ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಗ್‌ ಕೆಲಸಗಾರರಿಗೆ ಒಳ್ಳೆಯ ವಾತಾವರಣ ಕಲ್ಪಿಸುವಲ್ಲಿ ಓಲಾ,ಉಬರ್, ಡಂಜೊ ಶೂನ್ಯ ಅಂಕ

ನ್ಯಾಯಸಮ್ಮತ ಪಾವತಿ, ಕೆಲಸದ ಸ್ಥಿತಿ ಕುರಿತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಧ್ಯಯನ
Last Updated 27 ಡಿಸೆಂಬರ್ 2022, 14:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಿಗ್ ಕೆಲಸಗಾರರಿಗೆ (ಗುತ್ತಿಗೆ ಆಧರಿತವಾಗಿ ಅಥವಾ ಬೇಡಿಕೆ ಆಧಾರದ ಮೇಲೆ ತೊಡಗಿಸಿಕೊಂಡಿರುವರು)ಒಳ್ಳೆಯ ಕೆಲಸದ ವಾತಾವರಣ ಕಲ್ಪಿಸಿಕೊಡುವ ವಿಚಾರದಲ್ಲಿ ಓಲಾ, ಉಬರ್, ಡಂಜೊ, ಫಾರ್ಮ್‌ಈಸಿ ಮತ್ತು ಅಮೆಜಾನ್‌ ಫ್ಲೆಕ್ಸ್‌ ಅತ್ಯಂತ ಕಡಿಮೆ ಅಂಕ ಗಳಿಸಿವೆ.

ಓಲಾ ಮತ್ತು ಉಬರ್ ಕ್ಯಾಬ್ ಸೇವೆಗಳನ್ನು ಒದಗಿಸುತ್ತವೆ, ಡಂಜೊ ದಿನಸಿ ಸಾಮಾನುಗಳನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ಒದಗಿಸುತ್ತದೆ, ಫಾರ್ಮ್‌ಈಸಿ ಆನ್‌ಲೈನ್‌ ಮೂಲಕ ಔಷಧಗಳನ್ನು ಖರೀದಿಸುವ ಸೌಲಭ್ಯ ಒದಗಿಸುತ್ತದೆ.

12 ಡಿಜಿಟಲ್ ವೇದಿಕೆಗಳಲ್ಲಿ ಕೆಲಸದ ವಾತಾವರಣ ಹೇಗಿದೆ ಎಂಬುದನ್ನು ಫೇರ್‌ವರ್ಕ್‌ ಇಂಡಿಯಾ ಸಂಸ್ಥೆಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪರಿಶೀಲಿಸಿದೆ. ಫೇರ್‌ವರ್ಕ್‌ ಸಂಸ್ಥೆಯು ಡಿಜಿಟಲ್ ವೇದಿಕೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆ ನಡೆಸುತ್ತದೆ.

ನ್ಯಾಯಸಮ್ಮತ ಪಾವತಿ, ಕೆಲಸದ ಸ್ಥಿತಿ, ಗುತ್ತಿಗೆ, ಆಡಳಿತ ನಿರ್ವಹಣೆ ಮತ್ತು ಪ್ರಾತಿನಿಧ್ಯದ ಆಧಾರದಲ್ಲಿ ‘ಫೇರ್‌ವರ್ಕ್‌ ಇಂಡಿಯಾ ರೇಟಿಂಗ್ಸ್‌ 2022 ವರದಿ’ ಸಿದ್ಧಪಡಿಸಲಾಗಿದೆ. ಅಮೆಜಾನ್‌ ಫ್ಲೆಕ್ಸ್‌, ಡಂಜೊ, ಓಲಾ, ಫಾರ್ಮ್‌ಈಸಿ ಮತ್ತು ಉಬರ್‌ 10ರಲ್ಲಿ ಶೂನ್ಯ ಅಂಕ ಗಳಿಸಿವೆ.

‘ಯಾವ ವೇದಿಕೆಯೂ ಏಳಕ್ಕಿಂತ ಹೆಚ್ಚು ಅಂಕ ಪಡೆದಿಲ್ಲ’ ಎಂದು ವರದಿ ಹೇಳಿದೆ. ಅರ್ಬನ್ ಕಂಪನಿ (7), ಬಿಗ್‌ಬಾಸ್ಕೆಟ್‌ (6), ಫ್ಲಿಪ್‌ಕಾರ್ಟ್‌ (5), ಸ್ವಿಗ್ಗಿ (5), ಜೊಮಾಟೊ (4), ಜೆಪ್ಟೊ (2) ಮತ್ತು ಪೋರ್ಟರ್ (1) ಹೆಚ್ಚಿನ ಅಂಕ ಪಡೆದಿವೆ.

‘ಗಿಗ್ ಕೆಲಸಗಾರರ ಕೆಲಸದ ಸ್ಥಿತಿಯನ್ನು ಸುಧಾರಿಸಲು ಮೊದಲ ಹೆಜ್ಜೆಯಾಗಿ, ಅವರಿಗೆ ಗಂಟೆಗಳ ಲೆಕ್ಕದಲ್ಲಿ ಕನಿಷ್ಠ ವೇತನ ಸಿಗುವಂತೆ ಮಾಡಬೇಕು. ಅವರು ಸಾಮೂಹಿಕವಾಗಿ ಇರಿಸುವ ಬೇಡಿಕೆಗಳನ್ನು ಆಲಿಸಬೇಕು, ಅದನ್ನು ಪರಿಶೀಲಿಸಬೇಕು’ ಎಂದು ಕೆಲಸದ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ತಂಡದ ಮುಖ್ಯ ಪರಿಶೀಲಕ ಪ್ರೊ. ಬಾಲಾಜಿ ಪಾರ್ಥಸಾರಥಿ ಹೇಳಿದ್ದಾರೆ.

‘ಕೆಲಸಗಾರರು ಹಾಗೂ ಅವರ ಸಂಘಟನೆಗಳು, ಇಂತಹ ಡಿಜಿಟಲ್ ವೇದಿಕೆಗಳಿಗೆ ಕೆಲಸ ಮಾಡುವವರಿಗೆ ಸ್ಥಿರ ಆದಾಯ ಇರಬೇಕಾದುದರ ಮಹತ್ವವನ್ನು ಮತ್ತೆ ಮತ್ತೆ ಹೇಳುತ್ತಿದ್ದರೂ ಕಂಪನಿಗಳು ಮಾತ್ರ ಅದನ್ನು ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕುತ್ತಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಬಿಗ್‌ಬಾಸ್ಕೆಟ್‌, ಫ್ಲಿಪ್‌ಕಾರ್ಟ್‌ ಮತ್ತು ಅರ್ಬನ್‌ ಕಂಪನಿ ಈ ವರ್ಷ ತಮ್ಮ ಕೆಲಸಗಾರರಿಗೆ ಗಂಟೆಗಳ ಲೆಕ್ಕದಲ್ಲಿ ಕನಿಷ್ಠ ಸಂಭಾವನೆ ಸಿಗುವಂತೆ ಮಾಡುವ ನೀತಿಗಳನ್ನು ಕಾರ್ಯರೂಪಕ್ಕೆ ತಂದಿವೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT