ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರು ಹೊಂದಾಣಿಕೆಗೆ ಆರ್‌ಬಿಐ ಮತ್ತೊಮ್ಮೆ ಅವಕಾಶ

Last Updated 5 ಮೇ 2021, 15:21 IST
ಅಕ್ಷರ ಗಾತ್ರ

ಮುಂಬೈ: ₹ 25 ಕೋಟಿವರೆಗೆ ಸಾಲ ಪಡೆದಿರುವ ವ್ಯಕ್ತಿಗಳು ಹಾಗೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳಿಗೆ ಸಾಲದ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ಪಡೆದುಕೊಳ್ಳುವ ಸೌಲಭ್ಯವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಲ್ಪಿಸಿದೆ.

2020ರಲ್ಲಿ ಸಾಲದ ಮರುಪಾವತಿ ಅವಧಿ ಮರುಹೊಂದಾಣಿಕೆಯ ಪ್ರಯೋಜನ ಪಡೆದುಕೊಳ್ಳದವರಿಗೆ, ಈ ವರ್ಷದ ಮಾರ್ಚ್‌ 31ರವರೆಗೆ ತಮ್ಮ ಸಾಲದ ಕಂತುಗಳನ್ನು ಸರಿಯಾಗಿ ಪಾವತಿ ಮಾಡಿದವರಿಗೆ ಈ ಬಾರಿ ಮರುಹೊಂದಾಣಿಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ತುರ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾಲದ ಮರುಪಾವತಿಯನ್ನು ಗರಿಷ್ಠ ಎರಡು ವರ್ಷಗಳ ಅವಧಿಗೆ ಮರುಹೊಂದಾಣಿಕೆ ಮಾಡಿಕೊಳ್ಳಬಹುದು.

ಹಿಂದಿನ ವರ್ಷವೂ ಮರುಹೊಂದಾಣಿಕೆ ಯೋಜನೆ ಪ್ರಕಟಿಸಿದ್ದ ಆರ್‌ಬಿಐ, ಸಣ್ಣ ಪ್ರಮಾಣದ ಸಾಲಗಳ ಮರುಪಾವತಿಯನ್ನು ಗರಿಷ್ಠ 2 ವರ್ಷಗಳವರೆಗೆ ವಿಸ್ತರಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಿತ್ತು. ಈ ಬಾರಿಯೂ ಸಾಲದ ಮರುಪಾವತಿ ಅವಧಿ ವಿಸ್ತರಣೆ ಅಥವಾ ಬಡ್ಡಿ ದರದ ಮರುಹೊಂದಾಣಿಕೆಯ ಸೌಲಭ್ಯವನ್ನು ಬ್ಯಾಂಕ್‌ಗಳು ಸಾಲಗಾರರಿಗೆ ನೀಡಬಹುದು.

‘ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಅಂತ್ಯದ ವೇಳೆಯಲ್ಲಿ ಭಾರತದ ಅರ್ಥ ವ್ಯವಸ್ಥೆಯು ಬೇರೆ ದೇಶಗಳ ಅರ್ಥ ವ್ಯವಸ್ಥೆಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿತ್ತು. ದೊಡ್ಡ ಮಟ್ಟದ ಬೆಳವಣಿಗೆ ಕಾಣುವ ಸ್ಥಿತಿಯಲ್ಲಿ ಇತ್ತು. ಆದರೆ, ಕೆಲವು ವಾರಗಳ ಅವಧಿಯಲ್ಲಿ ಪರಿಸ್ಥಿತಿಯು ಬಹಳ ಬದಲಾಗಿದೆ’ ಎಂದು ದಾಸ್ ಅವರು ಹೇಳಿದರು.

ಕೋವಿಡ್ ವಿರುದ್ಧ ಹಣಕಾಸು ವಲಯ ನಡೆಸುತ್ತಿರುವ ಹೋರಾಟಕ್ಕೆ ಆರ್‌ಬಿಐ ನೇರವಾಗಿ ಇಳಿದಿದೆ. ಜೀವ ಮತ್ತು ಜೀವನೋಪಾಯದ ಮೇಲೆ ಸ್ಪಷ್ಟ ಗಮನ ಇಟ್ಟುಕೊಂಡು ಈ ಕೆಲಸ ಮಾಡಿದೆ ಎಂದು ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ಅಧ್ಯಕ್ಷ ಉದಯ್ ಕೋಟಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆದ್ಯತಾ ವಲಯಗಳಿಗೆ ಸಾಲ

ಲಸಿಕೆ ತಯಾರಕರಿಗೆ, ಲಸಿಕೆಯನ್ನು ಆಮದು ಮಾಡಿಕೊಂಡು ದೇಶದಲ್ಲಿ ಪೂರೈಕೆ ಮಾಡುವವರಿಗೆ, ಕೆಲವು ಆದ್ಯತೆಯ ವೈದ್ಯಕೀಯ ಉಪಕರಣ ಸಿದ್ಧಪಡಿಸುವ ಕಂಪನಿಗಳಿಗೆ ಸಾಲ ಕೊಡಲು ಬ್ಯಾಂಕ್‌ಗಳಿಗೆ ಒಟ್ಟು ₹ 50 ಸಾವಿರ ಕೋಟಿ ಒದಗಿಸುವುದಾಗಿ ಆರ್‌ಬಿಐ ಪ್ರಕಟಿಸಿದೆ.

ಆಸ್ಪತ್ರೆಗಳು, ಆಮ್ಲಜನಕ ತಯಾರಕರು ಮತ್ತು ಪೂರೈಕೆದಾರರು, ವೆಂಟಿಲೇಟರ್‌ ತಯಾರಕರು ಮತ್ತು ಪೂರೈಕೆದಾರರು, ಕೋವಿಡ್‌ಗೆ ಸಂಬಂಧಿಸಿದ ಔಷಧಗಳನ್ನು ಆಮದು ಮಾಡಿಕೊಳ್ಳುವವರು, ಸರಕು ಸಾಗಣೆ ಕಂಪನಿಗಳಿಗೆ ಕೂಡ ಈ ಮೊತ್ತ ಬಳಸಿ ಸಾಲ ವಿತರಣೆ ಮಾಡಬಹುದು ಎಂದು ಆರ್‌ಬಿಐ ಹೇಳಿದೆ.

ಈ ನಿಧಿಯಿಂದ ನೀಡುವ ಸಾಲ ಮೂರು ವರ್ಷಗಳ ಅವಧಿಯದ್ದಾಗಿರಲಿದೆ. 2022ರ ಮಾರ್ಚ್‌ 31ರವರೆಗೆ ಇದು ಲಭ್ಯವಿರಲಿದೆ.

‘ಕಠಿಣ ಕ್ರಮ ಬೇಡ’

ಕೆವೈಸಿ ನಿಯಮಗಳ ಅಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಗ್ರಾಹಕರಿಗೆ ಆಗದಿದ್ದಲ್ಲಿ, ಅಂತಹ ಗ್ರಾಹಕರ ವಿರುದ್ಧ ಡಿಸೆಂಬರ್‌ ಕೊನೆಯವರೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಬೇಡ ಎಂದು ಆರ್‌ಬಿಐ, ಬ್ಯಾಂಕ್‌ಗಳಿಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT