ಬುಧವಾರ, ಮೇ 12, 2021
26 °C

ವಾರದಲ್ಲಿ ಪೆಟ್ರೋಲ್‌ ₹4.04, ಡೀಸೆಲ್‌ ₹ 3.82 ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಏಳನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಮಾಡಿವೆ.

ಜೂನ್‌ 7 ರಿಂದ 13ರವರೆಗೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ ₹ 3.82ರಂತೆ ಹೆಚ್ಚಾಗಿ ₹ 77.59ಕ್ಕೆ ಹಾಗೂ ಡೀಸೆಲ್‌ ದರ ₹ 3.88 ರಂತೆ ಹೆಚ್ಚಾಗಿ ₹69.78ಕ್ಕೆ ಏರಿಕೆಯಾಗಿದೆ. ಸ್ಥಳೀಯ ಮಾರಾಟ ತೆರಿಗೆ ಇಲ್ಲವೆ ‘ವ್ಯಾಟ್‌’ನಿಂದಾಗಿ ಮಾರಾಟ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸಗೊಳ್ಳುತ್ತದೆ.

ದೇಶದಾದ್ಯಂತ ಶನಿವಾರ ಪ್ರತಿಲೀಟರ್ ಪೆಟ್ರೋಲ್‌ ದರ 61 ಪೈಸೆ ಮತ್ತು ಡೀಸೆಲ್‌ ದರ 56 ಪೈಸೆ ಹೆಚ್ಚಿಸಲಾಗಿದೆ. ಮಾರ್ಚ್‌ ತಿಂಗಳ ಮಧ್ಯಭಾಗದಿಂದ ಇಂಧನ ದರ ಏರಿಕೆಯನ್ನು ನಿಲ್ಲಿಸಲಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಆಗಿದ್ದ ಇಳಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕ ಹೆಚ್ಚಿಸಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಕಂಪನಿಗಳು ಅದನ್ನು ಭರಿಸಬೇಕಿತ್ತು. ಆದರೆ, ಇದೀಗ ಕಂಪನಿಗಳು ದಿನದಿಂದ ದಿನಕ್ಕೆ ಇಂಧನ ದರದಲ್ಲಿ ಏರಿಕೆ ಮಾಡಲಾರಂಭಿಸಿವೆ.

ಕಾಂಗ್ರೆಸ್‌ ಟೀಕೆ: ಪೆಟ್ರೋಲ್‌, ಡೀಸೆಲ್‌ ಮೇಲೆ ಗರಿಷ್ಠ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಬೀಳುವಂತೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ದರ 15 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೂ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗುತ್ತಲೇ ಇದೆ. ಮೋದಿ ಆಳ್ವಿಕೆಯಲ್ಲಿ ಜನಸಾಮಾನ್ಯರು ನಿರಂತರವಾಗಿ ನರಳುವಂತಾಗಿದೆ’ ಎಂದು ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್‌ ಹೇಳಿದ್ದಾರೆ.

‘ಕಚ್ಚಾತೈಲ ದರ ಕುಸಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲಾಗಿ ಸತತ ಏಳನೇ ದಿನವೂ ದರ ಹೆಚ್ಚಿಸಲಾಗಿದೆ.

‘ಆರು ದಿನಗಳಲ್ಲಿ ದರ ಏರಿಕೆ ಮಾಡುವ ಮೂಲಕ ಸರ್ಕಾರ ₹44 ಸಾವಿರ ಕೋಟಿ ಗಳಿಸಿಕೊಂಡಿದೆ. ಮಾರ್ಚ್‌ 5ರಿಂದ ಸರ್ಕಾರ ₹ 2.5 ಲಕ್ಷ ಕೋಟಿ ಗಳಿಸಿಕೊಂಡಿದೆ. ಕಂಪನಿಗಳು ಮತ್ತು ಸರ್ಕಾರಕ್ಕೆ ಅನುಕೂಲ ಮಾಡಿಕೊಡುವ ಬದಲಾಗಿ ಇಂಧನ ದರ ಇಳಿಸುವ ಮೂಲಕ ಪ್ರಧಾನಿ ಅವರು ಜನರಿಗೆ ಸಹಾಯ ಮಾಡಿಕೊಡಬಹುದಿತ್ತು’ ಎಂದು ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು