ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ರಫ್ತು ನಿಷೇಧ ಅಬಾಧಿತ

ಮಾರ್ಚ್‌ 31ರ ವರೆಗೆ ನಿರ್ಬಂಧ ಮುಂದುವರಿಕೆ: ಗ್ರಾಹಕ ಸಚಿವಾಲಯ ಸ್ಪಷ್ಟನೆ
Published 20 ಫೆಬ್ರುವರಿ 2024, 15:35 IST
Last Updated 20 ಫೆಬ್ರುವರಿ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆ ಹಾಗೂ ಧಾರಣೆಯ ಏರಿಳಿತದ ಮೇಲೆ ಸರ್ಕಾರವು ನಿಗಾ ಇಟ್ಟಿದೆ. ಹಾಗಾಗಿ, ಮಾರ್ಚ್‌ 31ರ ವರೆಗೂ ಈರುಳ್ಳಿ ಮೇಲೆ ವಿಧಿಸಿರುವ ರಫ್ತು ನಿಷೇಧ ಮುಂದುವರಿಯಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಂಗಳವಾರ ಹೇಳಿದೆ.

‘ಈರುಳ್ಳಿ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧವನ್ನು ಹಿಂಪಡೆದಿಲ್ಲ’ ಎಂದು ಸಚಿವಾಲಯದ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ಈರುಳ್ಳಿ ದೊರೆಯುವಂತೆ ಮಾಡುವುದೇ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ರಫ್ತು ನಿರ್ಬಂಧವನ್ನು ಹಿಂಪಡೆಯಲಾಗುತ್ತದೆ ಎಂಬ ವದಂತಿಯಿಂದಾಗಿ ದೇಶದ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಲಾಸಲ್‌ಗಾಂವ್‌ನಲ್ಲಿ ಈರುಳ್ಳಿ ಬೆಲೆಯು, ಫೆಬ್ರುವರಿ 19ರಂದು ಶೇ 40.62ರಷ್ಟು ಏರಿಕೆಯಾಗಿ, ಪ್ರತಿ ಕ್ವಿಂಟಲ್‌ಗೆ ₹1,800ಕ್ಕೆ ತಲುಪಿತ್ತು.  

ಲೋಕಸಭೆಗೆ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಸರ್ಕಾರದ ಗುರಿಯಾಗಿದೆ. ಮಹಾರಾಷ್ಟ್ರದಲ್ಲಿ ರಾಬಿ ಅವಧಿಯಲ್ಲಿ ಕಡಿಮೆ ಬಿತ್ತನೆಯಾಗಿದ್ದು, ಉತ್ಪಾದನೆಯೂ ಕಡಿಮೆಯಾಗುವ ನಿರೀಕ್ಷೆಯಿದೆ. ಹಾಗಾಗಿ, ಮಾರ್ಚ್‌ 31ರ ನಂತರವೂ ರಫ್ತು ನಿರ್ಬಂಧವನ್ನು ಸಡಿಲಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ರಾಬಿ ಅವಧಿಯಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಒಟ್ಟು 22.7 ದಶಲಕ್ಷ ಟನ್‌ ಈರುಳ್ಳಿ ಉತ್ಪಾದನೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. 

ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಕಳೆದ ಡಿಸೆಂಬರ್‌ 8ರಂದು ಕೇಂದ್ರವು ಈರುಳ್ಳಿ ರಫ್ತಿಗೆ ನಿಷೇಧ ಹೇರಿತ್ತು. ಭಾರತದ ಮಿತ್ರರಾಷ್ಟ್ರಗಳಿಗೆ ರಫ್ತು ಮಾಡುವುದನ್ನು ಈ ನಿರ್ಬಂಧದಿಂದ ಹೊರಗಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT