ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಶುಲ್ಕ ಕಟ್ಟಲು ಒಡವೆಗಳ ಮಾರಿದೆ: ಲಂಡನ್‌ ಕೋರ್ಟ್‌ನಲ್ಲಿ ಅನಿಲ್‌ ಅಂಬಾನಿ

Last Updated 26 ಸೆಪ್ಟೆಂಬರ್ 2020, 11:49 IST
ಅಕ್ಷರ ಗಾತ್ರ

ಲಂಡನ್‌: ಕಾನೂನು ಶುಲ್ಕ ಭರಿಸಲು ಎಲ್ಲ ಆಭರಣಗಳನ್ನು ಮಾರಾಟ ಮಾಡಿದ್ದು, ನನ್ನ ಖರ್ಚು ವೆಚ್ಚಗಳನ್ನು ನನ್ನ ಪತ್ನಿ ಮತ್ತು ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ ಎಂದು ರಿಲಯನ್ಸ್‌ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ ಲಂಡನ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಚೀನಾ ಮೂಲದ ಮೂರು ಬ್ಯಾಂಕ್‌ಗಳು ಲಂಡನ್‌ನಲ್ಲಿ ಅನಿಲ್‌ ಅಂಬಾನಿ ವಿರುದ್ಧ ಮೊಕದ್ದಮೆ ಹೂಡಿದ್ದು, ವಿಡಿಯೊ ಲಿಂಕ್‌ ಮೂಲಕ ಅನಿಲ್‌ ವಿಚಾರಣೆಗೆ ಹಾಜರಾದರು. ಏಷ್ಯಾದ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಸೋದರ ಅನಿಲ್‌ ಅಂಬಾನಿ.

ದುಬಾರಿ ಬೆಲೆಯ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದೇನೆ ಎಂಬ ವರದಿಗಳು ಮಾಧ್ಯಮಗಳ 'ಊಹಾಪೋಹಗಳು' ಎಂದಿರುವ ಅವರು, ತಮ್ಮ ತಾಯಿ ಮತ್ತು ಮಗನಿಂದ ಸಾಲ ಪಡೆದಿರುವುದಾಗಿಯೂ ಕೋರ್ಟ್‌ಗೆ ತಿಳಿಸಿದ್ದಾರೆ. ಮೂರು ಗಂಟೆಗಳಿಗೂ ಹೆಚ್ಚು ಅನಿಲ್‌ ಅವರಿಗೆ ಆಸ್ತಿ–ಪಾಸ್ತಿ, ಖರ್ಚು–ವೆಚ್ಚ ಹಾಗೂ ಸಾಲ–ಸೋಲದ ಕುರಿತು ಪ್ರಶ್ನಿಸಲಾಗಿದೆ. ಖಾಸಗಿಯಾಗಿ ವಿಚಾರಣೆ ನಡೆಸುವಂತೆ ಮಾಡಿದ್ದ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಇಂಡಸ್ಟ್ರಿಯಲ್‌ ಆ್ಯಂಡ್ ಕಮರ್ಷಿಯಲ್‌ ಬ್ಯಾಂಕ್‌ ಆಫ್‌ ಚೀನಾ ಲಿ., (ಮುಂಬೈ ಶಾಖೆ), ಚೀನಾ ಡೆವಲಪ್ಮೆಂಟ್‌ ಬ್ಯಾಂಕ್‌ ಹಾಗೂ ಎಕ್ಸಿಮ್‌ ಬ್ಯಾಂಕ್‌ ಆಫ್‌ ಚೀನಾ ದಾಖಲಿಸಿರುವ 900 ಮಿಲಿಯನ್‌ ಡಾಲರ್‌ (6,632 ಕೋಟಿ ರೂ.) ಸಾಲದ ಪ್ರಕರಣದಲ್ಲಿ ಈ ವರೆಗೂ 717 ಮಿಲಿಯನ್‌ ಡಾಲರ್‌ (ಸುಮಾರು 5,284 ಕೋಟಿ ರೂ.) ಸಾಲಗಳಿಗೆ ಸಂಬಂಧಿಸಿದ ಆದೇಶಗಳನ್ನು ಪಡೆದುಕೊಂಡಿದೆ.

ಅನಿಲ್‌ ಅಂಬಾನಿ ಅವರ ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ 2012ರಲ್ಲಿ ವೈಯಕ್ತಿಕ ಭದ್ರತೆ ಆಧಾರದಲ್ಲಿ ಮೂರು ಚೀನಾ ಬ್ಯಾಂಕ್‌ಗಳು 925 ಮಿಲಿಯನ್‌ ಡಾಲರ್‌ ಸಾಲ ನೀಡಿದ್ದವು. 21 ದಿನಗಳಲ್ಲಿ ಸಾಲದ ಭಾಗವಾಗಿ ಬ್ಯಾಂಕ್‌ಗಳಿಗೆ 717 ಮಿಲಿಯನ್‌ ಡಾಲರ್‌ ಪಾವತಿಸುವಂತೆ ಮೇನಲ್ಲಿ ಯುಕೆ ಕೋರ್ಟ್‌ ಅನಿಲ್‌ ಅವರಿಗೆ ಆದೇಶಿಸಿತ್ತು. ಆದರೆ, ನಿರ್ದೇಶಿಸಿದ ಮೊತ್ತ ಪಾವತಿಸದ ಕಾರಣ ಅವರ ಎರಡು ವರ್ಷಗಳ ಕ್ರೆಡಿಟ್‌ ಕಾರ್ಡ್‌ ವಿವರಗಳು, 1,00,000 ಡಾಲರ್‌ ಮೌಲ್ಯದ ವೈಯಕ್ತಿಕ ಆಸ್ತಿಗಳ ಮಾಹಿತಿ ನೀಡುವಂತೆ ಕೋರ್ಟ್‌ ಕೇಳಿತ್ತು.

ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ ಹಾಗೂ ಅವರ ಪತ್ನಿ ಟೀನಾ ಅಂಬಾನಿಗೆ ಐಷಾರಾಮಿ ಹಡಗು ಉಡುಗೊರೆಯಾಗಿ ನೀಡಿದ್ದಾರೆ ಎಂದು ಬ್ಯಾಂಕ್‌ಗಳ ಪರ ವಕೀಲ ಬಂಕಿಮ್‌ ಥ್ಯಾಂಕಿ ಆರೋಪಿಸಿದ್ದಾರೆ. ಐಷಾರಾಮಿ ಮಳಿಗೆಗಳಲ್ಲಿಯೂ ಕ್ರೆಡಿಟ್‌ ಕಾರ್ಡ್‌ ಬಳಸಿ ಬಹಳಷ್ಟು ಖರೀದಿ ನಡೆಸಿದ್ದಾರೆ ಎಂದೂ ಹೇಳಿದ್ದಾರೆ.

ಆದರೆ, ತಮ್ಮ ತಾಯಿ ಖರೀದಿ ನಡೆಸಿರುವುದಾಗಿ ಅನಿಲ್‌ ಅಂಬಾನಿ ಕೋರ್ಟ್‌ಗೆ ತಿಳಿಸಿದ್ದಾರೆ. ಹಾಗೇ, ಸಮುದ್ರದ ಪ್ರಯಾಣ ತಮಗೆ ಆಗಿ ಬರುವುದಿಲ್ಲ, ತನಗೆ 61 ವರ್ಷ ವಯಸ್ಸು, ಶಿಸ್ತು ಬದ್ಧ ಜೀವನ ಸಾಗಿಸುತ್ತಿದ್ದೇನೆ ಹಾಗೂ ಕುಡಿಯುವ ಅಥವಾ ಸಿಗರೇಟು ಸೇವನೆ ಅಭ್ಯಾಸಗಳಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT