ಬುಧವಾರ, ಜನವರಿ 20, 2021
25 °C

ಡಿಸೆಂಬರ್‌ನಲ್ಲಿ ತಗ್ಗಿದ ಚಿಲ್ಲರೆ ಹಣದುಬ್ಬರ ದರ?

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿಸೆಂಬರ್‌ ತಿಂಗಳಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರದಲ್ಲಿ ಹೆಚ್ಚಿನ ಕುಸಿತ ಆಗಿರುವ ಸಾಧ್ಯತೆ ಇದೆ ಎಂಬುದನ್ನು ರಾಯಿಟರ್ಸ್‌ ಸುದ್ದಿಸಂಸ್ಥೆ ನಡೆಸಿದ ಸಮೀಕ್ಷೆಯು ಕಂಡುಕೊಂಡಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಹಿತಕರ ಮಟ್ಟಕ್ಕೆ ಹಣದುಬ್ಬರ ತಗ್ಗಿರುವ ಸಾಧ್ಯತೆಯೂ ಇದೆ ಎಂದು ಅದು ಹೇಳಿದೆ.

ತರಕಾರಿ ಮತ್ತು ಆಹಾರ ಉತ್ಪನ್ನಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ ಆಗಿರುವುದರಿಂದಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣ ಕಡಿಮೆ ಆಗಿರಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಜನವರಿ 5ರಿಂದ 7ರ ನಡುವಿನ ಅವಧಿಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಒಟ್ಟು 45 ಜನ ಅರ್ಥಶಾಸ್ತ್ರಜ್ಞರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅವರು ಹೇಳಿರುವ ಪ್ರಕಾರ ಡಿಸೆಂಬರ್‌ ತಿಂಗಳಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 5.28ರಷ್ಟಕ್ಕೆ ತಗ್ಗಿದೆ. ಹಣದುಬ್ಬರ ಪ್ರಮಾಣವು ನವೆಂಬರ್ ತಿಂಗಳಲ್ಲಿ ಶೇಕಡ 6.93ರಷ್ಟು ಇತ್ತು.

‘ಆಹಾರ ಉತ್ಪನ್ನಗಳ ಹಣದುಬ್ಬರ, ಅದರಲ್ಲೂ ಮುಖ್ಯವಾಗಿ ತರಕಾರಿಗಳ ಹಣದುಬ್ಬರ ಪ್ರಮಾಣ, ತಗ್ಗುತ್ತಿದೆ. ಇದಕ್ಕೆ ಒಂದು ಪ್ರಮುಖ ಕಾರಣ ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಪರಿಹಾರ ಕಾಣುತ್ತಿರುವುದು’ ಎಂದು ಎಕ್ಸಿಸ್‌ ಕ್ಯಾಪಿಟಲ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಪೃಥ್ವಿರಾಜ್ ಶ್ರೀನಿವಾಸ್ ಹೇಳಿದ್ದಾರೆ. ಹಣದುಬ್ಬರದ ಪ್ರಮಾಣವನ್ನು ಶೇ 2ರಿಂದ ಶೇ 6ರ ನಡುವೆ ನಿಯಂತ್ರಿಸುವುದು ಆರ್‌ಬಿಐನ ಗುರಿ. ಆದರೆ, 2020ರ ಏಪ್ರಿಲ್‌ನಿಂದ ಈಚೆಗೆ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ.

ಸಮೀಕ್ಷೆಯಲ್ಲಿ ಹೇಳಿದಂತೆಯೇ ಹಣದುಬ್ಬರ ಇಳಿಕೆ ಕಂಡರೆ, 2019ರ ನವೆಂಬರ್‌ ನಂತರದ ಅತ್ಯಂತ ಕಡಿಮೆ ಹಣದುಬ್ಬರ ಪ್ರಮಾಣ ಇದಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು