ಗಾಂಧಿನಗರ: ‘ದೇಶದಲ್ಲಿ 2030ರ ವೇಳೆಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ₹32.45 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಮತ್ತು ಪ್ರದರ್ಶನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ಆರು ವರ್ಷದಲ್ಲಿ 500 ಗಿಗಾ ವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.
ನವೀಕರಿಸಬಹುದಾದ ಇಂಧನ ಉತ್ಪಾದಕರು ಹೆಚ್ಚುವರಿಯಾಗಿ 340 ಗಿಗಾ ವಾಟ್ ಸಾಮರ್ಥ್ಯದ ಸೌರ ಫಲಕಗಳು, 240 ಗಿಗಾ ವಾಟ್ ಸಾಮರ್ಥ್ಯದ ಸೌರ ಕೋಶಗಳು, 22 ಗಿಗಾ ವಾಟ್ ಸಾಮರ್ಥ್ಯದ ವಿಂಡ್ ಟರ್ಬೈನ್‌ಗಳು ಮತ್ತು 10 ಗಿಗಾ ವಾಟ್ ಸಾಮರ್ಥ್ಯದ ವಿದ್ಯುದ್ವಿಭಜಕಗಳನ್ನು ಅಳವಡಿಕೆ ಮಾಡಲಿದ್ದಾರೆ ಎಂದರು.
ಪಿಎಂ–ಕುಸುಮ್ ಯೋಜನೆಯಡಿ 1 ಲಕ್ಷ ಸೌರ ಪಂಪ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಪಿಎಂ ಸೂರ್ಯ ಘರ್ ಯೋಜನೆಯಡಿ 3.56 ಲಕ್ಷ ಮನೆಗಳ ತಾರಸಿ ಮೇಲೆ ಸೌರ ಫಲಕ ಅಳವಡಿಸಲಾಗಿದೆ ಎಂದು ವಿವರಿಸಿದರು.
ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಹಭಾಗಿತ್ವದಡಿ ಸಚಿವಾಲಯದಿಂದ ಆಯೋಜಿಸಿರುವ ಈ ಆರ್‌ಇ–ಇನ್ವೆಸ್ಟ್‌ನಲ್ಲಿ 7 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.