ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್ನೆಟ್ ಇಲ್ಲದೆಡೆಯೂ ಡಿಜಿಟಲ್ ಪಾವತಿ: ಆರ್‌ಬಿಐ ಚಿತ್ತ

2021ರ ಮಾರ್ಚ್‌ವರೆಗೆ ಪ್ರಾಯೋಗಿಕ ಬಳಕೆ
Last Updated 12 ಆಗಸ್ಟ್ 2020, 18:40 IST
ಅಕ್ಷರ ಗಾತ್ರ

ಬೆಂಗಳೂರು: ಇಂಟರ್ನೆಟ್ ಲಭ್ಯವಿರುವ ಸ್ಥಳಗಳಲ್ಲಿ ಮೊಬೈಲ್‌ ಮೂಲಕ ಹಣ ಪಾವತಿಸಲು ಬಳಕೆಯಾಗುವ ಜನಪ್ರಿಯ ವ್ಯವಸ್ಥೆ ಯುಪಿಐ. ಈ ವ್ಯವಸ್ಥೆ ಬಳಸಿ 2019ರ ಜುಲೈನಲ್ಲಿ ಒಟ್ಟು ₹ 1.46 ಲಕ್ಷ ಕೋಟಿಯಷ್ಟು ಮೊತ್ತ ಪಾವತಿಸಲಾಗಿತ್ತು. 2020ರ ಜುಲೈನಲ್ಲಿ ಈ ಮೊತ್ತವು ₹2.90 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಆದರೆ, ಇಂಟರ್ನೆಟ್‌ ಲಭ್ಯವಿಲ್ಲದೆಡೆ ಹಾಗೂ ಇಂಟರ್ನೆಟ್‌ ಸಂಪರ್ಕ ಸ್ಥಿರವಾಗಿ ಸಿಗದ ಕಡೆಗಳಲ್ಲಿ ಈ ಪಾವತಿ ವ್ಯವಸ್ಥೆ ಕೆಲಸ ಮಾಡುವುದಿಲ್ಲ.

ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ, ಮೊಬೈಲ್‌ ಸಾಧನ ಅಥವಾ ವಾಲೆಟ್‌ ಬಳಸಿ ಇಂಟರ್ನೆಟ್‌ ಇಲ್ಲದೆಯೂ ಹಣ ಪಾವತಿಸಲು ಅವಕಾಶ ಮಾಡಿಕೊಡುವ ವ್ಯವಸ್ಥೆ ರೂಪಿಸಲು ಮುಂದಾಗಿದೆ. ಇದನ್ನು ಪ್ರಾಯೋಗಿಕವಾಗಿ 2021ರ ಮಾರ್ಚ್‌ ಅಂತ್ಯದವರೆಗೆ ಬಳಕೆಗೆ ತರುವ ಉದ್ದೇಶ ಆರ್‌ಬಿಐಗೆ ಇದೆ.

ಆಗಸ್ಟ್‌ 6ರಂದು ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ)ಹಣಕಾಸು ನೀತಿ ಸಮಿತಿಯು (ಎಂಪಿಸಿ), ‘ಇಂಟರ್ನೆಟ್ ಸಂಪರ್ಕ ಇಲ್ಲದಿರುವುದು ಹಾಗೂ ಕಡಿಮೆ ವೇಗದ ಇಂಟರ್ನೆಟ್ ಸಂಪರ್ಕವು ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೊರಳಿಕೊಳ್ಳಲು ಪ್ರಮುಖ ಅಡ್ಡಿ. ಇಂಟರ್ನೆಟ್ ಬಳಕೆಯಿಲ್ಲದೆಯೇ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಮೊಬೈಲ್ ಅಥವಾ ವಾಲೆಟ್‌ ಬಳಸಿ ಹಣ ಪಾವತಿಸುವ ಸೌಲಭ್ಯವಿದ್ದರೆ ಡಿಜಿಟಲ್ ವ್ಯವಸ್ಥೆ ಬಳಕೆಗೆ ವೇಗ ಸಿಗುತ್ತದೆ’ ಎಂದು ಹೇಳಿದೆ.

ಇಂಟರ್ನೆಟ್ ಇಲ್ಲದೆಯೂ ಹಣ ಪಾವತಿಸುವ ವ್ಯವಸ್ಥೆಯನ್ನು ರೂಪಿಸಬಲ್ಲವರು ಪಾವತಿ ವ್ಯವಸ್ಥೆ ನಿರ್ವಹಣಾ ಸಂಸ್ಥೆಗಳ (ಪಿಎಸ್‌ಒ) ಜೊತೆ ಒಪ್ಪಂದ ಮಾಡಿಕೊಳ್ಳಬಹುದು. ಈ ವ್ಯವಸ್ಥೆಯ ಪ್ರಾಯೋಗಿಕ ಅನುಭವವನ್ನು ಆಧಿರಿಸಿ, ಇದನ್ನು ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ಹೇಳಿದೆ.

ಗ್ರಾಹಕರು ಹೆಚ್ಚುವರಿ ಪಾಸ್‌ವರ್ಡ್‌ ಅಥವಾ ಒಟಿಪಿ (ಒಂದು ಬಾರಿ ಮಾತ್ರ ಬಳಸಲು ಸಾಧ್ಯವಾಗುವ ಪಾಸ್‌ವರ್ಡ್‌) ಬಳಕೆ ಮಾಡದೆಯೂಈ ಬಗೆಯ ಪಾವತಿ ಸೇವೆಗಳು ಲಭ್ಯವಾಗುವಂತೆ ಮಾಡಬಹುದು ಎಂದು ಆರ್‌ಬಿಐ, ಪಿಎಸ್‌ಒಗಳಿಗೆ ಸೂಚನೆ ನೀಡಿದೆ.

ಕೆಲವು ಮಾರ್ಗಸೂಚಿಗಳು

* ಒಂದು ಬಾರಿ ಗರಿಷ್ಠ ₹ 200ರವರೆಗೆ ಮಾತ್ರ ಪಾವತಿಸಲು ಸಾಧ್ಯವಾಗಬೇಕು.

* ಹಣದ ವಹಿವಾಟಿನ ವಿವರ ಸಿಕ್ಕ ತಕ್ಷಣ, ಗ್ರಾಹಕರಿಗೆ ಅದರ ಬಗ್ಗೆ ಸೂಚನೆ ರವಾನಿಸುವ ಹೊಣೆ ಪಿಎಸ್‌ಒಗಳದ್ದು (ಅಂದರೆ, ಈಗ ಹಣ ಪಾವತಿಸಿದಾಗ ಅಥವಾ ಹಣ ಪಡೆದಾಗ ಎಸ್‌ಎಂಎಸ್‌ ಮೂಲಕ ಮಾಹಿತಿ ರವಾನೆ ಆಗುವ ರೀತಿಯಲ್ಲಿ.)

* ಪಾಸ್‌ವರ್ಡ್‌ ಅಥವಾ ಒಟಿಪಿ ಬಳಸದೆಯೇ ಹಣ ಪಾವತಿಸುವುದನ್ನು ಬಳಕೆದಾರರ ಮರ್ಜಿಗೆ ಬಿಡಬೇಕು.

* ಈ ಪಾವತಿ ವ್ಯವಸ್ಥೆಯನ್ನು ಅಳವಡಿಸುವ ಮೊದಲು ಪಿಎಸ್‌ಒಗಳು ಅದರ ಬಗ್ಗೆ ಆರ್‌ಬಿಐಗೆ ವಿವರ ನೀಡಬೇಕು. ಸೇವೆ ಆರಂಭಿಸಲು ಆರ್‌ಬಿಐ ಅನುಮತಿಗೆ ಕಾಯಬೇಕಾಗಿಲ್ಲ.

ದೂರು ನೀಡಲು ವ್ಯವಸ್ಥೆ

ಡಿಜಿಟಲ್‌ ರೂಪದಲ್ಲಿ ಹಣ ಪಾವತಿ ಮಾಡುವಾಗ ಖಾತೆಯಿಂದ ಹಣ ಕಡಿತ ಆಗಿದ್ದರೂ, ಆ ಹಣ ತಲುಪಬೇಕಾದವರಿಗೆ ತಲುಪದಿರುವುದು ಹಾಗೂ ಡಿಜಿಟಲ್ ವಹಿವಾಟಿನ ವೇಳೆ ಗ್ರಾಹಕರು ಎದುರಿಸುವ ಇತರ ಸಮಸ್ಯೆಗಳನ್ನು ಬಗೆಹರಿಸಲು 2021ರ ಜನವರಿಗೆ ಮೊದಲು ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಆರ್‌ಬಿಐ ಹೇಳಿದೆ.

ದೂರು ಸಲ್ಲಿಸುವ ಪ್ರಕ್ರಿಯೆಯು ಅತ್ಯಂತ ಸರಳವಾಗಿ ಇರಬೇಕು. ವೆಬ್‌ ಮೂಲಕ, ದೂರವಾಣಿ ಕರೆ ಮೂಲಕ, ಎಸ್‌ಎಂಎಸ್‌ ಮೂಲಕ ಅಥವಾ ಖುದ್ದಾಗಿ ತೆರಳಿ ದೂರು ಸಲ್ಲಿಸಲು ಗ್ರಾಹಕರಿಗೆ ಅವಕಾಶ ನೀಡಬೇಕು. ಯುಪಿಐ (ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌) ವ್ಯವಸ್ಥೆ ಬಳಸಿ ಕೆಲಸ ಮಾಡುವ ಭೀಮ್‌ನಂತಹ ಆ್ಯಪ್‌ಗಳು, ತಮ್ಮ ಆ್ಯಪ್‌ನ ಮೂಲಕವೇ ದೂರು ಸಲ್ಲಿಸಲಿಕ್ಕೂ ಅವಕಾಶ ಕೊಡಬೇಕು ಎಂದು ಆರ್‌ಬಿಐ ತಾಕೀತು ಮಾಡಿದೆ.

*
ಇಂಟರ್ನೆಟ್ ಇಲ್ಲದೆಯೂ ಪಾವತಿ ವ್ಯವಸ್ಥೆ ರೂಪಿಸಲು ಆರ್‌ಬಿಐ ಮುಂದಾಗಿರುವುದು ಸ್ವಾಗತಾರ್ಹ. ಇದರಿಂದ ಗ್ರಾಹಕರಿಗೂ ಅನುಕೂಲ, ವರ್ತಕರಿಗೂ ಅನುಕೂಲ.
-ಪ್ರಕಾಶ್ ಮಂಡೋತ್, ಬೆಂಗಳೂರು ವರ್ತಕರ ಸಂಘಗಳ ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT