ಭಾನುವಾರ, ಅಕ್ಟೋಬರ್ 25, 2020
23 °C

ಆರ್‌ಬಿಐ ತೀರ್ಮಾನ ಸ್ವಾಗತಿಸಿದ ಬ್ಯಾಂಕಿಂಗ್ ವಲಯ

ಪಿಟಿಐ Updated:

ಅಕ್ಷರ ಗಾತ್ರ : | |

RBI

ನವದೆಹಲಿ: ಹಣದುಬ್ಬರವನ್ನು ನಿಯಂತ್ರಿಸುತ್ತಲೇ ಬೆಳವಣಿಗೆಯನ್ನೂ ಸಾಧಿಸುವ ಉದ್ದೇಶದಿಂದ ಆರ್‌ಬಿಐ ರೆಪೊ ದರವನ್ನು ಬದಲಾಯಿಸದೆ, ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿದೆ ಎಂಬ ಅಭಿಪ್ರಾಯವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಿನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಆರ್‌ಬಿಐ ಈ ನಿರ್ಧಾರಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ. 

ಆರ್‌ಬಿಐ ಶುಕ್ರವಾರ ತೆಗೆದುಕೊಂಡ ತೀರ್ಮಾ ನವು ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ನಗದು ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದ್ದಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅಭೀಕ್ ಬರುವಾ ಹೇಳಿದ್ದಾರೆ.

‘ಈಗ ತೆಗೆದು ಕೊಂಡಿರುವ ತೀರ್ಮಾನವನ್ನು ಗಮನಿಸಿದರೆ, ಫೆಬ್ರುವರಿಯಲ್ಲಿ ರೆಪೊ ದರದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕಡಿತ ಆಗುವ ಸಾಧ್ಯತೆಗಳು ಇವೆ. ಡಿಸೆಂಬರ್‌ನಲ್ಲಿ ರೆಪೊ ದರ ಕಡಿತ ಆಗಲಿಕ್ಕಿಲ್ಲ. ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲುವ ಉದ್ದೇಶದಿಂದ ಆರ್‌ಬಿಐ ಮಿತಿ ಮೀರಿದ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹಿಂದೆಂದೂ ಕಾಣದ ಸ್ಥಿತಿಯನ್ನು ಅರ್ಥ ವ್ಯವಸ್ಥೆ ಎದುರಿಸುತ್ತಿದೆ. ಅಗತ್ಯ ಪ್ರಮಾಣದ ಹಣಕಾಸಿನ ನೆರವು ಇಲ್ಲದಿರುವುದು ದೇಶದ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ತೊಡಕಾಗಿದೆ’ ಎಂದು ಅವರು ಹೇಳಿದ್ದಾರೆ.

‘ಶುಕ್ರವಾರದ ತೀರ್ಮಾನವು ಸಕಾರಾತ್ಮಕವಾಗಿದೆ, ಬೆಳವಣಿಗೆಗೆ ಇಂಬು ಕೊಡುವಂತೆ ಇದೆ. ಅರ್ಥ ವ್ಯವಸ್ಥೆಯನ್ನು ಮತ್ತೆ ಮೇಲೆತ್ತುವತ್ತ ಗಮನ ಹರಿಸಬೇಕು ಎಂದು ಆರ್‌ ಬಿಐ ಗವರ್ನರ್ ಹೇಳಿರುವುದು ಸರಿ ಯಾಗಿಯೇ ಇದೆ. ನಗದು ಲಭ್ಯತೆಯ ವಿಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಆರ್‌ಬಿಐ ಹೇಳಿರುವುದು ಮಾರುಕಟ್ಟೆಗಳಿಗೆ ಭರವಸೆ ನೀಡುವಂತಿದೆ. ಹಾಗೆಯೇ, ಸಾಲ ಪಡೆಯುವ ತೀರ್ಮಾನವನ್ನು ಸುಲಲಿತವಾಗಿ ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ಅನುಕೂಲ ಆಗಲಿದೆ’ ಎಂದು ಇಂಡಿಯನ್ ಬ್ಯಾಂಕ್‌ನ ಸಿಇಒ ಪದ್ಮಜಾ ಚುಂದುರು ಹೇಳಿದ್ದಾರೆ.

‘ಇಂದಿನ ತೀರ್ಮಾನವು ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವ ಹಾಗೂ ಬೆಳವಣಿಗೆಯನ್ನು ಸಾಧಿಸುವ ಸಮಗ್ರ ಉದ್ದೇಶ ಹೊಂದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದು ಆರ್‌ಬಿಐ ಕಳೆದ ಒಂಬತ್ತು ತಿಂಗಳುಗಳಿಂದ ಪಾಲಿಸಿಕೊಂಡು ಬಂದಿರುವ ನಿಲುವಿನ ಮುಂದುವರಿಕೆಯೂ ಹೌದು. ಹಣ ದುಬ್ಬರವು ತಗ್ಗಿದ ನಂತರ ಆರ್‌ಬಿಐ ರೆಪೊ ದರ ಇಳಿಸಲು ಮನಸ್ಸು ಮಾಡಬಹುದು’ ಎಂದು ಲಕ್ಷ್ಮೀವಿಲಾಸ ಬ್ಯಾಂಕ್‌ ಖಜಾನೆ ಮುಖ್ಯಸ್ಥ ಆರ್.ಕೆ. ಗುರುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು