ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧಾರ

Published 8 ಜೂನ್ 2023, 5:18 IST
Last Updated 8 ಜೂನ್ 2023, 5:18 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವ ತೀರ್ಮಾನವನ್ನು ಗುರುವಾರ ನಡೆದ ಸಭೆಯಲ್ಲಿ ಕೈಗೊಂಡಿದೆ.

ಏಪ್ರಿಲ್‌ನಲ್ಲಿ ನಡೆದಿದ್ದ ಸಭೆಯಲ್ಲಿಯೂ ಎಂಪಿಸಿ, ರೆಪೊ ದರದಲ್ಲಿ ಬದಲಾವಣೆ ಮಾಡಿರಲಿಲ್ಲ. ರೆಪೊ ದರವನ್ನು ಶೇಕಡ 6.50ರಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಎಂಪಿಸಿ ಸದಸ್ಯರು ಗುರುವಾರ ಸರ್ವಾನುಮತದಿಂದ ಕೈಗೊಂಡಿದ್ದಾರೆ.

‘ಹೊಂದಾಣಿಕೆಯ ಹಣಕಾಸು ನೀತಿಯನ್ನು ಹಿಂಪಡೆಯುವ’ ನಿಲುವು ತಾಳಲು ಕೂಡ ಎಂಪಿಸಿ ತೀರ್ಮಾನಿಸಿದೆ. ಈ ವರ್ಷದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6ಕ್ಕಿಂತ ಕಡಿಮೆ ಆಗಿದೆ.

‘ಮುಂಗಾರು ಮಳೆ ಹಾಗೂ ಎಲ್ ನಿನೊ ವಿಚಾರವಾಗಿ ಅನಿಶ್ಚಿತತೆಗಳು ಇರುವ ಕಾರಣದಿಂದಾಗಿ ಹಣದುಬ್ಬರ ಪ್ರಮಾಣವು ಎಷ್ಟಾಗಲಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತ ಇರುವುದು ಅನಿವಾರ್ಯ. ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ಕ್ಕೆ ಇಳಿಯುವಂತೆ ಮಾಡುವುದು ನಮ್ಮ ಗುರಿ’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇರಲಿದೆ ಎಂದು ಈ ಮೊದಲು ಮಾಡಿದ್ದ ಅಂದಾಜಿನಲ್ಲಿ ಆರ್‌ಬಿಐ ಯಾವುದೇ ಬದಲಾವಣೆ ಮಾಡಿಲ್ಲ.

ಈಗ ಸ್ಥಿರತೆಯನ್ನು ಕಾಯ್ದುಕೊಂಡು ಬೆಳವಣಿಗೆ ಸಾಧಿಸುವುದು ತನ್ನ ಆದ್ಯತೆ ಎಂದು ಆರ್‌ಬಿಐ ಹೇಳಿದೆ. ರೆಪೊ ದರದಲ್ಲಿ ಬದಲಾವಣೆ ಮಾಡದೆ ಇರುವ ತೀರ್ಮಾನವು ‘ಒಂದು ವಿರಾಮವಿದ್ದಂತೆ, ಅಷ್ಟೆ’ ಎಂದು ದಾಸ್ ಹೇಳಿದ್ದಾರೆ.

ಹಣದುಬ್ಬರ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆ ಆಗದಿದ್ದರೆ, ಜಾಗತಿಕವಾಗಿ ತೀರಾ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗದೆ ಇದ್ದರೆ ರೆಪೊ ದರವು ಬಹುಕಾಲ ಯಥಾಸ್ಥಿತಿಯಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT