ಶುಕ್ರವಾರ, ಮೇ 27, 2022
28 °C
ಕೂದಲು ಉದ್ಯಮಕ್ಕೆ ಪುನಶ್ಚೇತನ

ಕಚ್ಚಾ ಸಾಮಗ್ರಿ ವಿದೇಶಕ್ಕೆ ರಫ್ತಿಗೆ ನಿಷೇಧ: ಭಾಗ್ಯನಗರ ಕೂದಲಿಗೆ ಶುಕ್ರದೆಶೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೇಂದ್ರ ಸರ್ಕಾರ ಕಚ್ಚಾ ಕೂದಲು ರಫ್ತಿಗೆ ನಿಷೇಧ ಹೇರಿದ್ದರಿಂದ ನಗರದ ಸೆರಗಿನಲ್ಲಿಯೇ ಇರುವ ಭಾಗ್ಯನಗರ ಕೂದಲು ಉದ್ಯಮ ಪುನಶ್ಚೇತನಕ್ಕೆ ರಾಜಮಾರ್ಗ ತೆರೆದಿದೆ.

ದೇಶದಲ್ಲಿ ವಾರ್ಷಿಕ ₹ 1,500 ಕೋಟಿ ವಹಿವಾಟಿನ ಈ ಉದ್ಯಮದಲ್ಲಿ ₹ 50 ರಿಂದ ₹ 100 ಕೋಟಿ ವಹಿವಾಟು ಇಲ್ಲಿಂದಲೇ ನಡೆಯುತ್ತಿದೆ. ಕಚ್ಚಾ ಕೂದಲುಗಳು ಯಾವುದೇ ನಿರ್ಬಂಧವಿಲ್ಲದೆ ವಿದೇಶಕ್ಕೆ ಮಾರಾಟವಾಗುತ್ತಿದ್ದರಿಂದ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು.

ಕೂದಲು ಸಂಗ್ರಹ ವಿಧಾನ: ಮನೆ ಮನೆಗಳಿಂದ, ದೇವಸ್ಥಾನ, ಕ್ಷೌರಿಕರ ಅಂಗಡಿಗಳಿಂದ ಮೂರು ರೀತಿಗಳಲ್ಲಿ ಕೂದಲು ಸಂಗ್ರಹಿಸಲಾಗುತ್ತದೆ. ಇದರಲ್ಲಿ ದೇವಸ್ಥಾನದ ಮುಡಿ ಕೂದಲು ನಂಬರ್.1 ದರ್ಜೆಯ ಕೂದಲು ಆಗಿದೆ.

ಇಲ್ಲಿ ಆಯ್ದ ಕಾರ್ಮಿಕರು ಸಂಗ್ರಹಿಸಿ ಮಧ್ಯವರ್ತಿಗಳ ಮೂಲಕ ಕೆ.ಜಿಗೆ ₹ 3 ಸಾವಿರದಿಂದ ₹ 4 ಸಾವಿರದವರೆಗೆ ಮಾರಾಟ ಮಾಡಿ ಚೀನಾ, ಬರ್ಮಾ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಅಲ್ಲಿ ಸಂಸ್ಕರಣೆಗೊಂಡ ಕೂದಲು ಕೆ.ಜಿಗೆ ₹ 40 ಸಾವಿರಕ್ಕೆ ಮಾರಾಟವಾಗುತ್ತಿತ್ತು.

ಇದರಿಂದ ಇಲ್ಲಿನ ಉದ್ಯಮಿಗಳಿಗೆ ಹೊಡೆತ ಬಿದ್ದಿತ್ತು. ಈ ಮೊದಲು ಇಲ್ಲಿ ಸಂಗ್ರಹಿಸಿದ ಕೂದಲನ್ನು ಮನೆ, ಮನೆಗಳಿಗೆ ವಿತರಿಸಿ ಅವುಗಳನ್ನು ಸಂಸ್ಕರಣೆ ಮಾಡಿಕೊಟ್ಟರೆ ನಿತ್ಯ ₹  300 ಕೂಲಿ ಸಿಗುತ್ತಿತ್ತು. ಇದರಿಂದ ಭಾಗ್ಯನಗರದ ಬಹುತೇಕ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದರು.

ಕೂದಲು ಉದ್ಯಮದ ಸ್ಥಿತಿ: 

ದಶಕದಿಂದ ಕಚ್ಚಾ ಪದಾರ್ಥ ರಫ್ತಿನಿಂದ ಉದ್ಯಮಕ್ಕೆ ಸಂಕಷ್ಟ ಎದುರಾಗಿತ್ತು. ಅನೇಕರು ಕೂದಲು ಉದ್ಯಮದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ತೊಡಗಿಸಿಕೊಂಡಿದ್ದರು. ಕೂದಲು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರಿಂದಲೂ ಬಹುತೇಕ ಉದ್ಯಮ ನೆಲಕಚ್ಚಿತ್ತು.

ಯಾವುದಕ್ಕೆ ಉಪಯೋಗ:

ತಲೆಗೂದಲು ಉದುರುವವರಿಗೆ ಕೂದಲು ಕಸಿ, ವಿಗ್ ತಯಾರಿಕೆ, ಪ್ರಸಾಧನ ಕಲೆಗಳಿಗೆ ಅತಿ ಹೆಚ್ಚು ಬಳಕೆಯಾಗುತ್ತಿದೆ. ಇಲ್ಲಿಯ ಕೂದಲನ್ನೇ ಸಂಸ್ಕರಿಸಿ 10 ಪಟ್ಟು ದುಬಾರಿ ಬೆಲೆಗೆ ಚೀನಾ ಸೇರಿದಂತೆ ಇತರೆ ದೇಶಗಳು ಮಾರಾಟ ಮಾಡುತ್ತಿದ್ದವು.

ಇಲ್ಲಿನ ಕೂದಲನ್ನೇ ಮ್ಯಾನ್ಮಾರ್‌ನ ಉದ್ಯಮಿಗಳು ಕೆ.ಜಿಗೆ 5 ಸಾವಿರಕ್ಕೆ ಖರೀದಿ ಮಾಡಿ ₹ 6 ರಿಂದ ₹ 8 ಸಾವಿರಕ್ಕೆ ಚೀನಾಕ್ಕೆ ಮಾರಾಟ ಮಾಡುತ್ತಿದ್ದರು. ಅದೇ ಚೀನಾ ಕೂದಲು ಸಂಸ್ಕರಿಸಿ ಒಂದು ವಿಗ್‌ಗೆ ₹ 40 ಸಾವಿರಕ್ಕೆ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುತ್ತಿತ್ತು. ಇದಕ್ಕೆ ತೆರೆ ಎಳೆಯಲು ಕೇಂದ್ರ ಸರ್ಕಾರ ಕಚ್ಚಾ ಕೂದಲು ರಫ್ತಿಗೆ ನಿರ್ಬಂಧ ಹೇರಿದೆ.

ಕಾರ್ಮಿಕರ ಕೊರತೆ:

ಕೂದಲು ಕಾಳಸಂತೆಯಲ್ಲಿ ಮ್ಯಾನ್ಮಾರ್‌ ಮೂಲಕ ಮಾರಾಟವಾಗುತ್ತಿದ್ದರಿಂದ ಇಲ್ಲಿನ ಉದ್ಯಮ ನೆಲಕಚ್ಚಿ ಕುಶಲ ಕಾರ್ಮಿಕರ ಕೊರತೆ ಎದುರಾಗಿತ್ತು. ಕೊಲ್ಕತ್ತ, ಬಿಹಾರ ಸೇರಿದಂತೆ ಈಶಾನ್ಯ ರಾಜ್ಯಗಳ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಸ್ಥಳೀಯರು ಬೇರೆ ಉದ್ಯೋಗದತ್ತ ಮುಖ ಮಾಡಿದ್ದರು.

ಜಿಎಸ್‌ಟಿ ಜಾರಿಯಾದ ಬಳಕೆ ಶೇ 28ರಷ್ಟು ತೆರಿಗೆ, ಶೇ 14.5 ವ್ಯಾಟ್ ತೆರಿಗೆಯಿಂದ ಉದ್ದಿಮೆಯು ಸಂಪೂರ್ಣ ನೆಲಕಚ್ಚಿತ್ತು. ಈಗ ಕಚ್ಚಾ ಪದಾರ್ಥ ರಫ್ತಿಗೆ ನಿರ್ಬಂಧ ಹೇರಿದ್ದರಿಂದ ಸ್ಥಳೀಯವಾಗಿ ಸಂಸ್ಕರಿಸಿ ವಿದೇಶಕ್ಕೆ ಮಾರಾಟ ಮಾಡುವ ಅವಕಾಶ ದೊರೆತಿರುವುದರಿಂದ ಉದ್ಯಮಿ, ಉದ್ಯೋಗಿಗಳಲ್ಲಿ ಕೇಂದ್ರದ ನಿರ್ಧಾರ ಹರ್ಷ ತಂದಿದೆ.

'ಇದೇ ಜ.25 ರಿಂದ ಜಾರಿಗೆ ಬರುವಂತೆ ಕಚ್ಚಾ ಕೂದಲು ರಫ್ತಿಗೆ ಇದ್ದ ಉಚಿತ ಅವಕಾಶ ಹಿಂಪಡೆದು, ನಿರ್ಬಂಧಿಸಿದ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ' ಎಂದು ವಿದೇಶ ವ್ಯಾಪಾರ ನಿರ್ದೇಶನಾಲಯದ ನಿರ್ದೇಶಕ ಸಂತೋಷ್ ಕುಮಾರ್ ಸಾರಂಗಿ ಅವರು ಆದೇಶಿಸಿದ್ದಾರೆ. 

***

ಕಚ್ಚಾ ಸಾಮಗ್ರಿ ರಫ್ತು ನಿಷೇಧ ಅನೇಕ ವರ್ಷಗಳ ಬೇಡಿಕೆ. ನಮ್ಮ ಬೇಡಿಕೆಗೆ ಈಗ ಸರ್ಕಾರ ಸ್ಪಂದಿಸಿದೆ. ಕೂದಲು ಸಂಗ್ರಹ, ಸಂಸ್ಕರಣೆ ಕಠಿಣ ಕೆಲಸ. ಈಗ ಉದ್ಯಮ ಸಾಕಷ್ಟು ಚೇತರಿಸಿಕೊಳ್ಳಲಿದೆ. ಸ್ಥಳೀಯರಿಗೂ ಉದ್ಯೋಗ ದೊರೆಯಲಿದೆ

– ಶ್ರೀನಿವಾಸ ಗುಪ್ತಾ, ಗುಪ್ತಾ ಹೇರ್ ಇಂಡಸ್ಟ್ರೀಸ್ ಮುಖ್ಯಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು