ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾಲ್‌ ಕ್ಯಾಪ್‌ನಲ್ಲಿ ಹೂಡಿಕೆಗೆ ಒತ್ತಾಯಿಸುತ್ತಿಲ್ಲ: ಸೆಬಿ

Last Updated 22 ಸೆಪ್ಟೆಂಬರ್ 2020, 15:06 IST
ಅಕ್ಷರ ಗಾತ್ರ

ನವದೆಹಲಿ: ‘ಸಣ್ಣ ಕಂಪನಿಗಳ (ಸ್ಮಾಲ್‌ ಕ್ಯಾಪ್ಸ್‌) ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಯಾರನ್ನೂ ಒತ್ತಾಯಿಸುತ್ತಿಲ್ಲ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮುಖ್ಯಸ್ಥ ಅಜಯ್‌ ತ್ಯಾಗಿ ಹೇಳಿದ್ದಾರೆ.

ಮಲ್ಟಿ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ತಮ್ಮ ಮೂಲ ಬಂಡವಾಳದಲ್ಲಿ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳಲ್ಲಿ ತಲಾ ಶೇಕಡ 25ರಷ್ಟು ಹೂಡಿಕೆ ಮಾಡಬೇಕು ಎಂದು ಸೆಬಿ ಇತ್ತೀಚೆಗೆ ನಿರ್ದೇಶನ ನೀಡಿದೆ. ಈ ಕುರಿತು ಮಾತನಾಡಿದ ಅವರು, ‘ಮ್ಯೂಚುವಲ್‌ ಫಂಡ್‌ ಯೋಜನೆಗಳು ಹೆಸರಿಗೆ ತಕ್ಕಂತೆ ಇರಬೇಕು’ ಎಂದಿದ್ದಾರೆ.

ಭಾರತೀಯ ಮ್ಯೂಚುವಲ್ ಫಂಡ್‌ ಒಕ್ಕೂಟದ (ಎಎಂಎಫ್‌ಐ) 25ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಲ್ಟಿ ಕ್ಯಾಪ್‌ ಎನ್ನುವುದು ಹೆಸರಿನಂತೆಯೇ ಇರಬೇಕು. ಆದರೆ, ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿ ಎಂದು ಯಾರನ್ನೂ ಒತ್ತಾಯಿಸುತ್ತಿಲ್ಲ. ಹೂಡಿಕೆದಾರರೇ ಆಸಕ್ತಿಯಿಂದ ಹಣ ತೊಡಗಿಸಬೇಕು’ ಎಂದಿದ್ದಾರೆ.

‘ಮ್ಯೂಚುವಲ್ ಫಂಡ್‌ ಯೋಜನೆಗಳನ್ನು ತಪ್ಪಾಗಿ ವರ್ಗೀಕರಿಸುವುದು ಗೊಂದಲ ಸೃಷ್ಟಿಗೆ ಕಾರಣವಾಗುತ್ತದೆ. ಯೋಜನೆಯು ಹೆಸರಿಗೆ ತಕ್ಕಂತೆ ಇರದಿದ್ದರೆ ಹೂಡಿಕೆದಾರರಲ್ಲಿ ಗೊಂದಲ ಮೂಡುತ್ತದೆ’ ಎಂದಿದ್ದಾರೆ.

ಹೊಸ ನಿಯಮದಿಂದಾಗಿ ಲಾರ್ಜ್‌ ಕ್ಯಾಪ್‌ನಿಂದ ₹ 30 ಸಾವಿರದಿಂದ ₹ 40 ಸಾವಿರ ಕೋಟಿವರೆಗಿನ ಮೊತ್ತವು ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಕಂಪನಿಗಳಿಗೆ ವರ್ಗಾವಣೆ ಆಗಲಿದೆ ಎನ್ನುವುದು ಮ್ಯೂಚುವಲ್‌ ಫಂಡ್‌ ಉದ್ಯಮ ಮತ್ತು ನಿಧಿ ನಿರ್ವಾಹಕರ ಕಳವಳ. ಈ ಮೊದಲು ಈ ರೀತಿಯ ಯಾವುದೇ ನಿರ್ಬಂಧ ಇಲ್ಲದಿದ್ದ ಕಾರಣ ಮಲ್ಟಿ ಕ್ಯಾಪ್‌ನ ಬಹುತೇಕ ಹಣವು ದೊಡ್ಡ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಆಗುತ್ತಿತ್ತು.ಮಲ್ಟಿ ಕ್ಯಾಪ್‌ ಯೋಜನೆ‌ ಕುರಿತಾಗಿ ಒಕ್ಕೂಟವು ನೀಡಿರುವ ಸಲಹೆಯನ್ನು ಪರಿಶೀಲಿಸುವುದಾಗಿ ತ್ಯಾಗಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT