೈಗೊಂಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ), ರೆಪೊ ದರಗಳಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದರಿಂದಾಗಿ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿದರದಲ್ಲಿ ಸದ್ಯಕ್ಕೆ ಬದಲಾವಣೆಗಳು ಆಗುವ ಸಾಧ್ಯತೆ ಇಲ್ಲ.

ಆರ್‌ಬಿಐ ಕೈಗೊಂಡ ತೀರ್ಮಾನದ ಕಾರಣದಿಂದಾಗಿ ಬ್ಯಾಂಕ್‌, ಗೃಹ ನಿರ್ಮಾಣಕ್ಕೆ ಸಾಲ ನೀಡುವ ಕಂಪನಿಗಳು ಹಾಗೂ ಆಟೊಮೊಬೈಲ್ ಕಂಪನಿಗಳ ಷೇರುಗಳು ಗುರುವಾರ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಂಡವು. ಆದರೆ, ಕೋವಿಡ್‌ ಸಾಂಕ್ರಾಮಿಕದ ವಿರುದ್ಧದ ಹೋರಾಟದ ಭಾಗವಾಗಿ ಘೋಷಿಸಿದ್ದ ತುರ್ತು ಬೆಂಬಲದ ಕ್ರಮಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆರ್‌ಬಿಐ ಯಾವುದೇ ಮಾತು ಆಡದಿರುವುದರ ಕುರಿತು ಅರ್ಥಶಾಸ್ತ್ರಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ರೆಪೊ ದರವನ್ನು ಶೇಕಡ 4ರಲ್ಲಿ ಉಳಿಸಿಕೊಳ್ಳಲು, ಹೊಂದಾಣಿಕೆಯ ಹಣಕಾಸು ನಿಲುವನ್ನು ಮುಂದುವರಿಸಲು ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸದಸ್ಯರು ಒಕ್ಕೊರಲಿನಿಂದ ತೀರ್ಮಾನಿಸಿದ್ದಾರೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ರೆಪೊ ದರದಲ್ಲಿ ಬದಲಾವಣೆ ಇಲ್ಲ ಎನ್ನುವುದು ಗೃಹಸಾಲ ಪಡೆಯುವವರಿಗೆ ಒಳ್ಳೆಯ ಸುದ್ದಿ. ಗೃಹಸಾಲವು ಕಡಿಮೆ ಬಡ್ಡಿ ದರಕ್ಕೆ ಸಿಗುವ ಈಗಿನ ಸ್ಥಿತಿಯು ಮುಂದುವರಿಯಲಿದೆ ಎಂಬುದು ಸ್ವಾಗತಾರ್ಹ’ ಎಂದು ಅನಾರಾಕ್ ಸಮೂಹದ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ. ರಿವರ್ಸ್ ರೆಪೊ ದರವನ್ನು ಕೂಡ ಈಗಿರುವ ಮಟ್ಟದಲ್ಲಿಯೇ (ಶೇ 3.35ರಷ್ಟು) ಉಳಿಸಿಕೊಳ್ಳಲು ಆರ್‌ಬಿಐ ನಿರ್ಧರಿಸಿದೆ.

ಆದರೆ, ಅರ್ಥ ವ್ಯವಸ್ಥೆಯಲ್ಲಿನ ಹೆಚ್ಚುವರಿ ನಗದಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಆರ್‌ಬಿಐ ರಿವರ್ಸ್ ರೆಪೊ ದರವನ್ನು ತುಸು ಹೆಚ್ಚಿಸಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದರು.

‘ಮಾರುಕಟ್ಟೆಯಲ್ಲಿ ಖಾಸಗಿ ವಲಯದಿಂದ ಬರುವ ಬೇಡಿಕೆಗಳು ಇನ್ನಷ್ಟು ದೀರ್ಘವಾಗಬೇಕು ಎಂಬ ಕಾರಣಕ್ಕೆ ಬಡ್ಡಿ ದರಗಳನ್ನು ಕಡಿಮೆ ಮಟ್ಟದಲ್ಲಿ ಇರಿಸಿಕೊಳ್ಳುವ ತೀರ್ಮಾನ ಮಾಡಲಾಗಿದೆ’ ಎಂದು ಐಸಿಐಸಿಐ ಸೆಕ್ಯುರಿಟೀಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಸೆನ್‌ಜಿತ್‌ ಕೆ. ಬಸು ಹೇಳಿದ್ದಾರೆ.

ಆರ್ಥಿಕ ಚೇತರಿಕೆಯ ವೇಗವು ಕೋವಿಡ್‌ನ ಮೂರನೆಯ ಅಲೆಯ ಕಾರಣದಿಂದಾಗಿ ತುಸು ಕಡಿಮೆ ಆಗಿರುವ ಸೂಚನೆಗಳು ಇವೆ. ವ್ಯಕ್ತಿಗಳ ನಡುವೆ ಹೆಚ್ಚು ಒಡನಾಟವನ್ನು ಬಯಸುವ ವಲಯಗಳಲ್ಲಿ ಬೇಡಿಕೆ ಹೆಚ್ಚಳ ಆಗಿಲ್ಲ ಎಂದು ದಾಸ್ ಅವರು ಹೇಳಿದರು. ಆರೋಗ್ಯಸೇವಾ ವಲಯ ಹಾಗೂ ವ್ಯಕ್ತಿಗಳ ನಡುವೆ ಹೆಚ್ಚಿನ ಒಡನಾಟದ ಅಗತ್ಯವಿರುವ ವಲಯಗಳಿಗೆ ಸಾಲದ ನೆರವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಮಾರುಕಟ್ಟೆಯಲ್ಲಿ ಖಾಸಗಿ ವಲಯದಿಂದ ಬರುವ ಬೇಡಿಕೆಯು ಕೋವಿಡ್‌ ಪೂರ್ವದ ಮಟ್ಟಕ್ಕಿಂತಲೂ ಕಡಿಮೆ ಇದೆ ಎಂದು ದಾಸ್ ಹೇಳಿದರು. ಅಲ್ಲದೆ, ಮುಂದಿನ ಹಣಕಾಸು ವರ್ಷಕ್ಕೆ (2022–23) ಅರ್ಥ ವ್ಯವಸ್ಥೆಯ ಬೆಳವಣಿಗೆ ದರ ಶೇಕಡ 7.8ರಷ್ಟು ಇರಲಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯು ಶೇ 9.8ರಷ್ಟು ಇರಲಿದೆ ಎಂದು ದಾಸ್ ಅಂದಾಜಿಸಿದರು.

ಇ–ರುಪಿ ಪ್ರಿಪೇಯ್ಡ್ ಡಿಜಿಟಲ್ ವೋಚರ್‌ಗಳ ಮೂಲಕ ₹ 1 ಲಕ್ಷದವರೆಗೆ ವಹಿವಾಟು ನಡೆಸಬಹುದು ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯು ಹೇಳಿದೆ. ಇದುವರೆಗೆ ₹ 10 ಸಾವಿರದವರೆಗೆ ವಹಿವಾಟಿಗೆ ಅವಕಾಶ ಇತ್ತು.

ಷೇರುಪೇಟೆ ಉತ್ಸಾಹ ಹೆಚ್ಚಿಸಿದ ನಿರ್ಧಾರ
ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳು ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ಮುಂದುವರಿಯುವಂತೆ ಮಾಡಿದವು.

ಆರ್‌ಬಿಐ, ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಜೊತೆಗೆ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಹೊಂದಾಣಿಕೆಯ ನೀತಿಯನ್ನು ಮುಂದುವರಿಸುವುದಾಗಿಯೂ ಹೇಳಿದ್ದರಿಂದ ಸತತ ಮೂರನೇ ದಿನವೂ ಸೂಚ್ಯಂಕಗಳು ಏರಿಕೆ ಕಾಣುವಂತಾಯಿತು.

ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಉತ್ತಮ ವಹಿವಾಟು ಸಹ ದೇಶಿ ಮಾರುಕಟ್ಟೆಗಳ ಮೇಲೆ ಪ್ರಭಾವ ಉಂಟುಮಾಡಿತು ಎಂದು ವರ್ತಕರು ಹೇಳಿದ್ದಾರೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 460 ಅಂಶ ಹೆಚ್ಚಾಗಿ 58,926 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 142 ಅಂಶ ಹೆಚ್ಚಾಗಿ 17,605 ಅಂಶಗಳಿಗೆ ಏರಿಕೆ ಕಂಡಿತು.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ ಆಗಿದ್ದು ಒಂದು ಡಾಲರ್‌ಗೆ ₹ 74.94ರಂತೆ ವಿನಿಮಯಗೊಂಡಿದೆ. ಮೂರು ವಹಿವಾಟು ಅವಧಿಗಳಲ್ಲಿ ರೂಪಾಯಿ ಮೌಲ್ಯವು 25 ಪೈಸೆಗಳಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT