ಗುರುವಾರ , ಅಕ್ಟೋಬರ್ 24, 2019
21 °C

ಹಬ್ಬದ ಉತ್ಸವ; ದಾಖಲೆ ವಹಿವಾಟು: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಗ್ರಾಹಕರು ಹೆಚ್ಚಳ

Published:
Updated:

ನವದೆಹಲಿ: ಹಬ್ಬದ ಮಾರಾಟದ ಮೊದಲ ಹಂತದಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ ಎಂದು ಇ–ಕಾಮರ್ಸ್‌ ದೈತ್ಯ ಸಂಸ್ಥೆಗಳಾದ ಅಮೆಜಾನ್‌ ಡಾಟ್‌ ಇನ್‌ ಮತ್ತು ವಾಲ್‌ಮಾರ್ಟ್‌ ಮಾಲೀಕತ್ವದ ಫ್ಲಿಪ್‌ಕಾರ್ಟ್‌ ಹೇಳಿಕೊಂಡಿವೆ.

ಸೆಪ್ಟೆಂಬರ್‌ 29ರಿಂದ ಆರಂಭಗೊಂಡಿದ್ದ ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಮತ್ತು ಫ್ಲಿಪ್‌ಕಾರ್ಟ್‌ನ ‘ಬಿಗ್‌ ಬಿಲಿಯನ್‌ ಡೇಸ್‌’ (ಬಿಬಿಡಿ) ಹಬ್ಬದ ಮಾರಾಟ ಅಕ್ಟೋಬರ್‌ 4ರಂದು ಕೊನೆಗೊಂಡಿದೆ. ಈ ಬಾರಿ ಗ್ರಾಮೀಣ ಭಾಗದ ಗ್ರಾಹಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಆನ್‌ಲೈನ್‌ ಖರೀದಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ವಹಿವಾಟಿನ ಗಾತ್ರ ಗಮನಾರ್ಹವಾಗಿ ಹೆಚ್ಚಳಗೊಂಡಿದೆ.

ಆನ್‌ಲೈನ್‌ ತಾಣದಲ್ಲಿ ವಹಿವಾಟು ಗಣನೀಯವಾಗಿ ಹೆಚ್ಚಳಗೊಳ್ಳಲು ಉತ್ಪನ್ನಗಳ ಆಯ್ಕೆಗೆ ವಿಪುಲ ಅವಕಾಶ, ಅನುಕೂಲತೆ ಮತ್ತು ಕೈಗೆಟುಕುವ ಬೆಲೆ ಮುಖ್ಯ ಕಾರಣವಾಗಿದೆ ಎಂದು ಅಮೆಜಾನ್‌ ಅಭಿಪ್ರಾಯಪಟ್ಟಿದೆ. ಅಗ್ಗದ ಬೆಲೆ, ಗ್ರಾಹಕರ ಜತೆ ವಿಡಿಯೊ ಸಂವಾದ, ಹಿಂದಿ ಭಾಷೆಯಲ್ಲಿನ ಮಾಹಿತಿಯಿಂದಾಗಿ ‘ಬಿಬಿಡಿ’ನಲ್ಲಿನ ಮಾರಾಟವು ಶೇ 50ರಷ್ಟು ಗ್ರಾಹಕರನ್ನು ಹೊಸದಾಗಿ ಸೆಳೆದಿದೆ ಎಂದು ಫ್ಲಿಪ್‌ಕಾರ್ಟ್‌ ತಿಳಿಸಿದೆ.

‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ನ ಮೊದಲ ಹಂತವು ಭರ್ಜರಿ ಯಶಸ್ಸು ಕಂಡಿದೆ. 500 ನಗರಗಳಲ್ಲಿನ 65 ಸಾವಿರ ಮಾರಾಟಗಾರರ ಉತ್ಪನ್ನಗಳು ಮಾರಾಟಗೊಂಡಿವೆ. ದೇಶದ ಮೂಲೆ ಮೂಲೆಯಿಂದ ಬೇಡಿಕೆ ಕಂಡುಬಂದಿದೆ. ಹೊಸ ಗ್ರಾಹಕರಲ್ಲಿ ಶೇ 88ರಷ್ಟು ಜನರು ಸಣ್ಣ ಪಟ್ಟಣಗಳಿಗೆ ಸೇರಿದವರಿದ್ದಾರೆ’ ಎಂದು ಅಮೆಜಾನ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಮಿತ್‌ ಅಗರ್‌ವಾಲ್‌ ಹೇಳಿದ್ದಾರೆ.

‘ಹಿಂದಿನ ವರ್ಷದ ವಹಿವಾಟಿಗೆ ಹೋಲಿಸಿದರೆ ಈ ಬಾರಿ ಹೊಸ ಗ್ರಾಹಕರು ಮತ್ತು ಮಾರಾಟಗಾರರ ಸಂಖ್ಯೆಯು ಶೇ 50ರಷ್ಟು ಹೆಚ್ಚಳಗೊಂಡಿದೆ. ಫ್ಯಾಷನ್‌, ಮೊಬೈಲ್‌ ಫೋನ್‌, ಗೃಹೋಪಯೋಗಿ ಸಲಕರಣೆ, ಪೀಠೋಪಕರಣಗಳ ಮಾರಾಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ’ ಎಂದು ಫ್ಲಿಪ್‌ಕಾರ್ಟ್‌ ಗ್ರೂಪ್‌ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ನಡೆಯಲಿರುವ ಎರಡನೆ ಹಂತದ ಮಾರಾಟ ಉತ್ಸವದಲ್ಲಿ ವಹಿವಾಟು ಇನ್ನಷ್ಟು ಹೆಚ್ಚಳಗೊಳ್ಳಲಿದೆ ಎಂದು ಈ ಎರಡೂ ಸಂಸ್ಥೆಗಳು ನಿರೀಕ್ಷಿಸಿವೆ.

ಸ್ನ್ಯಾಪ್‌ಡೀಲ್‌ ವಹಿವಾಟು: ‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ವಹಿವಾಟು ಶೇ 52ರಷ್ಟು ಏರಿಕೆ ಕಂಡಿದೆ’ ಎಂದು ಇ–ಕಾಮರ್ಸ್‌ನ ಇನ್ನೊಂದು ತಾಣವಾಗಿರುವ ಸ್ನ್ಯಾಪ್‌ಡೀಲ್‌ ಸ್ಥಾಪಕ ಕುನಾಲ್ ಬಾಹ್ಲ್‌ ಹೇಳಿದ್ದಾರೆ.

ಅಂಕಿ ಅಂಶ

-₹ 24 ಸಾವಿರ ಕೋಟಿ; ಒಟ್ಟಾರೆ ವಹಿವಾಟಿನ ಮೊತ್ತ

-60ರಿಂದ 65 %; ವಹಿವಾಟಿನ ವಾರ್ಷಿಕ ಬೆಳವಣಿಗೆ ದರ

-3.20 ಕೋಟಿ; ಹಬ್ಬದ ಉತ್ಸವದಲ್ಲಿ ಭಾಗಿಯಾಗಿದ್ದ ಆನ್‌ಲೈನ್‌ ಖರೀದಿದಾರರ ಸಂಖ್ಯೆ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)