ಶುಕ್ರವಾರ, ಮೇ 29, 2020
27 °C

ಬೆಳಿಗ್ಗೆ 10ಕ್ಕೆ ಆರ್‌ಬಿಐ ಗವರ್ನರ್ ಸುದ್ದಿಗೋಷ್ಠಿ: ಗರಿಗೆದರಿದೆ ನಿರೀಕ್ಷೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

RBI

ಮುಂಬೈ: ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಟ್ವಿಟರ್ ಮತ್ತು ಯುಟ್ಯೂಬ್‌ಗಳಲ್ಲಿ ಈ ಗೋಷ್ಠಿಯ ನೇರ ಪ್ರಸಾರವಿರಲಿದೆ ಎಂದು ಆರ್‌ಬಿಐ ಹೇಳಿದೆ.

ಜೂನ್‌ 3-5ರ ನಡುವೆ ಆರ್‌ಬಿಐನ ಹಣಕಾಸು ನಿರ್ವಹಣೆ ಸಮಿತಿ ಸಭೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೂ ಮುನ್ನ ಗವರ್ನರ್ ಸುದ್ದಿಗೋಷ್ಠಿ ಕರೆದಿರುವುದು ಕುತೂಹಲ ಹುಟ್ಟುಹಾಕಿದೆ. ಜೂನ್ 5ರಂದು ಆರ್‌ಬಿಐ 2020-21ನೇ ಸಾಲಿನ ಎರಡನೇ ದ್ವೈಮಾಸಿಕ ನೀತಿ ಪ್ರಕಟಿಸುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ಗವರ್ನರ್ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿಯಿದು. ಹೀಗಾಗಿಯೇ ಇದು ಎಲ್ಲರ ಗಮನ ಸೆಳೆದಿದೆ.

ಕೊರೊನಾ ವೈರಸ್ ಪಿಡುಗಿನ ಕಾರಣ ಆರ್‌ಬಿಐ ತನ್ನ ಮೊದಲು ದ್ವೈಮಾಸಿಕ ನೀತಿಯನ್ನು ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ (ಮಾರ್ಚ್ 27) ಘೋಷಿಸಿತ್ತು.

ಸಾಲಗಾರರು (ಉದ್ಯಮಿಗಳು ಇತ್ಯಾದಿ) ಮತ್ತು ಸಾಲದಾತರ (ಬ್ಯಾಂಕ್ ಮತ್ತು ಇತರ ಸಂಸ್ಥೆಗಳು) ಮೇಲಿರುವ ಒತ್ತಡ ಕಡಿಮೆ ಮಾಡಲು ಕೇಂದ್ರ ಬ್ಯಾಂಕ್ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಮ್ಯೂಚುವಲ್ ಫಂಡ್‌ಗಳ ನೆರವಿಗೂ ಕ್ರಮ ಘೋಷಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ ಮತ್ತಷ್ಟು ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದೆ.

ಫೆಬ್ರುವರಿ 2020ರ ಹಣಕಾಸು ನೀತಿ ಸಭೆಯ ನಂತರ ಆರ್‌ಬಿಐ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ 3.2ರಷ್ಟು ಮೊತ್ತದ ಹಣವನ್ನು ಆರ್ಥಿಕತೆಗೆ ಒದಗಿಸಿದೆ. ಹಣಕಾಸು ಲಭ್ಯತೆ (ದ್ರವ್ಯತೆ) ಉತ್ತಮಪಡಿಸುವುದು ಅರ್‌ಬಿಐ ಗುರಿಯಾಗಿತ್ತು.

ಮಾರ್ಚ್ 27ರಂದು ಬೆಂಚ್‌ಮಾರ್ಕ್ ಬಡ್ಡಿದರವನ್ನು 75 ಅಂಶಗಳಷ್ಟು ಕಡಿಮೆ ಮಾಡಿತ್ತು. ಸಾಲಗಾರರು ಬ್ಯಾಂಕ್‌ಗಳಿಗೆ ಕಟ್ಟಬೇಕಾದ ಸಾಲದ ಮೇಲಿನ ಕಂತುಗಳಿಗೆ ಮೂರು ತಿಂಗಳ ವಿರಾಮ ನೀಡಿತ್ತು.

ಈ ತಿಂಗಳ ಆರಂಭದಲ್ಲಿ ಶಕ್ತಿಕಾಂತ್ ದಾಸ್ ಅವರು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ದೇಶದ ಆರ್ಥಿಕ ಸ್ಥಿತಿಗತಿಯ ಮಾಹಿತಿ ಪಡೆದುಕೊಂಡಿದ್ದರು. ರಿಸರ್ವ್ ಬ್ಯಾಂಕ್ ಘೋಷಿಸಿದ್ದ ವಿವಿಧ ಕ್ರಮಗಳ ಅನುಷ್ಠಾನದ ಸ್ಥಿತಿಗತಿಯನ್ನೂ ವಿಚಾರಿಸಿದ್ದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು