ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ 73 ಲಕ್ಷ ವೈಯಕ್ತಿಕ ಹೂಡಿಕೆದಾರರು (ಶೇ 91ರಷ್ಟು) ವಾಯಿದಾ ವಹಿವಾಟಿನಲ್ಲಿ (ಎಫ್ ಆ್ಯಂಡ್ ಒ) ನಷ್ಟ ಅನುಭವಿಸಿದ್ದಾರೆ. ಪ್ರತಿ ಹೂಡಿಕೆದಾರರಿಗೆ ಸರಾಸರಿ ₹1.2 ಲಕ್ಷ ನಷ್ಟವಾಗಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ವರದಿ ತಿಳಿಸಿದೆ.
2021–22ರಿಂದ 2023–24ರ ಅವಧಿಯಲ್ಲಿ ಶೇ 93ರಷ್ಟು ಹೂಡಿಕೆದಾರರು ಸರಾಸರಿ ₹2 ಲಕ್ಷ ನಷ್ಟ ಅನುಭವಿಸಿದ್ದಾರೆ. ಒಟ್ಟಾರೆ ಈ ನಷ್ಟದ ಪ್ರಮಾಣ ₹1.8 ಲಕ್ಷ ಕೋಟಿಯಾಗಿದೆ. 2023–24ನೇ ಆರ್ಥಿಕ ವರ್ಷದಲ್ಲಿ ₹75 ಸಾವಿರ ಕೋಟಿ ನಷ್ಟ ಕಂಡಿದ್ದಾರೆ ಎಂದು ವಿವರಿಸಿದೆ.
ಪ್ರಮುಖ ಸ್ತರದ 4 ಲಕ್ಷ ಹೂಡಿಕೆದಾರರ ಪೈಕಿ ಶೇ 3.5ರಷ್ಟು ಹೂಡಿಕೆದಾರರು ಸರಾಸರಿ ₹28 ಲಕ್ಷ ನಷ್ಟ ಅನುಭವಿಸಿದ್ದಾರೆ. ಇದು ವಹಿವಾಟು ತೆರಿಗೆಯನ್ನೂ ಒಳಗೊಂಡಿದೆ. ಶೇ 1ರಷ್ಟು ಹೂಡಿಕೆದಾರರು ಮಾತ್ರ ₹1 ಲಕ್ಷ ಗಳಿಕೆ ಕಂಡಿದ್ದಾರೆ ಎಂದು ಹೇಳಿದೆ.
2021-22ರಲ್ಲಿ ಹೂಡಿಕೆದಾರರ ಸಂಖ್ಯೆ 51 ಲಕ್ಷ ಇತ್ತು. 2023–24ರ ವೇಳೆಗೆ 96 ಲಕ್ಷಕ್ಕೆ ಮುಟ್ಟಿದೆ. ವಾಯಿದಾ ವಹಿವಾಟಿನಲ್ಲಿ ಕ್ಷಿಪ್ರ ಬೆಳವಣಿಗೆ ಆಗಿದೆ. ನಷ್ಟದಿಂದ ಪಾರಾಗಲು ಹೂಡಿಕೆದಾರರಿಗೆ ಶಿಕ್ಷಣ ಮತ್ತು ರಿಸ್ಕ್ ನಿರ್ವಹಣೆ ಕುರಿತ ಕೌಶಲದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
2022–23ರಲ್ಲಿ30 ವರ್ಷದೊಳಗಿನ ಹೂಡಿಕೆದಾರರ ಸಂಖ್ಯೆ ಶೇ 31ರಷ್ಟಿತ್ತು. ಇದು 2023–24ರ ವೇಳೆಗೆ ಶೇ 43ರಷ್ಟಕ್ಕೆ ಏರಿಕೆಯಾಗಿದೆ. ಈ ಪೈಕಿ ಶೇ 93ರಷ್ಟು ಹೂಡಿಕೆದಾರರು ನಷ್ಟ ಕಂಡಿದ್ದಾರೆ ಎಂದು ವಿವರಿಸಿದೆ.