ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಹಣಕಾಸು ನೀತಿ: ರೆಪೊ ದರದಲ್ಲಿ ಯಥಾಸ್ಥಿತಿ

Last Updated 5 ಫೆಬ್ರುವರಿ 2021, 15:33 IST
ಅಕ್ಷರ ಗಾತ್ರ

ನವದೆಹಲಿ: ರೆಪೊ ದರ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವ ತೀರ್ಮಾನವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಕೈಗೊಂಡಿದೆ. ಇದರಿಂದಾಗಿ, ವಿವಿಧ ಸಾಲಗಳ ಮೇಲಿನ ಬಡ್ಡಿದರ ತಕ್ಷಣಕ್ಕೆ ಕಡಿಮೆಯಾಗುವ ಸಾಧ್ಯತೆ ಇಲ್ಲ. ಹಾಗೆಯೇ, ನಿಶ್ಚಿತ ಠೇವಣಿಗಳಿಗೆ ನೀಡುವ ಬಡ್ಡಿ ದರವನ್ನು ಕೂಡ ಬ್ಯಾಂಕ್‌ಗಳು ಇನ್ನಷ್ಟು ತಗ್ಗಿಸಲಾರವು ಎಂಬ ನಿರೀಕ್ಷೆ ಇದೆ.

ನಿರ್ದಿಷ್ಟ ವಲಯಗಳಲ್ಲಿ ನಗದು ಹೆಚ್ಚು ಲಭ್ಯವಾಗುವಂತೆ ಮಾಡುವುದು, ಎಂಎಸ್‌ಎಂಇ ವಲಯದ ಕೆಲವು ಉದ್ಯಮಗಳಿಗೆ ಸಾಲ ಸುಲಭದಲ್ಲಿ ಸಿಗುವಂತೆ ಮಾಡುವುದು ಸೇರಿದಂತೆ ಆರ್ಥಿಕ ಪುನಶ್ಚೇತನಕ್ಕೆ ನೆರವಾಗಬಲ್ಲ ಕೆಲವು ಕ್ರಮಗಳನ್ನು ಕೂಡ ಆರ್‌ಬಿಐ ಕೈಗೊಂಡಿದೆ.

ಆರ್‌ಬಿಐ ನಿಗದಿ ಮಾಡಿರುವ ರೆಪೊ ದರ ಈಗ ಶೇಕಡ 4ರಷ್ಟು. ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಹಣದುಬ್ಬರ ಪ್ರಮಾಣವು ಹಿತಕರ ಮಟ್ಟವಾದ ಶೇ 6ಕ್ಕಿಂತಲೂ ಕಡಿಮೆ ಇರುವ ಸಾಧ್ಯತೆ ಇದೆಯಾದ ಕಾರಣ, ಆರ್ಥಿಕ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲುವುದು, ಕೋವಿಡ್–19ರ ದುಷ್ಪರಿಣಾಮವನ್ನು ನಿವಾರಿಸುವುದು ಸದ್ಯದ ತುರ್ತುಗಳು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.

ಮುಂದಿನ ದಿನಗಳಲ್ಲಿ ಭಾರತದ ಅರ್ಥ ವ್ಯವಸ್ಥೆಯ ಚಲನೆಯು ಮೇಲ್ಮುಖವಾಗಿ ಮಾತ್ರ ಇರಲಿದೆ ಎಂದು ದಾಸ್ ವಿಶ್ವಾಸ ವ್ಯಕ್ತಪಡಿಸಿದರು. ಫೆ. 1ರಂದು ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಮಾಡಿರುವ ಹೆಚ್ಚಿನ ಬಂಡವಾಳ ವೆಚ್ಚದ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದರು.‌

2021–22ರಲ್ಲಿ ಕೇಂದ್ರವು ಮಾರುಕಟ್ಟೆಯಿಂದ ಒಟ್ಟು ₹ 12 ಲಕ್ಷ ಕೋಟಿ ಸಾಲ ಎತ್ತುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಾಡಿದೆ. ಕೇಂದ್ರದ ಸಾಲಗಳ ನಿರ್ವಹಣೆ ಮಾಡುವ ಸ್ಥಾನದಲ್ಲಿರುವ ಆರ್‌ಬಿಐ, ಮುಂದಿನ ಆರ್ಥಿಕ ವರ್ಷದಲ್ಲಿ ಸಾಲ ಪಡೆಯುವ ಪ್ರಕ್ರಿಯೆಯನ್ನು ಸುಲಲಿತವಾಗಿ ಪೂರ್ಣಗೊಳಿಸಲಿದೆ ಎಂದು ದಾಸ್ ಹೇಳಿದರು.

ಏಪ್ರಿಲ್‌–ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 5ರಿಂದ ಶೇ 5.2ರ ನಡುವೆ ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಇದು ಅಕ್ಟೋಬರ್‌–ಡಿಸೆಂಬರ್ ಅವಧಿಯಲ್ಲಿ ಶೇ 4.3ಕ್ಕೆ ತಗ್ಗಲಿದೆ ಎಂದು ಕೂಡ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT