ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿರುವ 2 ಲಸಿಕೆ ತಯಾರಕ ಘಟಕಗಳ 800 ಮಂದಿಗೆ ವಿಆರ್‌ಎಸ್ ಕೊಡಿಸಲಿದೆ ಸನೋಫಿ

Last Updated 31 ಜನವರಿ 2023, 6:28 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿರುವ ತನ್ನ ಎರಡು ಲಸಿಕೆ ತಯಾರಕ ಘಟಕಗಳ ಕಾರ್ಯಾಚರಣೆಯನ್ನು ಪರಾಮರ್ಶಿಸಲು ಫ್ರೆಂಚ್‌ ಮೂಲದ ಔಷಧ ತಯಾರಕ ಸಂಸ್ಥೆ ಸನೋಫಿ ತೀರ್ಮಾನಿಸಿದೆ. ಇವುಗಳಲ್ಲಿರುವ ನೌಕರರ ಕೆಲಸ ಬಿಡಿಸಲು ಯೋಜಿಸಿದೆ.

ಹೈದರಾಬಾದ್ ಬಳಿ ಎರಡು ಘಟಕಗಳನ್ನು ಹೊಂದಿರುವ ಸನೋಫಿ, ತನ್ನ ಎಲ್ಲಾ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್) ನೀಡುತ್ತಿದೆ ಎಂದು ಸಂಸ್ಥೆಯ ಭಾರತ ಘಟಕದ ವಕ್ತಾರರು ಇಮೇಲ್‌ನಲ್ಲಿ ಸುದ್ದಿ ಸಂಸ್ಥೆ ‘ರಾಯಿಟರ್ಸ್‌’ಗೆ ತಿಳಿಸಿದ್ದಾರೆ.

ಸನೋಫಿಯ ಈ ನಿರ್ಧಾರ ಸುಮಾರು 800 ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಮೂಲಗಳು ತಿಳಿಸಿವೆ.

ವಿಆರ್‌ಎಸ್ ನೀಡಲಾಗುವ ಉದ್ಯೋಗಿಗಳ ಸಂಖ್ಯೆಯ ಕುರಿತು ಪ್ರತಿಕ್ರಿಯಿಸಲು ಸನೋಫಿ ಇಂಡಿಯಾ ನಿರಾಕರಿಸಿದೆ. ಫ್ರೆಂಚ್ ಕಂಪನಿಯು ಭಾರತದಲ್ಲಿ 5,000 ಉದ್ಯೋಗಿಗಳನ್ನು ಹೊಂದಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿರುವ ಎರಡು ಘಟಕಗಳಲ್ಲಿ ‘ಹೆಪಟೈಟಿಸ್ ಬಿ’, ‘ಡಿಫ್ತೀರಿಯಾ’ ಮತ್ತು ‘ಟೆಟನಸ್‌’ಗೆ ವಿರುದ್ಧವಾದ ಲಸಿಕೆಗಳನ್ನು ತಯಾರಿಸಲಾಗುತ್ತದೆ. ಜತೆಗೆ ಇನ್ಸುಲಿನ್‌ಗೆ ಪ್ಯಾಕೇಜಿಂಗ್ ಸೌಲಭ್ಯಗಳನ್ನು ಉತ್ಪಾದಿಸಲಾಗುತ್ತದೆ. ಆದರೆ ಕೋವಿಡ್‌ ನಂತರ ಭಾರತ ಮತ್ತು ಜಾಗತಿಕವಾಗಿ ಇತರ ಔಷಧ ತಯಾರಕರು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡ ಪರಿಣಾಮವಾಗಿ, ಸನೋಫಿಯ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ.

‘ಈ ಹಂತದಲ್ಲಿ ಸಂಸ್ಥೆಯ ಯಾವುದೇ ಆಸ್ತಿಯನ್ನು ಮಾರಾಟ ಮಾಡುವ ಯೋಜನೆ ಇಲ್ಲ’ ಎಂದು ವಕ್ತಾರರು ಹೇಳಿದ್ದಾರಾದರೂ, ಮುಂದಿನ ದಿನಗಳಲ್ಲಿ ಮಾರಾಟ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಎರಡೂ ಘಟಕಗಳಲ್ಲಿರುವ ಇನ್ಸುಲಿನ್ ಮತ್ತು ಸಂಬಂಧಿತ ಚುಚ್ಚುಮದ್ದಿನ ಸಾಧನಗಳ ಪ್ಯಾಕೇಜಿಂಗ್ ಅನ್ನು ಮತ್ತೊಂದು ಉತ್ಪಾದನಾ ಘಟಕಕ್ಕೆ ವರ್ಗಾಯಿಸಲು ಸನೋಫಿ ಯೋಜಿಸಿದೆ.

‘ಸನೋಫಿ ಹೆಲ್ತ್‌ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಹೆಸರಿನೊಂದಿಗೆ ಸನೋಫಿ ಸಂಸ್ಥೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಈ ಹಿಂದೆ ‘ಶಾಂತ ಬಯೋಟೆಕ್ನಿಕ್ಸ್‌’ ಆಗಿತ್ತು. ಫ್ರೆಂಚ್ ಕಂಪನಿ ಸನೋಫಿ 2009 ಮತ್ತು 2013 ರ ನಡುವೆ ವಿವಿಧ ಹಂತಗಳಲ್ಲಿ ‘ಶಾಂತ ಬಯೋಟೆಕ್ನಿಕ್ಸ್‌’ನ ಸಂಪೂರ್ಣ ಪಾಲನ್ನು ಸ್ವಾಧೀನಪಡಿಸಿಕೊಂಡಿತು.

‘ಡಿಫ್ತೀರಿಯಾ’, ‘ಟೆಟನಸ್’, ‘ನಾಯಿಕೆಮ್ಮು’, ‘ಹೆಪಟೈಟಿಸ್ ಬಿ’ ಮತ್ತು ‘ಇನ್ಫ್ಲುಯೆನ್ಸ ಟೈಪ್ ಬಿ’ ವಿರುದ್ಧದ ಲಸಿಕೆಯಾದ ಶಾನ್-5 ಅನ್ನು ಪೂರೈಸಲು ಸನೋಫಿ ಯುನಿಸೆಫ್ ಒಪ್ಪಂದ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಸಂಸ್ಥೆಗೆ ವ್ಯವಹಾರದಲ್ಲಿ ಹಿನ್ನಡೆಯುಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT