ಬುಧವಾರ, ನವೆಂಬರ್ 20, 2019
27 °C

ವಿಮೆ: ಆನ್‌ಲೈನ್‌ ಖರೀದಿಯ ಇತಿಮಿತಿ

Published:
Updated:
Prajavani

ಈಗ ಬಹುತೇಕ ಎಲ್ಲರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳು ಇರುವ ಕಾರಣ ಹಾಗೂ ಡೇಟಾ ಬಳಕೆ ದರದಲ್ಲಿ ಗಮನಾರ್ಹ ಇಳಿಕೆಯಾಗಿರುವುದರಿಂದ ಅಂತರ್ಜಾಲವನ್ನು ಬಹಳಷ್ಟು ಜನರು ಸುಲಭವಾಗಿ ಬಳಸುತ್ತಿದ್ದಾರೆ. ಹೀಗಾಗಿ ಎಲ್ಲಾ ಬಗೆಯ ಸರಕುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಸಲೀಸಾಗಿದೆ. ಅದರಲ್ಲೂ ಯುವ ಜನಾಂಗದಲ್ಲಿ ಆನ್‌ಲೈನ್‌ನಲ್ಲಿ ಖರೀದಿ ಪ್ರವೃತ್ತಿ ದಿನೇ ದಿನೇ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ.

ಆನ್‌ಲೈನ್‌ ವಹಿವಾಟಿನಲ್ಲಿ ಹಣ, ಸಮಯ ಉಳಿಸಬಹುದಾಗಿದೆ. ಇಲ್ಲಿ ಸುರಕ್ಷತೆ ಕುರಿತು ಗಮನಹರಿಸುವುದೂ ಅಗತ್ಯ ಎಂಬುದನ್ನು ಮರೆಯಬಾರದು. ಇಂತಹ ವಹಿವಾಟಿನಲ್ಲಿ ವೈಯಕ್ತಿಕ ವಿವರಗಳನ್ನು ನೀಡಬೇಕಾಗಿರುತ್ತದೆ. ಅದು ಸುರಕ್ಷತೆಗೆ ಸಂಚಕಾರ ಒಡ್ಡದಂತೆ ಹಾಗೂ ವಂಚಕರ ಗಾಳಕ್ಕೆ ಸಿಲುಕದಂತೆ ಎಚ್ಚರವಹಿಸುವುದು ಅನಿವಾರ್ಯವಾಗಿದೆ. ಕೆಲವೊಂದು ಸರಕುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಸೂಕ್ತವಲ್ಲ. 

ಔಷಧಗಳು, ಜೀವ ವಿಮೆ ಯೋಜನೆಗಳು, ಆಹಾರ ಸಂಬಂಧಿತ ಉತ್ಪನ್ನಗಳು ಹಾಗೂ ಚಿನ್ನಾಭರಣಗಳು. ಈ ಸರಕುಗಳನ್ನು ಖರೀದಿಸುವಾಗ ಸಂಬಂಧಿತ ಕ್ಷೇತ್ರದ ತಜ್ಞರಿಂದ ಅಭಿಪ್ರಾಯ ಪಡೆಯಬೇಕು. ಸರಕು / ಉತ್ಪನ್ನಗಳ ಬಗ್ಗೆ ಸಂಪೂರ್ಣ ತಿಳಿವಳಿಕೆ ಇದ್ದರೆ ಮಾತ್ರ ಖರೀದಿಸಲು ಮುಂದಾಗಬೇಕು. ಉದಾಹರಣೆಗೆ ಔಷಧಿಗಳನ್ನು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಹಾಗೂ ಸೂಚನೆಯ ಮೇರೆಗೆ ಖರೀದಿಸುವುದು ಒಳ್ಳೆಯದು.

ಬೈಕ್ ಹಾಗೂ ಕಾರ್ ಚಲಾಯಿಸುವಾಗ ಅನೇಕ ಸುರಕ್ಷಾ ಕ್ರಮಗಳನ್ನು ಅನುಸರಿಸಲು ಕಾನೂನುಗಳಿವೆ. ಬೈಕ್ ಓಡಿಸುವವರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಹಾಕುವುದು ಕಡ್ಡಾಯ. ಹಾಗಂತ ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್‌ ಬಳಸುವವರ ಸಂಖ್ಯೆ ಕಡಿಮೆ ಇದೆ. ಪೊಲೀಸರು ದಂಡ ಹಾಕುತ್ತಾರೆಂದು ಹೆದರಿ ಹೆಲ್ಮೆಟ್ ಹಾಕಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಹಾಗೆಯೇ ಜೀವ ವಿಮಾ ಪಾಲಿಸಿಯು ಕುಟುಂಬದ ರಕ್ಷಣೆಗೆ ಹಾಗೂ ಹಣಕಾಸು ಜವಾಬ್ದಾರಿಗಳನ್ನು ನಿಭಾಯಿಸಲು ಸಹಕಾರಿಯಾಗುವ ವಿಧಾನ. ಆದರೆ ತಾವಾಗಿಯೇ ಪಾಲಿಸಿ ಪಡೆಯುವವರು ಕಡಿಮೆ, ಪ್ರತಿನಿಧಿಯ ಒತ್ತಾಯವಿಲ್ಲದೇ ಬಹಳಷ್ಟು ಜನ ಪಾಲಿಸಿ ಪಡೆಯುವದೇ ಇಲ್ಲ. ಹಾಗೆಯೇ ಜೀವ ವಿಮಾ ಯೋಜನೆಗಳನ್ನು ಆಫ್-ಲೈನ್ ಹಾಗೂ ಆನ್-ಲೈನ್ ನಲ್ಲಿ ಕೊಂಡರೆ ಆಗುವ ಒಳಿತು – ಕೆಡುಕುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಆಫ್‌ಲೈನ್ ಖರೀದಿ
ತಮ್ಮ ಅಗತ್ಯಕ್ಕೆ ತಕ್ಕಂತೆ ಹಾಗೂ ಸರಿಯಾದ ವಿಮಾ ಯೋಜನೆಯನ್ನು ಕೊಳ್ಳಲು ಪ್ರತಿನಿಧಿಯು ಸಲಹೆ ನೀಡುತ್ತಾನೆ.
* ಪ್ರಸ್ತಾವ ಪತ್ರದಲ್ಲಿರುವ (ಪ್ರಪೋಸಲ್ ಫಾರ್ಮ್) ಎಲ್ಲಾ ವಿವರಗಳನ್ನು ಅಥವಾ ಮಾಹಿತಿಯನ್ನು ಸರಿಯಾಗಿ ತುಂಬಿ ಸಂಪೂರ್ಣಗೊಳಿಸಲು ನೆರವಾಗುತ್ತಾನೆ. ಅಗತ್ಯ ವೈದ್ಯಕೀಯ ಹಾಗೂ ವಿವಿಧ ಪರೀಕ್ಷೆಗಳಿದ್ದರೆ, ಅವುಗಳನ್ನು ಸರಿಯಾಗಿ ನೆರವೇರಿಸಿ ಪಾಲಿಸಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳುತ್ತಾನೆ.
* ಪ್ರತಿನಿಧಿಯು ಪಾಲಿಸಿದಾರರ ಜತೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಪಾಲಿಸಿ ಮಾರಾಟದ ನಂತರ ಪಾಲಿಸಿದಾರರಿಗೆ ಸೇವೆಯಲ್ಲಿ ಸಹಾಯಕ್ಕೆ ಬರುತ್ತಾನೆ. ಉದಾಹರಣೆಗೆ: ಪ್ರತಿ ಸಲ ಪ್ರೀಮಿಯಂ ಪಾವತಿಸಲು ನೆನಪು ಮಾಡುತ್ತಾನೆ.
* ಪಾಲಿಸಿ ಅವಧಿಯಲ್ಲಿ ಸಾಲ ಪಡೆಯಲು, ನವೀಕರಿಸಲು ಅಥವಾ ಇತರೆ ಸೇವೆಗಳ ಜೊತೆಗೆ ಅದರಲ್ಲೂ ಮರಣದ ದಾವೆ ಸಂದರ್ಭದಲ್ಲಿ ಮೃತ ಪಾಲಿಸಿದಾರರ ಕುಟುಂಬಕ್ಕೆ ಕ್ಲೇಮ್ ಪತ್ರಗಳನ್ನು ಸರಿಯಾಗಿ ತುಂಬಿ ಸಲ್ಲಿಸಲು ನೆರವಾಗುತ್ತಾನೆ. ದಾವೆ ಮೊತ್ತವನ್ನು ಕೊಡಿಸುವಲ್ಲಿ ಸಹಕಾರಿಯಾಗುತ್ತಾನೆ.

ಆನ್‌ಲೈನ್‌ ಖರೀದಿ
* ಪಾಲಿಸಿ ಕೊಳ್ಳುವವರೇ ಇರುವ ಯೋಜನೆಗಳಲ್ಲಿ ಯಾವುದು ಸೂಕ್ತವೆಂದು ಆಯ್ದುಕೊಂಡು ಖರೀದಿಸಬೇಕು.
* ಖರೀದಿಸುವವರೇ ಪ್ರಪೋಸಲ್ ಫಾರ್ಮ್‌ನಲ್ಲಿರುವ ಎಲ್ಲಾ ವಿವರಗಳನ್ನು ತುಂಬಬೇಕಾಗುತ್ತದೆ. ಕೆಲವೊಂದು ವಿವರಗಳನ್ನು ತುಂಬುವಲ್ಲಿ ಮರೆತು ಹೋಗಬಹುದು. ಆ ಕಾರಣದಿಂದ ಮಹತ್ವದ ವಿಷಯಗಳನ್ನು ತಿಳಿಸದಿರುವ ಕಾರಣ ಕ್ಲೇಮ್ ಸಂದರ್ಭದಲ್ಲಿ ಕ್ಲೇಮ್ ಹಣವನ್ನು ನಿರಾಕರಿಸಬಹುದು.
* ಪಾಲಿಸಿ ಅವಧಿಯಲ್ಲಿ ಎಲ್ಲಾ ಸೇವೆಗಳನ್ನು ತಾವೇ ಖುದ್ದಾಗಿ ಹೋಗಿ ಪಡೆಯುವುದು ಅನಿವಾರ್ಯ.
* ಮರಣದ ದಾವೆ ಸಂದರ್ಭದಲ್ಲಿ ಪಾಲಿಸಿದಾರರ ಕುಟುಂಬವು ನೇರವಾಗಿ ವಿಮಾ ಕಂಪನಿಯನ್ನು ಸಂಪರ್ಕಿಸಿ ಕ್ಲೇಮ್ ಫಾರ್ಮಗಳನ್ನು ಸರಿಯಾಗಿ ತುಂಬಿ ಸಲ್ಲಿಸಲು ಪರದಾಡಬೇಕಾಗಬಹುದು.

ಹೀಗಾಗಿ ಜೀವ ವಿಮಾ ಪಾಲಿಸಿಗಳನ್ನು ತಮಗೆ ಪರಿಚಯವಿರುವ ಹಾಗೂ ವೃತ್ತಿನಿರತ ಪ್ರತಿನಿಧಿಗಳಿಂದ ಪಡೆಯುವುದು ಹೆಚ್ಚು ಪ್ರಯೋಜನಕಾರಿ.

ಪ್ರತಿಕ್ರಿಯಿಸಿ (+)