ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಮೊಬೈಲ್‌ ಪಾವತಿ ಹೇಗೆ?

Last Updated 10 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಬಹುತೇಕ ಎಲ್ಲ ಕೆಲಸಗಳೂ ಸ್ಮಾರ್ಟ್‌ಫೋನ್‌ ಮೂಲಕವೇ ನಡೆಯುತ್ತಿವೆ. ಚಹಾದ ದುಡ್ಡು ನೀಡುವುದರಿಂದ ಹಿಡಿದು ತರಕಾರಿ, ದಿನಸಿ ಖರೀದಿಯ ಹಣವನ್ನೂ ಮೊಬೈಲ್‌ ಮೂಲಕವೇ ಪಾವತಿಸುತ್ತಿದ್ದೇವೆ. ಬ್ಯಾಂಕ್‌ಗಳು ನೀಡುವ ಆ್ಯಪ್‌ಗಳಲ್ಲದೆ ಗೂಗಲ್‌ ಪೇ, ತೇಜ್‌, ಪೇಟಿಎಂ ಪೇನಂತಹ ಆ್ಯಪ್‌ಗಳ ಮೂಲಕವೂ ಹಣ ಪಾವತಿ, ವರ್ಗಾವಣೆ ಮಾಡಬಹುದು. ಈ ಹಂತದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ಇಲ್ಲಿದೆ.

ಫೋನ್‌ ಲಾಕ್‌

ಮೊಬೈಲ್‌ ಪಾವತಿ ಬಳಸುತ್ತಿರುವ ಪ್ರತಿಯೊಬ್ಬರೂ ತಮ್ಮ ಫೋನ್‌ ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕು. ಯಾರೂ ಬೇಕಾದರೂ ಅನ್‌ಲಾಕ್‌ ಮಾಡುವಂತೆ ಸ್ವೈಪ್‌ ಆಯ್ಕೆ ಇಡಬೇಡಿ. ಕ್ಲಿಷ್ಟವಾದ ಪ್ಯಾಟರ್ನ್‌ ಅಥವಾ ಪಾಸ್‌ವರ್ಡ್‌ ಬಳಸಿ. ಆ್ಯಪ್‌ ಅಥವಾ ವಾಲೆಟ್‌ಗೆ ಸುಲಭವಾಗಿ ನೆನಪಿಟ್ಟುಕೊಳ್ಳುವಂತಹ ಪಿನ್‌ ಅಥವಾ ಪಾಸ್‌ವರ್ಡ್‌ ಬಳಸಬೇಡಿ. ಮೊಬೈಲ್‌ ಬ್ಯಾಂಕಿಂಗ್‌ ಬಳಸುತ್ತಿರುವವರು ಫೋನ್‌ಗೆ ಮತ್ತೆ ಆ್ಯಪ್‌ಗೆ ಲಾಕ್‌ ಆಯ್ಕೆ ಸಕ್ರಿಯಗೊಳಿಸಿ. ಬ್ಯಾಂಕಿಂಗ್‌ ವಹಿವಾಟು ಮುಗಿದ ತಕ್ಷಣ ಆ್ಯಪ್‌ನಿಂದ ಲಾಗೌಟ್‌ ಆಗುವುದು ಮರೆಯಬೇಡಿ.

ಅಧಿಕೃತ ಆ್ಯಪ್‌ ಬಳಕೆ

ಹಣ ಪಾವತಿ ಅಥವಾ ವರ್ಗಾವಣೆಗೆ ಆದಷ್ಟೂ ಬ್ಯಾಂಕ್‌ಗಳು ನೀಡುವ ಆ್ಯಪ್‌ಗಳನ್ನೇ ಬಳಸಿ. ಇಲ್ಲವೇ ಪೇಟಿಎಂನಂತಹ ಅಧಿಕೃತ ಕಂಪನಿಗಳು ನೀಡುವ ವಾಲೆಟ್‌ ಅಥವಾ ಆ್ಯಪ್‌ ಬಳಸುವುದು ಸೂಕ್ತ. ಅಪರಿಚಿತ, ಜನಪ್ರಿಯವಲ್ಲದ ಆ್ಯಪ್‌ಗಳನ್ನು ಬಳಸುವುದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ಸಾರ್ವಜನಿಕ ವೈ–ಫೈ ಬಳಸದಿರಿ

ಸಾರ್ವಜನಿಕವಾಗಿ ಲಭ್ಯವಾಗುವ ವೈ–ಫೈ ಸೇವೆಗಳನ್ನು ಆದಷ್ಟೂ ಬಳಸದೇ ಇರುವುದೇ ಒಳಿತು. ಇಂತಹ ಕಡೆಗಳಲ್ಲಿ ಬಳಕೆದಾರರ ಮಾಹಿತಿಗೆ ಸುರಕ್ಷತೆಯ ಖಾತರಿ ಇರುವುದಿಲ್ಲ. ಮೊಬೈಲ್‌ನಲ್ಲಿ ಬ್ಯಾಂಕಿಂಗ್‌ ವಹಿವಾಟು ನಡೆಸುವಾಗ ಮೊಬೈಲ್‌ ಡೇಟಾ ಅಥವಾ ಮನೆಯಲ್ಲಿ ಇರುವ ವೈ–ಫೈ ಹಾಟ್‌ಸ್ಪಾಟ್‌ ಅನ್ನೇ ಬಳಸಿ.

ಅಪ್‌ಡೇಟ್‌ ಮಾಡಿಕೊಳ್ಳಿ: ಮೊಬೈಲ್‌ ಸಾಫ್ಟ್‌ವೇರ್‌, ಆ್ಯಪ್‌ಗಳನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡಿಕೊಳ್ಳಿ. ಇದರಿಂದ ಸೈಬರ್‌ ದಾಳಿಗೆ ಒಳಗಾಗುವುದನ್ನು ಆದಷ್ಟೂ ಕಡಿಮೆ ಮಾಡಬಹುದು.

ಬ್ರೌಸರ್ ಬಳಸುವಾಗ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಆಟೊ ಸೇವ್‌ ಆಗುವಂತೆ ಮಾಡಬೇಡಿ. ಲಾಗಿನ್‌ ಆಗುವ ಸಂದರ್ಭದಲ್ಲಿ ಪಾಸ್‌ವರ್ಡ್‌ ನೀಡಿದ ಬಳಿಕ ಅದರ ಕೆಳಗೆ Remember for next time ಎನ್ನುವಲ್ಲಿ ರೈಟ್‌ ಟಿಕ್‌ ಆಗಿರುತ್ತದೆ. ಅದನ್ನು ಅನ್‌ಟಿಕ್‌ ಮಾಡಿ.

ಎಸ್‌ಎಂಎಸ್‌, ಲಿಂಕ್‌ ನಿರ್ಲಕ್ಷಿಸಿ

ನೀವು ಭಾರಿ ಮೊತ್ತದ ಕ್ಯಾಷ್‌ಬ್ಯಾಕ್‌ ಗೆದ್ದಿದ್ದೀರಿ, ಅದನ್ನು ಪಡೆಯಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಎಂದು ಬರುವ ಮೊಬೈಲ್‌ ಸಂದೇಶಕ್ಕೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯೆ ನೀಡಬೇಡಿ. ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, ಮೋಸದ ಜಾಲಕ್ಕೆ ಸಿಲುಕಿದಂತೆಯೇ ಸರಿ. ಅದೇ ರೀತಿ ಇ–ಮೇಲ್‌ಗೆ ಬರುವ ಲಿಂಕ್‌ ಅನ್ನೂ ನಿರ್ಲಕ್ಷಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT