ಶುಕ್ರವಾರ, ಏಪ್ರಿಲ್ 23, 2021
27 °C

ಪ್ರಶ್ನೋತ್ತರ | ನಾವು ರೈತರು. ನಮಗೂ ಆರ್ಥಿಕ ಸಲಹೆ ನೀಡಿ

ಯು.ಪಿ. ಪುರಾಣಿಕ ಬ್ಯಾಂಕಿಂಗ್ ಹಣಕಾಸು ತಜ್ಞ Updated:

ಅಕ್ಷರ ಗಾತ್ರ : | |

* ಬಿ.ವಿ. ಶ್ರೀನಿವಾಸ್, ರೈತ, ಬೊಮ್ಮನಹಳ್ಳಿ

ಸಂಬಳ ಪಡೆಯುವ ಹಾಗೂ ಪಿಂಚಣಿದಾರರಿಗೆ ಮಾತ್ರ ಆರ್ಥಿಕ ಸಲಹೆ ನೀಡುತ್ತಿದ್ದೀರಿ. ನಾವು ರೈತರು. ನಮಗೂ ಆರ್ಥಿಕ ಸಲಹೆ ನೀಡಿ.

ಉತ್ತರ: ಹಣಕಾಸು ನಿರ್ವಹಣೆ ಸಂಬಂಧ ಯಾವ ವರ್ಗದ ಯಾವ ವಯಸ್ಸಿನವರು ಏನೇ ಪ್ರಶ್ನೆ ಕೇಳಿದರೂ ನಾನು ಸಂತೋಷವಾಗಿ ಉತ್ತರಿಸುತ್ತೇನೆ. ರೈತರು ಹಳ್ಳಿಯಲ್ಲಿ ವಾಸಿಸುತ್ತಾರೆ. ಆ ಪ್ರದೇಶದಲ್ಲಿ ಬ್ಯಾಂಕುಗಳು ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಅಂಚೆ ಕಚೇರಿ ಇದ್ದೇ ಇರುತ್ತದೆ. ಮೊದಲು, ರೈತ ಕುಟುಂಬದ ಎಲ್ಲಾ ಸದಸ್ಯರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲಿ. ಈ ಖಾತೆ ತೆರೆಯಲು ಬೇಕಾಗುವ ಕನಿಷ್ಠ  ಮೊತ್ತ ₹ 100 ಮಾತ್ರ. ನೌಕರರು ತಿಂಗಳ ಸಂಬಳ ಪಡೆಯುವುದರಿಂದ ಅವರಿಗೆ ಮಾತ್ರ ಆರ್.ಡಿ. ಸೂಕ್ತ. ಆದರೆ ರೈತರಿಗೆ ವಾರ್ಷಿಕವಾಗಿ ಬೆಳೆ ಬಂದು ಹಣ ಕೂಡಾ ವಾರ್ಷಿಕವಾಗಿ ಕೈಸೇರುತ್ತದೆ. ಹಾಗೆ ಬರುವ ದೊಡ್ಡ ಮೊತ್ತದಲ್ಲಿ ಕನಿಷ್ಠ ಶೇ 25 ರಷ್ಟು, ಮಕ್ಕಳ ವಿದ್ಯಾಭ್ಯಾಸ, ಮದುವೆಗೋಸ್ಕರ 5 ವರ್ಷಗಳ ಅವಧಿ ಠೇವಣಿ ಅಂಚೆ ಕಚೇರಿಯಲ್ಲಿ ಮಾಡಲಿ. ಈ ಪ್ರಕ್ರಿಯೆ ನಿರಂತರವಾಗಿ ಪ್ರತೀ ವರ್ಷ ನಡೆಯಲಿ. ಇನ್ನು ಹಾಲು, ತರಕಾರಿ, ಹಣ್ಣು ಈ ಉತ್ಪನ್ನಗಳಿಂದ ವಾರ ವಾರ ಬರುವ ಆದಾಯದಲ್ಲಿ ಕನಿಷ್ಠ ಶೇ 50ರಷ್ಟು ಸರಿಸಮಾನವಾಗಿ ಎಲ್ಲರ ಉಳಿತಾಯ ಖಾತೆಗೆ ಜಮಾ ಮಾಡಲಿ. ಇದರಿಂದ ಕುಟುಂಬದ ಸದಸ್ಯರು ಖುಷಿ ಪ‍ಡುತ್ತಾರೆ.

* ಎಸ್. ನಾಗೇಶ್ ರಾವ್, ಬೆಂಗಳೂರು

2015 ರಿಂದ I.T. Return ತುಂಬಲಿಲ್ಲ. ಈಗ ತುಂಬಬಹುದೆ?

ಉತ್ತರ: ಹಾಗೆ I.T. Return ತುಂಬಲು ಬರುವುದಿಲ್ಲ. ಆದರೆ, ಆದಾಯ ತೆರಿಗೆ ಲೆಕ್ಕ ಹಾಕಿ ಚಲನ್ ಮೂಲಕ ದಂಡ ತುಂಬಿ ಪುರಾವೆ ಇಟ್ಟುಕೊಳ್ಳಬಹುದು. ನೋಟಿಸ್ ಬಂದಲ್ಲಿ ಹೀಗೆ ಮಾಡಿದಾಗ ಸಹಾಯವಾದೀತು. ತೆರಿಗೆ ಸಲಹೆಗಾರರನ್ನು ವಿಚಾರಿಸಿ.

* ಗೋಪಾಲ್, ರಾಯಚೂರು

ನಾಲ್ಕು ಜನ ಮಕ್ಕಳು. 3 ಹೆಣ್ಣು 1 ಗಂಡು. ಮೊದಲೆರಡು ಹೆಣ್ಣು ಮಕ್ಕಳು ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮಗ ಹಾಗೂ ಕೊನೆಯ ಮಗಳು ವಿದ್ಯಾವಂತರಾಗಿ ಯಾವ ಕೆಲಸಕ್ಕೂ ಹೋಗದೆ ನಮಗೆ ಬಹಳ ತೊಂದರೆ ಕೊಡುತ್ತಾರೆ. ನನಗೆ 30X45 ಅಳತೆಯ ನಿವೇಶನ ಇದೆ. ನನ್ನ ಹಿರಿಯ ಹಾಗೂ ಎರಡನೇ ಮಗಳಿಗೆ Gift Deed ಮಾಡಿಕೊಡ ಬೇಕೆಂದಿದ್ದೇನೆ. ನಂತರ ಉಳಿದ ಮಕ್ಕಳಿಂದ ತೊಂದರೆ ಆದೀತೇ.

ಉತ್ತರ: ನಿಮ್ಮ ಪರಿಸ್ಥಿತಿ ನೋಡಿ ದುಃಖವಾಗಿದೆ. ಆದರೆ ಇಂದಿನ ಕಾಲದಲ್ಲಿ ಇದೊಂದು ಸಾಮಾನ್ಯ ವಿಚಾರ, ನೀವು ಹೊಂದಿದ 30X45 ಅಳತೆ ನಿವೇಶನ ಸ್ವಯಾರ್ಜಿತವಾದಲ್ಲಿ ನೀವು ಮಕ್ಕಳಿಗೆ ಮಾತ್ರವಲ್ಲ ಯಾರಿಗೆ ಬೇಕಾದರೂ (Gift)  ದಾನ ಮಾಡಬಹುದು. ಇಲ್ಲಿ ಕಾನೂನು ತೊಡಕು ಅಥವಾ ಉಳಿದವರ ತಕರಾರು ನಡೆಯುವುದಿಲ್ಲ. ಕಿವಿಮಾತು; ಯಾವುದೇ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ತನ್ನಲ್ಲಿರುವ ಸಂಪೂರ್ಣ ಸ್ಥಿರ ಆಸ್ತಿ ಬಂಗಾರ ಮಕ್ಕಳಿಗೆ ವರ್ಗಾಯಿಸುವುದು ಸರಿಯಲ್ಲ. ನೀವು ಹೀಗೆ ದಾನ ಕೊಟ್ಟ ನಂತರ ಅವರು ನೋಡಿ ಕೊಳ್ಳುತ್ತಾರೆ ಎನ್ನುವ ಭರವಸೆ ಎಲ್ಲಿದೆ! ಇದಕ್ಕೆ ಬದಲಾಗಿ ನಿವೇಶನ ಮಾರಾಟ ಮಾಡಿ ಬರುವ ಹಣ ಹೆಂಡತಿ ಹೆಸರಿನಲ್ಲಿ ಅವಧಿ ಠೇವಣಿ ಇರಿಸಿ, ಬೇಕಾದವರಿಗೆ ನಾಮ ನಿರ್ದೇಶನ ಮಾಡಿ. ನಿವೇಶನ ಮಾರಾಟ ಮಾಡುವುದಾಗಲಿ, ಬೇಕಾದವರಿಗೆ ದಾನ ‍ಪತ್ರ ಮಾಡಿಕೊಡುವುದಾಗಲಿ ಅಥವಾ ಠೇವಣಿ ಇರಿಸುವುದಾಗಲಿ ಗೌಪ್ಯವಾಗಿರಲಿ. ಬಳ್ಳಾರಿಯ ರಾಮಪ್ಪ ಅವರಿಗೂ ಇಲ್ಲಿ ಉತ್ತರ ಸಿಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು