ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ಚೇತರಿಕೆಗೆ ಆರ್‌ಬಿಐ ಕ್ರಮ

ಗೃಹ ಸಾಲ ಅಗ್ಗ, ಸೂಚ್ಯಂಕ, ರೂಪಾಯಿ ಕುಸಿತ, ಚಿನ್ನ ತುಟ್ಟಿ
Last Updated 7 ಆಗಸ್ಟ್ 2019, 18:44 IST
ಅಕ್ಷರ ಗಾತ್ರ

ಬೆಂಗಳೂರು: ಮಂದಗತಿಯಲ್ಲಿ ಸಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಅಲ್ಪಾವಧಿ ಬಡ್ಡಿ ದರವನ್ನು (ರೆಪೊ) ಶೇ 0.35ರಷ್ಟು ತಗ್ಗಿಸಿದೆ.

ಇದರ ಪರಿಣಾಮವಾಗಿ ಗೃಹ, ವಾಹನ ಸಾಲಗಳು ಅಗ್ಗವಾಗಲಿವೆ. ಆರ್ಥಿಕ ದರದ ಮುನ್ನೋಟವನ್ನು (ಶೇ 6.9) ಆರ್‌ಬಿಐ ತಗ್ಗಿಸಿರುವ ನಿರ್ಧಾರಕ್ಕೆ ಷೇರುಪೇಟೆಯು ನಿರುತ್ಸಾಹದಿಂದ ಪ್ರತಿಕ್ರಿಯಿಸಿದೆ.

ಇನ್ನೊಂದೆಡೆ ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ರೂಪಾಯಿ ದರದ ಕುಸಿತ ಮುಂದುವರೆದಿದೆ. ಚಿನ್ನದ ಬೆಲೆ ಇನ್ನಷ್ಟು ತುಟ್ಟಿಯಾಗಿದೆ.

ಗೃಹ ಸಾಲ ಅಗ್ಗ

ರೆಪೊ ದರ ಕಡಿಮೆಯಾಗಿರುವುದರಿಂದ ಗೃಹ ಮತ್ತು ವಾಹನ ಖರೀದಿ ಸಾಲದ ಮಾಸಿಕ ಸಮಾನ ಕಂತು (ಇಎಂಐ) ಮತ್ತು ಉದ್ದಿಮೆಗಳು ಪಡೆಯುವ ಸಾಲದ ಮೇಲಿನ ಬಡ್ಡಿ ದರ ಅಗ್ಗವಾಗಲಿವೆ. ಆರ್‌ಬಿಐ ನಿರ್ಧಾರದ ಬೆನ್ನಲ್ಲೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ 0.15ರಷ್ಟು ತಗ್ಗಿಸಿದೆ. ಗೃಹ ಸಾಲಗಳು ಶೇ 0.35ರಷ್ಟು ಅಗ್ಗವಾಗಲಿವೆ.

ಷೇರುಪೇಟೆಯಲ್ಲಿ ಉಡುಗಿದ ಉತ್ಸಾಹ

ಆರ್‌ಬಿಐ ಬಡ್ಡಿ ದರ ತಗ್ಗಿಸಿದ್ದರೂ, ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಕಂಡು ಬರಲಿಲ್ಲ. ಹಲವು ಪ್ರತಿಕೂಲತೆಗಳ ಕಾರಣಕ್ಕೆ ಆರ್ಥಿಕತೆಯು ನಿರೀಕ್ಷಿಸಿದ ಮಟ್ಟದಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಕ್ಷೀಣಿಸಿದೆ. ಆರ್ಥಿಕ ವೃದ್ಧಿ ದರವನ್ನು ಶೇ 7ರಿಂದ ಶೇ 6.9ಕ್ಕೆ ಅಂದಾಜಿಸಲಾಗಿದೆ. ಇದೆಲ್ಲವೂ ಹೂಡಿಕೆದಾರರ ಖರೀದಿ ಉತ್ಸಾಹ ಕುಗ್ಗಿಸಿವೆ. ಬ್ಯಾಂಕ್‌, ಹಣಕಾಸು ವಾಹನ ತಯಾರಿಕೆ ಮತ್ತು ರಿಯಾಲಿಟಿ ಷೇರುಗಳು ನಷ್ಟಕ್ಕೆ ಗುರಿಯಾದವು.

5ನೇ ದಿನವೂ ರೂಪಾಯಿ ಕುಸಿತ

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವನ್ನು ತಗ್ಗಿಸಿರುವುದು ಡಾಲರ್‌ ಎದುರಿನ ರೂಪಾಯಿ ವಿನಿಮಯ ದರದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ.

ಸತತ ಐದನೇ ದಿನವೂ ಕುಸಿತ ಮುಂದುವರೆದಿದ್ದು, ಬುಧವಾರದ ವಹಿವಾಟಿನಲ್ಲಿ 8 ಪೈಸೆ ಕಡಿಮೆಯಾಗಿ ₹ 70.89ಕ್ಕೆ ಇಳಿದಿದೆ. ಐದು ದಿನದಲ್ಲಿ 210 ಪೈಸೆಗಳಿಗೆ ಎರವಾಗಿದೆ. ಅಮೆರಿಕ ಮತ್ತು ಚೀನಾ ನಡುವಣ ವ್ಯಾಪಾರಕ್ಕೆ ಸಂಬಂಧಿಸಿದ ಉದ್ವಿಗ್ನತೆಯು ರೂಪಾಯಿ ವಿನಿಮಯ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ದುಬಾರಿಯಾದ ಚಿನ್ನ

ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಚಿನ್ನದ ದರ ಗಮನಾರ್ಹ ಏರಿಕೆ ಕಂಡಿದೆ. ದೆಹಲಿಯಲ್ಲಿ ಸ್ಟ್ಯಾಂಡರ್ಡ್‌ ಚಿನ್ನದ ದರ ತಲಾ 10 ಗ್ರಾಂಗಳಿಗೆ ₹ 1,113ರವರೆಗೆ ಹೆಚ್ಚಳಗೊಂಡು ₹ 37,920ಕ್ಕೆ ತಲುಪಿ ₹ 38 ಸಾವಿರದ ಗಡಿ ಹತ್ತಿರ ಸಾಗಿದೆ. ಬೆಂಗಳೂರಿನಲ್ಲಿ ₹ 833ರಷ್ಟು ಹೆಚ್ಚಳವಾಗಿ ₹ 37,388, ಮುಂಬೈನಲ್ಲಿ ₹ 562 ರಷ್ಟು ಏರಿಕೆಯಾಗಿ ₹ 36,894ಕ್ಕೆ ತಲುಪಿದೆ. ಹೂಡಿಕೆದಾರರು ಚಿನ್ನ ಖರೀದಿಗೆ ಮುಗಿ ಬೀಳುತ್ತಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ.

ಉದ್ಯೋಗ ನಷ್ಟ

ದೇಶದಲ್ಲಿ ವಾಹನ ಮಾರಾಟವು ನಿರಂತರ ಕುಸಿತ ಕಾಣುತ್ತಿರುವುದರಿಂದ ಏಪ್ರಿಲ್‌ನಿಂದ ಈಚೆಗೆ ‌ವಾಹನ ತಯಾರಿಕೆ, ಬಿಡಿಭಾಗ ತಯಾರಿಕೆ ಮತ್ತು ವಿತರಣಾ ಸಂಸ್ಥೆಗಳಿಂದ ಒಟ್ಟಾರೆ 3.50 ಲಕ್ಷ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT