ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸತತ 8ನೇ ಬಾರಿ ರೆಪೊ ದರ ಯಥಾಸ್ಥಿತಿ

ಹಣದುಬ್ಬರ ಶೇ 4ರ ಮಿತಿಗೆ ತಲುಪಿದರಷ್ಟೇ ಇಳಿಕೆಗೆ ಕ್ರಮ: ಶಕ್ತಿಕಾಂತ ದಾಸ್‌
Published 7 ಜೂನ್ 2024, 14:35 IST
Last Updated 7 ಜೂನ್ 2024, 14:35 IST
ಅಕ್ಷರ ಗಾತ್ರ

ಮುಂಬೈ: ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರ ನಿರೀಕ್ಷೆಯಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಸತತ ಎಂಟನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. 

ಶುಕ್ರವಾರ ಮುಕ್ತಾಯಗೊಂಡ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಆರು ಸದಸ್ಯರ ಪೈಕಿ ನಾಲ್ವರು, ರೆಪೊ ದರವನ್ನು ಶೇ 6.5ರಲ್ಲಿಯೇ ಕಾಯ್ದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಸಮಿತಿಯ ಬಾಹ್ಯ ಸದಸ್ಯರಾದ ಅಶಿಮಾ ಗೋಯಲ್ ಮತ್ತು ಜಯಂತ್‌ ವರ್ಮಾ ಬಡ್ಡಿದರ ಕಡಿತದ ಪರವಾಗಿ ಮತ ಚಲಾಯಿಸಿದ್ದಾರೆ.

ರೆಪೊ ಆಧಾರಿತ ಗೃಹ, ವಾಹನ ಮತ್ತು ಇತರೆ ಸಾಲ ಪಡೆದಿರುವ ಸಾಲಗಾರರು ಬಡ್ಡಿದರ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಹೊಂದಿದ್ದರು. ಸಮಿತಿಯ ನಿರ್ಧಾರವು ಅವರಿಗೆ ತೀವ್ರ ನಿರಾಸೆ ತಂದಿದೆ. 

ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರೆಪೊ ದರದಲ್ಲಿ ಬದಲಾವಣೆ ಮಾಡಿಲ್ಲ. ಅಲ್ಲದೆ, ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರವು ದೇಶದ ಆರ್ಥಿಕತೆ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂ‌ಬ ನಿರೀಕ್ಷೆಯೊಂದಿಗೆ ಸಮಿತಿಯು ಈ ನಿರ್ಣಯ ಕೈಗೊಂಡಿದೆ. 

‘ದೇಶೀಯ ಬೆಳವಣಿಗೆ ಮತ್ತು ಹಣದುಬ್ಬರ ಆಧಾರದ ಮೇಲೆ ಆರ್‌ಬಿಐನ ಹಣಕಾಸು ನೀತಿಗಳನ್ನು ನಿರ್ಧರಿಸಲಾಗುತ್ತದೆ’ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.  ಹಾಗಾಗಿ, ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿದರ ಕಡಿತಕ್ಕೂ ಮೊದಲೇ ರೆಪೊ ದರವನ್ನು ಕಡಿತಗೊಳಿಸುವ ಸಾಧ್ಯತೆ ಎಂಬ ಆಶಾಭಾವವೂ ಚಿಗುರೊಡೆದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಣದುಬ್ಬರವು ಶೇ 4ರ ಮಿತಿ ಅಥವಾ ಅದಕ್ಕಿಂತ ಕೆಳಗೆ ಇಳಿಕೆಯಾದರಷ್ಟೇ ಆರ್‌ಬಿಐನ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಲು ಸಾಧ್ಯ’ ಎಂದು ಸ್ಪಷ್ಟಪಡಿಸಿದರು.

‘ಆಗಸದಲ್ಲಿ ಮೋಡಗಳು ದಟ್ಟವಾಗಿ ಆವರಿಸುತ್ತಿವೆಯೇ ಅಥವಾ ದೂರ ಪ್ರದೇಶಗಳಿಗೆ ಸರಿದು ಹೋಗುತ್ತಿವೆಯೇ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ. ಸ್ಥಳೀಯ ಹವಾಮಾನ ಹಾಗೂ ಪಿಚ್‌ನ ಸ್ಥಿತಿಗತಿ ನೋಡಿಕೊಂಡು ಆಟ ಆಡುತ್ತೇವೆ’ ಎಂದು ಹೇಳಿದರು.

‘ಡಿಸೆಂಬರ್‌ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇ 3.8ರಷ್ಟು ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಶೇ 5ಕ್ಕಿಂತ ಹೆಚ್ಚು ದಾಖಲಾಯಿತು. ನಿಗದಿತ ಮಿತಿಗೆ ತಲುಪಿ ಸ್ಥಿರಗೊಂಡರೆ ನಮಗೆ ಆತ್ಮವಿಶ್ವಾಸ ಮೂಡುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT