ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

90 ಡಾಲರ್ ಸನಿಹಕ್ಕೆ ಕಚ್ಚಾ ತೈಲ ದರ

ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ, ಬೆಲೆ ಇಳಿಕೆ ಸದ್ಯಕ್ಕೆ ಅನುಮಾನ
Published 6 ಸೆಪ್ಟೆಂಬರ್ 2023, 16:01 IST
Last Updated 6 ಸೆಪ್ಟೆಂಬರ್ 2023, 16:01 IST
ಅಕ್ಷರ ಗಾತ್ರ

ನವದೆಹಲಿ: ಕಚ್ಚಾ ತೈಲ ಉತ್ಪಾದನೆ ಹಾಗೂ ರಫ್ತು ಕಡಿತವನ್ನು ಈ ವರ್ಷದ ಅಂತ್ಯದವರೆಗೆ ಮುಂದುವರಿಸಲು ರಷ್ಯಾ ಮತ್ತು ಸೌದಿ ಅರೇಬಿಯಾ ತೀರ್ಮಾನಿಸಿರುವ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 90 ಡಾಲರ್‌ ಸನಿಹಕ್ಕೆ ಬಂದಿದೆ. ಇದು 10 ತಿಂಗಳ ಗರಿಷ್ಠ ಮಟ್ಟ.

ಈ ಬೆಲೆ ಏರಿಕೆಯ ಕಾರಣದಿಂದಾಗಿ ಭಾರತವು ಕಚ್ಚಾ ತೈಲ ಆಮದಿಗೆ ಹೆಚ್ಚು ಹಣ ವ್ಯಯಿಸಬೇಕಾಗಿದೆ. ಹೀಗಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಆಧಾರಲ್ಲಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿನಿತ್ಯ ಪರಿಷ್ಕರಿಸುವ ವ್ಯವಸ್ಥೆ ಮತ್ತೆ ಜಾರಿಗೆ ಬರುವ ಸಾಧ್ಯತೆ ಸದ್ಯಕ್ಕೆ ಕಡಿಮೆಯಾಗಿದೆ.

ರಷ್ಯಾ ಹಾಗೂ ಸೌದಿ ಅರೇಬಿಯಾ ತೈಲ ಉತ್ಪಾದನೆಯನ್ನು ಹೆಚ್ಚಿಸದೆ ಇರುವ ತೀರ್ಮಾನ ಕೈಗೊಂಡ ಒಂದು ವಾರದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 6.5ರಷ್ಟು ಹೆಚ್ಚಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಮಂಗಳವಾರ 90 ಡಾಲರ್‌ಗಿಂತ ಹೆಚ್ಚಾಗಿದೆ. ಈ ವರ್ಷದಲ್ಲಿ ಬೆಲೆಯು 90 ಡಾಲರ್‌ಗಿಂತ ಹೆಚ್ಚಾಗಿದ್ದುದು ಇದೇ ಮೊದಲು.

ಭಾರತಕ್ಕೆ ಪೂರೈಕೆಯಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಆಗಸ್ಟ್‌ನಲ್ಲಿ ಸರಾಸರಿ 86.43 ಡಾಲರ್‌ ಇದ್ದಿದ್ದು, ಈ ತಿಂಗಳಲ್ಲಿ 89.81 ಡಾಲರ್ ಆಗಿದೆ. ಮೇ ಮತ್ತು ಜೂನ್‌ನಲ್ಲಿ ಸರಾಸರಿ ಬೆಲೆಯು 73ರಿಂದ 75 ಡಾಲರ್‌ ನಡುವೆ ಇತ್ತು. ಬೆಲೆ ಕಡಿಮೆ ಇದ್ದ ಕಾರಣ, ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆ ಆಧಾರಿತ ಪರಿಷ್ಕರಣೆ ವ್ಯವಸ್ಥೆ ಮತ್ತೆ ಜಾರಿಗೆ ಬರಲಿದೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆಯು ತುಸು ತಗ್ಗಬಹುದು ಎಂಬ ಆಸೆ ಚಿಗುರಿತ್ತು.

ಕಳೆದ 17 ತಿಂಗಳುಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು 73–74 ಡಾಲರ್‌ ಮಟ್ಟದಲ್ಲಿ ಉಳಿದಿದ್ದರೆ, ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸುತ್ತಿದ್ದವು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT