ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಳೆಗಾರರಿಗೆ ಬಂಪರ್‌ ದರ

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಹಿವಾಟು ಗಣನೀಯ ಹೆಚ್ಚಳ
Last Updated 10 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ರಾಯಚೂರು: ಮಹಾರಾಷ್ಟ್ರದಲ್ಲಿ ಬಿಟ್ಟುಬಿಡದೇ ನಿರಂತರವಾಗಿ ಸುರಿದ ಮಳೆಯಿಂದ ಈ ವರ್ಷ ಅಲ್ಲಿನ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿಲ್ಲ. ಇದರಿಂದ ನೆರೆ ರಾಜ್ಯಗಳಿಗೆ ಈರುಳ್ಳಿ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ. ರಾಯಚೂರಿನ ರೈತರಿಗೆ ಇದು ವರವಾಗಿದ್ದು, ಈರುಳ್ಳಿಗೆ ಬೇಡಿಕೆ ಹೆಚ್ಚಿದೆ.

ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರಾ ನದಿ ತೀರ ಪ್ರದೇಶ, ಎನ್‌ಆರ್‌ಬಿಸಿ, ಟಿಎಲ್‌ಬಿಸಿ ಕಾಲುವೆ ಅಚ್ಚುಕಟ್ಟು ಪ್ರದೇಶ, ಕೆರೆ ಹಾಗೂ ಕೊಳವೆಬಾವಿ ನೀರಾವರಿ ಆಶ್ರಯಿಸಿ ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಈರುಳ್ಳಿ ಬೆಳೆಯುತ್ತಾರೆ. 2017ರಲ್ಲಿ ಕ್ವಿಂಟಲ್‌ಗೆ ₹ 5 ಸಾವಿರಕ್ಕೆ ಏರಿಕೆಯಾಗಿದ್ದ ಈರುಳ್ಳಿ ದರ 2018ರಲ್ಲಿ ಕುಸಿದಿತ್ತು. ಈ ವರ್ಷ ಒಂದು ತಿಂಗಳಿಗೂ ಹೆಚ್ಚು ಸಮಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರುಗತಿಯಲ್ಲಿ ಇದೆ. ಬೆಂಗಳೂರು, ಹೈದರಾಬಾದ್‌, ಮಹಾರಾಷ್ಟ್ರ, ಬೆಳಗಾವಿ, ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ರಾಯಚೂರು ಎಪಿಎಂಸಿಯಿಂದ ಈರುಳ್ಳಿ ಪೂರೈಕೆ ಮಾಡಲಾಗುತ್ತಿದೆ.

ಬೇರೆ ರಾಜ್ಯದ ದೊಡ್ಡ ಗಾತ್ರದ ಈರುಳ್ಳಿ ದರ ಕ್ವಿಂಟಲ್‌ಗೆ ₹ 4,000 ಇದ್ದರೆ, ರಾಯಚೂರು ಈರುಳ್ಳಿ ದರ ₹2,500 ದಿಂದ ₹3,000 ಇದೆ. ಈ ವರ್ಷ ಗರಿಷ್ಠ ದರ ಕ್ವಿಂಟಲ್‌ಗೆ ₹ 4,200ವರೆಗೆ ಏರಿಕೆಯಾಗಿತ್ತು. ಸೆಪ್ಟೆಂಬರ್‌ನಿಂದ ಈರುಳ್ಳಿ ದರ ₹3 ಸಾವಿರ ಆಸುಪಾಸಿನಲ್ಲಿದೆ. ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದ ಬಳಿಕ ದರ ಅಲ್ಪ ಕುಸಿದಿದೆ.

‘ಬೆಂಗಳೂರು ಮತ್ತು ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗುತ್ತಿದೆ. ಅತಿ ಮಳೆಯಿಂದ ಕೆಲ ಕಡೆ ಈರುಳ್ಳಿ ಹಾಳಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ರಾಯಚೂರು ಈರುಳ್ಳಿ ಸ್ವಲ್ಪ ಕಡಿಮೆ ದರಕ್ಕೆ ಮಾರಾಟವಾದರೂ ರೈತರಿಗೆ ಲಾಭವಾಗುತ್ತಿದೆ’ ಎಂದು ಕಮಿಷನ್‌ ಏಜೆಂಟ್‌ ವಿಶ್ವನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT