ಸೋಮವಾರ, ಜನವರಿ 20, 2020
27 °C

ಬಜೆಟ್‌ಗೆ 130 ಕೋಟಿ ಭಾರತೀಯರ ಸಲಹೆ ಕೋರಿದ ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ – ಸಂಗ್ರಹ ಚಿತ್ರ

ನವದೆಹಲಿ: ದೇಶದ ಆರ್ಥಿಕ ವೃದ್ಧಿ ದರ ಇಳಿಮುಖವಾಗಿದೆ, ಆರ್ಥಿಕತೆಗೆ ಚೇತರಿಕೆ ನೀಡಲು ಹಲವು ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 2020–21ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಯೂ ಆಗಲಿದೆ. ಅದಕ್ಕೂ ಮುನ್ನ ಸಲಹೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಕೇಳಿದ್ದಾರೆ. 

'130 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಕೇಂದ್ರ ಬಜೆಟ್‌ ಪ್ರತಿನಿಧಿಸುತ್ತದೆ ಹಾಗೂ ದೇಶದ ಅಭಿವೃದ್ಧಿಗೆ ಹಾದಿ ತೋರುತ್ತದೆ. ಈ ವರ್ಷದ ಬಜೆಟ್‌ಗಾಗಿ ನಿಮ್ಮಲ್ಲಿರುವ ಯೋಜನೆಗಳು ಹಾಗೂ ಸಲಹೆಗಳನ್ನು ನೀಡುವಂತೆ ಆಹ್ವಾನಿಸುತ್ತಿದ್ದೇನೆ' ಎಂದು ಪ್ರಧಾನಿ ಮೋದಿ ಮೈಗೌಇಂಡಿಯಾ ಟ್ವಿಟರ್‌ ಖಾತೆಯ ಲಿಂಕ್‌ ಹಂಚಿಕೊಂಡಿದ್ದಾರೆ. 

ಕೇಂದ್ರ ಬಜೆಟ್‌ ಮಂಡನೆಗೆ ಇನ್ನು ಮೂರು ವಾರಗಳಷ್ಟೇ ಬಾಕಿ ಉಳಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಹನ್ನೊಂದು ವರ್ಷಗಳ ಕಡಿಮೆ ಪ್ರಮಾಣ ಶೇ 5ಕ್ಕೆ ಕುಸಿಯುವ ಅಂದಾಜು ಸರ್ಕಾರದಿಂದಲೇ ಹೊರಬಂದಿದೆ. ಬಂಡವಾಳ ಮತ್ತು ಹೂಡಿಕೆ ಬಹುತೇಕ ನಿಂತ ನೀರಾಗಿದೆ ಎಂದು ವಿಶ್ಲೇಷಿಸಲಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಈ ವರ್ಷದಲ್ಲಿ ಹೂಡಿಕೆ ಪ್ರಮಾಣ ಶೇ 1ಕ್ಕೆ ಕುಸಿಯಲಿದೆ. 

ಅಮೆರಿಕ ಮತ್ತು ಇರಾನ್‌ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದ್ದು, ಇದರಿಂದ ಭಾರತದ ಆರ್ಥಿಕತೆಯ ಮೇಲೆ ಮತ್ತಷ್ಟು ಹೊರೆಯಾಗಿಸಿದೆ. 

ಭಾರತ 2025ರ ವೇಳೆಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದುವ ಮಹತ್ವಾಕಾಂಕ್ಷೆ ಹೊಂದಿದೆ. ಇದನ್ನು ಸಾಧಿಸಲು 2020ರಲ್ಲಿ ಭಾರತದ ಜಿಡಿಪಿ ₹ 225 ಲಕ್ಷ ಕೋಟಿಯಷ್ಟು ಬೆಳವಣಿಗೆ ಕಾಣಬೇಕಿದೆ ಎಂದು ಎಸ್‌ಬಿಐ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು