ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಲಾಭ ಶೇ 35ರಷ್ಟು ಇಳಿಕೆ

Published 3 ಫೆಬ್ರುವರಿ 2024, 15:28 IST
Last Updated 3 ಫೆಬ್ರುವರಿ 2024, 15:28 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು, 2023–24ನೇ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹9,164 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹14,205 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 35ರಷ್ಟು ಇಳಿಕೆಯಾಗಿದೆ ಎಂದು ಷೇರುಪೇಟೆಗೆ ಬ್ಯಾಂಕ್‌ ಶನಿವಾರ ತಿಳಿಸಿದೆ.

ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ವರಮಾನವು ₹1,18,193 ಕೋಟಿಗೆ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹98,084 ಕೋಟಿ ಗಳಿಸಿತ್ತು.

ಬ್ಯಾಂಕ್‌ನ ಬಡ್ಡಿ ವರಮಾನ ₹1,06,734 ಕೋಟಿಗೆ ಏರಿಕೆಯಾಗಿದೆ. 

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 3.14ರಿಂದ ಶೇ 2.42ಕ್ಕೆ ಕುಗ್ಗಿದೆ. ನಿವ್ವಳ ಎನ್‌ಪಿಎ ಶೇ 0.77ರಿಂದ ಶೇ 0.64ಕ್ಕೆ ಇಳಿಕೆ‌ಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಈ ತ್ರೈಮಾಸಿಕದಲ್ಲಿ ಎಸ್‌ಬಿಐ ಪೆನ್ಶನ್‌ ಫಂಡ್‌ ಪ್ರೈವೆಟ್‌ ಲಿಮಿಟೆಡ್‌ನಲ್ಲಿ (ಎಸ್‌ಬಿಐಸಿಎಪಿಎಸ್‌) ಶೇ 20ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಒಟ್ಟು ₹229.52 ಕೋಟಿ ವಿನಿಯೋಗಿಸಲಾಗಿದೆ. ಈ ಮೊದಲು ಬ್ಯಾಂಕ್‌ ಶೇ 60ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿತ್ತು. ಈಗ ಅದರ ಪ್ರಮಾಣ ಶೇ 80ಕ್ಕೆ ಏರಿಕೆಯಾಗಿದೆ.

‘2002ರಿಂದಲೂ ಸಿಬ್ಬಂದಿಗೆ ಪಿಂಚಣಿ ನೀಡಿಕೆಯಲ್ಲಿ ಕೆಲವು ವ್ಯತ್ಯಾಸಗಳಿದ್ದವು. ಹಾಗಾಗಿ, ಸಿಬ್ಬಂದಿಯ ವೇತನ ಮತ್ತು ಪಿಂಚಣಿ ಬಾಕಿ ಪಾವತಿಗೆ ₹7,100 ಕೋಟಿ ವ್ಯಯಿಸಲಾಗಿದೆ. ಇದರಲ್ಲಿ ಪಿಂಚಣಿ ವ್ಯತ್ಯಾಸ ಸರಿಪಡಿಸಲು ₹5,400 ಕೋಟಿ ಹಂಚಿಕೆಯಾಗಿದೆ. ಹಾಗಾಗಿ, ತ್ರೈಮಾಸಿಕ ಲಾಭದಲ್ಲಿ ಇಳಿಕೆಯಾಗಿದೆ’ ಎಂದು ಬ್ಯಾಂಕ್‌ ಅಧ್ಯಕ್ಷ ದಿನೇಶ್‌ ಕುಮಾರ್‌ ಖಾರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT