ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್‌: ಮಾರ್ಚ್‌ನಲ್ಲಿ ಪೆಟ್ರೋಲ್‌ ಮಾರಾಟ ಶೇ 17 ಇಳಿಕೆ

Last Updated 2 ಏಪ್ರಿಲ್ 2020, 7:53 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಕೈಗೊಳ್ಳಲಾಗಿರುವ ಲಾಕ್‌ಡೌನ್‌ನಿಂದ ವಾಹನಗಳ ಸಂಚಾರಕ್ಕೂ ನಿರ್ಬಂಧವಿರುವುದರಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ಮಾರಾಟದಲ್ಲಿ ಭಾರೀ ಇಳಿಕೆ ದಾಖಲಾಗಿದೆ. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ, ಈ ವರ್ಷ ಮಾರ್ಚ್‌ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶೇ 17ರಷ್ಟು ಕಡಿಮೆ ಪೆಟ್ರೋಲ್‌ ಹಾಗೂ ಡೀಸೆಲ್‌ ಶೇ 26ರಷ್ಟು ಕಡಿಮೆ ಮಾರಾಟ ಮಾಡಿವೆ.

ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಹಾಗೂ ಭಾರತ್‌ ಪೆಟ್ರೋಲಿಯಂ ದೇಶದ ಶೇ 90ರಷ್ಟು ರಿಟೇಲ್‌ ತೈಲ ಮಾರಾಟ ಕೇಂದ್ರಗಳನ್ನು ಹೊಂದಿವೆ.

ಮಾರ್ಚ್‌ನಲ್ಲಿ ಪೆಟ್ರೋಲ್‌ ಮಾರಾಟ 1.94 ಮಿಲಿಯನ್ ಟನ್‌ ಹಾಗೂ ಡೀಸೆಲ್‌ ಮಾರಾಟ 4.98 ಮಿಲಿಯನ್‌ ಟನ್‌ಗಳಿಗೆ ಇಳಿಕೆಯಾಗಿರುವುದಾಗಿ ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿನಗಳ ಲಾಕ್‌ಡೌನ್‌ ಏಪ್ರಿಲ್‌–14ರಂದು ಕೊನೆಯಾಗಲಿದೆ. ಸಂಚಾರ ನಿರ್ಬಂಧಗಳಿಂದಾಗಿ ವಿಮಾನಗಳಿಗೆ ಬಳಕೆಯಾಗುವ ಏವಿಯೇಷನ್‌ ಟರ್ಬೈನ್‌ ಇಂಧನದ ಮಾರಾಟ ಸಹ ಶೇ 33ರಷ್ಟು ಇಳಿಕೆಯಾಗಿ 4,50,000 ಟನ್‌ಗಳಿಗೆ ಕಡಿಮೆಯಾಗಿದೆ.

ದೇಶದಲ್ಲಿ ಎಲ್‌ಪಿಜಿ ಅಡುಗೆ ಅನಿಲ ಬಳಕೆಯು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮಾರ್ಚ್‌ನಲ್ಲಿ ಶೇ 1.7ರಷ್ಟು ಹೆಚ್ಚಳವಾಗಿದೆ. 2.3 ಮಿಲಿಯನ್‌ ಟನ್‌ಗಳಷ್ಟು ಬಳಕೆಯಾಗಿದೆ. ಲಾಕ್‌ಡೌನ್‌ ಘೊಷಣೆಗೂ ಮುನ್ನ ದೇಶದಲ್ಲಿ ಶಾಲೆ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ಶಾಪಿಂಗ್‌ ಮಾಲ್‌ಗಳು ಹಾಗೂ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಲಾಯಿತು. ಸಾಮೂಹಿಕ ಆಚರಣೆಗಳು, ಕಾರ್ಯಕ್ರಮಗಳನ್ನು ನಿರ್ಬಂಧಿಸುವಂತೆ ಸೂಚಿಸಲಾಗಿತ್ತು.

ಸಾರ್ವಜನಿಕ ಸಾರಿಗೆಗಳು, ಖಾಸಗಿ ವಾಹನಗಳ ಸಂಚಾರ ನಿರ್ಬಂಧ ಹಾಗೂ ಕೈಗಾರಿಕೆಗಳು ಕಾರ್ಯಸ್ಥಗಿತಗೊಳಿಸಿರುವುದರಿಂದ ಸರಕು–ಸಾಗಣೆ ವಾಹನಗಳ ಸಂಚಾರವೂ ಇಲ್ಲದಾಗಿದೆ. ಹೀಗಾಗಿ ಇಂಧನ ಬಳಕೆ ಪ್ರಮಾಣ ಇಳಿಕೆಯಾಗಿದೆ. ಎಲ್ಲರೂ ಮನೆಯಲ್ಲಿಯೇ ಇರುವುದು, ಹೊಟೇಲ್‌ಗಳಿಗೆ ತೆರಳಿ ಊಟ–ತಿಂಡಿ ಮಾಡುವುದಕ್ಕೆ ನಿರ್ಬಂಧಿಸಿರುವುದರಿಂದಮನೆಯಲ್ಲಿಯೇ ಅಡುಗೆ ಸಿದ್ಧ ಮಾಡುವುದು ಹೆಚ್ಚಿದೆ. ಇದರಿಂದಾಗಿ ಎಲ್‌ಪಿಜಿ ಸಿಲಿಂಡರ್‌ ಬಳಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT