ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಪರಿಣಾಮ; ಚಿಲ್ಲರೆ ಹಣದುಬ್ಬರ 3 ತಿಂಗಳ ಗರಿಷ್ಠ

Last Updated 13 ಡಿಸೆಂಬರ್ 2021, 21:52 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರ ದರವು ನವೆಂಬರ್‌ನಲ್ಲಿ ಶೇಕಡ 4.91ಕ್ಕೆ ಏರಿಕೆ ಕಂಡಿದೆ. ಇದು ಮೂರು ತಿಂಗಳ ಗರಿಷ್ಠ ಪ್ರಮಾಣ. ಆಹಾರ ಮತ್ತು ಇಂಧನ ಬೆಲೆ ಜಾಸ್ತಿ ಆಗಿದ್ದು ಇತರ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಹಣದುಬ್ಬರ ಪ್ರಮಾಣ ಕೂಡ ಜಾಸ್ತಿ ಆಗಿದೆ ಎಂದು ತಜ್ಞರು ಹೇಳಿದ್ದಾರೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರ ಪ್ರಮಾಣವು ಹೆಚ್ಚಳ ಆಗಿದ್ದರೂ ಅದು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿ ಮಾಡಿಕೊಂಡಿರುವ ಗರಿಷ್ಠ ಪ್ರಮಾಣವಾದ ಶೇ 6ಕ್ಕಿಂತ ಕಡಿಮೆ ಮಟ್ಟದಲ್ಲಿಯೇ ಉಳಿದಿದೆ ಎಂಬುದನ್ನು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

ಇಂಧನ ಹಾಗೂ ಆಹಾರ ವಸ್ತುಗಳನ್ನು ಹೊರತುಪಡಿಸಿ, ಇತರ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ನವೆಂಬರ್‌ನಲ್ಲಿ ಶೇ 6.1ಕ್ಕೆ ಏರಿಕೆ ಆಗಿದೆ. ಇದು ಅಕ್ಟೋಬರ್‌ನಲ್ಲಿ ಶೇ 5.8ರಷ್ಟಿತ್ತು.

‘ಹಣದುಬ್ಬರದ ಹೆಚ್ಚಳದಲ್ಲಿ ಇಂಧನ ಮತ್ತು ಸರಕು ಸಾಗಣೆ ವೆಚ್ಚಗಳು ಮುಖ್ಯ ಪಾತ್ರ ವಹಿಸಿವೆ. ಆದರೆ, ವೆಚ್ಚ ಹೆಚ್ಚಳದ ಎಷ್ಟು ಪಾಲನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗಿದೆ ಎಂಬುದು ಬೇಡಿಕೆ ಎಷ್ಟಿದೆ ಎನ್ನುವುದನ್ನೂ ಆಧರಿಸಿರುತ್ತದೆ’ ಎಂದು ನೈಟ್ ಫ್ರ್ಯಾಂಕ್‌ ಇಂಡಿಯಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ವಿವೇಕ್ ರಾಠಿ ಹೇಳಿದ್ದಾರೆ.

ಉತ್ಪಾದನೆಯಲ್ಲಿ ಬಳಸುವ ವಸ್ತುಗಳ ಬೆಲೆ ಹೆಚ್ಚಳದ ಕಾರಣದಿಂದಾಗಿ ಹಲವು ವಲಯಗಳಲ್ಲಿನ ಉತ್ಪಾದಕರು ಬೆಲೆ ಏರಿಕೆ ಮಾಡಿದ್ದಾರೆ. ನವೆಂಬರ್‌ ತಿಂಗಳ ಚಿಲ್ಲರೆ ಹಣದುಬ್ಬರ ದರವು ನಿರೀಕ್ಷಿತ ಮಟ್ಟಕ್ಕಿಂತ ತುಸು ಹೆಚ್ಚಾಗಿರುವುದಕ್ಕೆ ಕಾರಣ ಇದು ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಗ್ರಾಹಕರ ಬೆಲೆ ಸೂಚ್ಯಂಕದಲ್ಲಿ ಸರಿಸುಮಾರು ಅರ್ಧದಷ್ಟು ಪಾಲು ಹೊಂದಿರುವ ಆಹಾರ ವಸ್ತುಗಳ ಬೆಲೆಯು ನವೆಂಬರ್ ತಿಂಗಳಿನಲ್ಲಿ ಶೇಕಡ 1.87ರಷ್ಟು ಹೆಚ್ಚಳ ಕಂಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಇವುಗಳ ಬೆಲೆ ಹೆಚ್ಚಳವು ಶೇಕಡ 0.85ರಷ್ಟು ಇತ್ತು. ನವೆಂಬರ್‌ನಲ್ಲಿ ಅಡುಗೆ ಎಣ್ಣೆಗಳ ಬೆಲೆ ಹೆಚ್ಚಳ ಪ್ರಮಾಣವು ಸರಿಸುಮಾರು ಶೇಕಡ 30ರಷ್ಟು ಆಗಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಳದ ಸಾಧ್ಯತೆ ಇದ್ದೇ ಇದೆ. ಚಳಿಗಾಲ ಶುರುವಾದಾಗ ತರಕಾರಿಗಳ ಬೆಲೆಯು ತುಸು ತಗ್ಗಬಹುದು. ಹಣಕಾಸು ವರ್ಷದ ಇನ್ನುಳಿದ ಅವಧಿಯಲ್ಲಿ ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿಯೇ ಇರಬಹುದಾದ ಸಾಧ್ಯತೆ ಇದೆ. ಪ್ರಸಕ್ತ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕದ ನಂತರದಲ್ಲಿ ಹಣದುಬ್ಬರ ದರವು ಕಡಿಮೆ ಆಗಬಹುದು’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಿಂದಿನ ವಾರ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT