ಸೋಮವಾರ, ಏಪ್ರಿಲ್ 6, 2020
19 °C
ಭಾರತದ ತಗ್ಗಲಿರುವ ಚಾಲ್ತಿ ಖಾತೆ ಕೊರತೆ ಅಂದಾಜು

ಸೌದಿ ತೈಲ ಉತ್ಪಾದನೆ ಹೆಚ್ಚಳ

ಎಎಫ್‌ಪಿ, ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಿಯಾದ್‌ / ಮುಂಬೈ: ತನ್ನ ಕಚ್ಚಾ ತೈಲದ ಉತ್ಪಾದನೆಯನ್ನು ಪ್ರತಿ ದಿನ 10 ಲಕ್ಷ ಬ್ಯಾರಲ್‌ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಸೌದಿ ಅರೇಬಿಯಾದ ಅರಾಮ್ಕೊ ಕಂಪನಿ ತಿಳಿಸಿದೆ.

ರಷ್ಯಾದ ಜತೆಗೆ ಬೆಲೆ ಸಮರಕ್ಕೆ ಇಳಿದಿರುವ ಸೌದಿ,  ಪ್ರತಿ ದಿನದ ಒಟ್ಟು ಉತ್ಪಾದನೆಯನ್ನು 1.30 ಕೋಟಿ ಬ್ಯಾರಲ್‌ಗೆ ಹೆಚ್ಚಿಸಲು ನಿರ್ಧರಿಸಿದೆ.

ತನ್ನ ಪ್ರತಿದಿನದ ಗರಿಷ್ಠ ಉತ್ಪಾದನಾ ಸಾಮರ್ಥ್ಯವನ್ನು 1.20 ಕೋಟಿ ಬ್ಯಾರಲ್‌ನಿಂದ 1.30 ಕೋಟಿ ಬ್ಯಾರಲ್‌ಗೆ ಹೆಚ್ಚಿಸಲು ಇಂಧನ ಸಚಿವಾಲಯದಿಂದ ನಿರ್ದೇಶನ ಬಂದಿದೆ ಎಂದು ಅರಾಮ್ಕೊ ಕಂಪನಿಯು ಸೌದಿ ಷೇರುಪೇಟೆಗೆ ಮಾಹಿತಿ ನೀಡಿದೆ.

ತಗ್ಗಿದ ಚಾಲ್ತಿ ಖಾತೆ ಕೊರತೆ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅಗ್ಗವಾಗುತ್ತಿರುವುದರಿಂದ 2020–21ನೇ ಹಣಕಾಸು ವರ್ಷದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆಯು ಶೇ 0.25ರಷ್ಟು ಕಡಿಮೆಯಾಗಲಿದೆ.

ಚಾಲ್ತಿ ಖಾತೆ ಕೊರತೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.7ಕ್ಕೆ ಇಳಿಯಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಪ್ರತಿ ಬ್ಯಾರಲ್‌ ತೈಲದ ಬೆಲೆ 36 ಡಾಲರ್‌ಗಳಷ್ಟು ಇರಲಿದೆ ಎನ್ನುವ ಅಂದಾಜು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಾಲ್‌ಸ್ಟ್ರೀಟ್‌ನ ಷೇರು ದಲ್ಲಾಳಿ ಸಂಸ್ಥೆಯಾಗಿರುವ ಬ್ಯಾಂಕ್ ಆಫ್‌ ಅಮೆರಿಕ ಸೆಕ್ಯುರಿಟೀಸ್‌ ತಿಳಿಸಿದೆ. 

ಭಾರತದ ಆರ್ಥಿಕ ವೃದ್ಧಿ ದರವು ಮುಂದಿನ ಹಣಕಾಸು ವರ್ಷದಲ್ಲಿ ಶೇ 0.20ರಷ್ಟು ಕಡಿಮೆಯಾಗಿ ಶೇ 5.4ರಷ್ಟು ಇರಲಿದೆ. ಜಾಗತಿಕ ಆರ್ಥಿಕ ಪ್ರಗತಿಯು ಶೇ 1.4ಕ್ಕೆ ಕುಸಿದರೆ ಭಾರತದ ಜಿಡಿಪಿ ಶೇ 4.4ಕ್ಕೆ ಇಳಿಯಲಿದೆ ಎಂದು ಕಂಪನಿಯು ಅಂದಾಜಿಸಿದೆ. ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಾಪಿಸಿದ ನಂತರದ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಶೇ 45 ರಷ್ಟು ಕಡಿಮೆಯಾಗಿದೆ.

ಚಿನ್ನದ ಬೆಲೆ ಇಳಿಕೆ
ರೂಪಾಯಿ ಬೆಲೆ ಚೇತರಿಕೆ ಕಂಡಿದ್ದರಿಂದ ದೇಶಿ ಚಿನಿ ವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಇಳಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ 10 ಗ್ರಾಂಗಳಿಗೆ ₹ 516ರಂತೆ ಕಡಿಮೆಯಾಗಿ ₹ 44,517ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ₹ 190ರಂತೆ ಇಳಿಕೆಯಾಗಿ ₹ 43,742ಕ್ಕೆ ತಲುಪಿದೆ. ಮುಂಬೈನಲ್ಲಿ ₹ 43,486ರಂತೆ ಮಾರಾಟವಾಗಿದೆ.

ರೂಪಾಯಿ ಬೆಲೆ ಹೆಚ್ಚಳ
ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಬೆಲೆ ಕುಸಿತ ಕಂಡಿರುವುದು ಮತ್ತು ದೇಶಿ ಷೇರುಪೇಟೆಯಲ್ಲಿನ ಚೇತರಿಕೆಯ ಫಲವಾಗಿ ರೂಪಾಯಿ ಬೆಲೆ ಚೇತರಿಸಿಕೊಂಡಿದೆ. ಮುಂಬೈನ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆಯು ಡಾಲರ್‌ ಎದುರು 49 ಪೈಸೆ ಚೇತರಿಕೆ ಕಂಡು ₹ 73.68ಕ್ಕೆ ಏರಿಕೆಯಾಗಿದೆ.

ಷೇರುಪೇಟೆ ಚೇತರಿಕೆ
ಮುಂಬೈ ಷೇರುಪೇಟೆಯು ಬುಧವಾರದ ವಹಿವಾಟಿನಲ್ಲಿ ಸಾಧಾರಣ ಮಟ್ಟದ ಚೇತರಿಕೆ ಕಂಡಿತು. ಸಂವೇದಿ ಸೂಚ್ಯಂಕವು 62 ಅಂಶಗಳಷ್ಟು ಏರಿಕೆಯಾಗಿ 35,697 ಅಂಶಗಳಿಗೆ ತಲುಪಿತು. ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಬೆಲೆ ಶೇ 3.60ರಷ್ಟು ಏರಿಕೆ ಕಂಡಿತು. ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು