ಕೊರತೆ ಆತಂಕ: 10 ಲಕ್ಷ ಟನ್ ತೊಗರಿ ಬೇಳೆ ಆಮದಿಗೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ತೊಗರಿ ಬೇಳೆಯ ಕೊರತೆ ಎದುರಾಗಬಹುದು ಎಂಬ ನಿರೀಕ್ಷೆ ಹೊಂದಿರುವ ಕೇಂದ್ರ ಸರ್ಕಾರವು, ಈ ವರ್ಷದಲ್ಲಿ ದೇಶಿ ಬೇಡಿಕೆ ಪೂರೈಸಲು ಉತ್ತಮ ಗುಣಮಟ್ಟದ ಅಂದಾಜು 10 ಲಕ್ಷ ಟನ್ ತೊಗರಿ ಬೇಳೆಯನ್ನು ವರ್ತಕರ ಮೂಲಕ ಆಮದು ಮಾಡಿಕೊಳ್ಳಲು ಯೋಜಿಸಿದೆ.
ಬೇಳೆಕಾಳುಗಳು, ಈರುಳ್ಳಿ ಹಾಗೂ ಇತರ ಕೆಲವು ಅಗತ್ಯ ವಸ್ತುಗಳ ಬೆಲೆ ಬಗ್ಗೆ ಪರಾಮರ್ಶೆ ನಡೆಸಲು ಕೇಂದ್ರ ಸಂಪುಟ ಕಾರ್ಯದರ್ಶಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.
2022–23ನೆಯ ಬೆಳೆ ವರ್ಷದಲ್ಲಿ (ಜುಲೈನಿಂದ ಜೂನ್‌ವರೆಗಿನ ಅವಧಿ) ತೊಗರಿ ಉತ್ಪಾದನೆಯು 38.9 ಲಕ್ಷ ಟನ್‌ಗೆ ಇಳಿಕೆಯಾಗುವ ಅಂದಾಜು ಇದೆ. ಹಿಂದಿನ ವರ್ಷದಲ್ಲಿ 43.4 ಲಕ್ಷ ಟನ್ ತೊಗರಿ ಉತ್ಪಾದನೆ ಆಗಿತ್ತು.
‘ಹವಾಮಾನ ಚೆನ್ನಾಗಿಲ್ಲದಿರುವುದು ಹಾಗೂ ನೆಟೆ ರೋಗದ ಕಾರಣದಿಂದಾಗಿ ಕಲಬುರಗಿ ಭಾಗದಲ್ಲಿ ಬೆಳೆ ಕಡಿಮೆ ಆಗುವ ಸಾಧ್ಯತೆ ಇದೆ. ತೊಗರಿ ಬೇಳೆಯನ್ನು ಆಮದು ಮಾಡಿಕೊಂಡು, ಉತ್ಪಾದನೆಯಲ್ಲಿ ಆಗುವ ಕೊರತೆಯನ್ನು ತುಂಬಿಕೊಳ್ಳುವ ಯೋಚನೆ ಇದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ದೇಶಿ ಮಾರುಕಟ್ಟೆಯಲ್ಲಿ ತೊಗರಿ ಬೇಳೆಯು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗಬೇಕು ಎಂದಾದರೆ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಡಿಸೆಂಬರ್‌ನಿಂದ ನವೆಂಬರ್‌ವರೆಗಿನ ಅವಧಿ) 10 ಲಕ್ಷ ಟನ್ ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಹಿಂದಿನ ವರ್ಷದಲ್ಲಿ ಅಂದಾಜು 7.6 ಲಕ್ಷ ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳಲಾಗಿತ್ತು.
ತೊಗರಿ ಬೇಳೆ ಆಮದಿಗೆ ಖಾಸಗಿ ವರ್ತಕರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಡಿಸೆಂಬರ್‌ನಲ್ಲಿ ಅಂದಾಜು 2 ಲಕ್ಷ ಟನ್ ತೊಗರಿ ಬೇಳೆ ಆಮದು ಆಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ತೊಗರಿ ಬೇಳೆಯನ್ನು ಹೆಚ್ಚಾಗಿ ಪೂರ್ವ ಆಫ್ರಿಕಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಮ್ಯಾನ್ಮಾರ್‌ನಿಂದಲೂ ಇದು ಆಮದಾಗುತ್ತದೆ. ಈ ದೇಶಗಳಿಂದ ಅಂದಾಜು 11–12 ಲಕ್ಷ ಟನ್ ತೊಗರಿ ಬೇಳೆ ಲಭ್ಯವಾಗಲಿದೆ. ತೊಗರಿ ಬೇಳೆ ಆಮದಿಗೆ 2024ರ ಮಾರ್ಚ್ 31ರವರೆಗೆ ಯಾವ ನಿರ್ಬಂಧಗಳೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.