ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ದರ ಏರಿಕೆ: ಬೆಂಗಳೂರಲ್ಲಿ ₹100ರ ಗಡಿ ದಾಟಿದ ಪೆಟ್ರೋಲ್ ಬೆಲೆ

Last Updated 18 ಜೂನ್ 2021, 10:55 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಬೆಲೆಯು ಬೆಂಗಳೂರಿನಲ್ಲಿ ಲೀಟರ್‌ಗೆ ₹ 100ರ ಗಡಿಯನ್ನು ಶುಕ್ರವಾರ ದಾಟಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹ 100.17 ಆಗಿದೆ. ದೇಶದಲ್ಲಿ ಪೆಟ್ರೋಲ್ ಬೆಲೆಯು ₹ 100ಕ್ಕಿಂತ ಜಾಸ್ತಿ ಆಗಿರುವ ಮೂರನೆಯ ಮಹಾನಗರ ಬೆಂಗಳೂರು.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶುಕ್ರವಾರ ಪೆಟ್ರೋಲ್ ಬೆಲೆಯಲ್ಲಿ 27 ಪೈಸೆ, ಡೀಸೆಲ್ ಬೆಲೆಯಲ್ಲಿ 28 ಪೈಸೆ ಹೆಚ್ಚಳ ಮಾಡಿವೆ. ಮೇ ತಿಂಗಳ 4ನೆಯ ತಾರೀಕಿನ ನಂತರ ತೈಲ ಬೆಲೆಯಲ್ಲಿ ಆಗಿರುವ 26ನೆಯ ಹೆಚ್ಚಳ ಇದು. 26 ಬಾರಿ ಬೆಲೆ ಹೆಚ್ಚಳದ ಪರಿಣಾಮವಾಗಿ ಪೆಟ್ರೋಲ್ ಬೆಲೆಯು ₹ 6.53ರಷ್ಟು, ಡೀಸೆಲ್ ಬೆಲೆಯು ₹ 6.96ರಷ್ಟು ತುಟ್ಟಿ ಆಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ಈಗಾಗಲೇ ₹ 100ರ ಗಡಿಯನ್ನು ದಾಟಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಶಿರಸಿ ಮತ್ತು ಬಳ್ಳಾರಿಯಲ್ಲಿ ಪೆಟ್ರೋಲ್ ದರವು ₹ 100ರ ಗಡಿಯನ್ನು ದಾಟಿತ್ತು.

ದೇಶದಲ್ಲಿ ಪೆಟ್ರೋಲ್ ಬೆಲೆ ಮೊದಲ ಬಾರಿಗೆ ₹ 100ರ ಗಡಿ ದಾಟಿದ್ದು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ. ಇಲ್ಲಿ ಈಗ ಪೆಟ್ರೋಲ್ ಬೆಲೆ ₹ 108.07. ಇಲ್ಲಿ ಈಗ ಡೀಸೆಲ್ ಬೆಲೆ ಕೂಡ ₹ 100ರ ಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT