ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ ಏರಿಕೆ, ನಿಫ್ಟಿ ಇಳಿಕೆ

Published 6 ಮೇ 2024, 15:20 IST
Last Updated 6 ಮೇ 2024, 15:20 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ಹೂಡಿಕೆದಾರರು ಲಾಭ ಗಳಿಕೆಗಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಸೋಮವಾರ ಸೆನ್ಸೆಕ್ಸ್‌ ಏರಿಕೆ ಕಂಡಿತು. ಆದರೆ,  ನಿಫ್ಟಿ ಇಳಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 17 ಅಂಶ ಏರಿಕೆಯಾಗಿ 73,895ಕ್ಕೆ ಸ್ಥಿರಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 33 ಅಂಶ ಇಳಿಕೆಯಾಗಿ 22,442ಕ್ಕೆ ಅಂತ್ಯಗೊಂಡಿತು.

ಸಾಲ ನೀಡುವ ಯೋಜನೆಗಳ ಮೇಲೆ ನಿಗಾ ಇಡಲು ಆರ್‌ಬಿಐ ಬಿಗಿ ನಿಯಮಗಳನ್ನು ರೂಪಿಸಿದ್ದರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರಿನ ಮೌಲ್ಯ ಇಳಿಕೆ ಕಂಡಿದೆ.

ಸೆನ್ಸೆಕ್ಸ್‌ ಗುಚ್ಛದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಹಿಂದೂಸ್ತಾನ್‌ ಯೂನಿಲಿವರ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಸನ್‌ ಫಾರ್ಮಾ, ಟೆಕ್‌ ಮಹೀಂದ್ರ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ನ ಷೇರು ಮೌಲ್ಯ ಏರಿಕೆ ಆಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎನ್‌ಟಿಪಿಸಿ, ಪವರ್‌ಗ್ರಿಡ್‌, ಬಜಾಜ್‌ ಫೈನಾನ್ಸ್‌ ಮತ್ತು ಲಾರ್ಸೆನ್‌ ಆ್ಯಂಡ್‌ ಟೊಬ್ರೊ ಷೇರಿನ ಮೌಲ್ಯ ಇಳಿಕೆ ಆಗಿದೆ.

ಜಾಗತಿಕ ಬ್ರೆಂಟ್‌ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ 0.80ರಷ್ಟು ಏರಿಕೆಯಾಗಿ 83.62 ಡಾಲರ್‌ಗೆ (₹6,982) ಮುಟ್ಟಿದೆ.  ಏಷ್ಯಾ ಮಾರುಕಟ್ಟೆಯಲ್ಲಿ ಶಾಂಘೈ ಮತ್ತು ಹಾಂಗ್‌ಕಾಂಗ್‌ ಸಕಾರಾತ್ಮಕ ವಹಿವಾಟು ನಡೆಸಿವೆ.

ಟೈಟನ್‌ ಎಂ–ಕ್ಯಾಪ್‌ ₹22,527 ಕೋಟಿ ಇಳಿಕೆ:

2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಟೈಟನ್‌ ಕಂಪನಿ ನಿರೀಕ್ಷಿಸಿದಷ್ಟು ಗಳಿಕೆ ಕಾಣದ್ದರಿಂದ ಸೋಮವಾರ ಕಂಪನಿಯ ಷೇರಿನ ಮೌಲ್ಯ ಶೇ 7ರಷ್ಟು ಇಳಿಕೆಯಾಗಿದೆ. 

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ಕ್ರಮವಾಗಿ ₹3,281 ಮತ್ತು ₹3,284ಕ್ಕೆ ಕುಸಿದಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ಒಂದೇ ದಿನ ₹22,537 ಕೋಟಿ ಕರಗಿದ್ದು, ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ₹2.91 ಲಕ್ಷ ಕೋಟಿಗೆ ಇಳಿದಿದೆ.

ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿ ₹771 ಕೋಟಿ ತೆರಿಗೆ ನಂತರದ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹736 ಕೋಟಿ ಲಾಭ ಗಳಿಸಿತ್ತು. 

ಕೋಟಕ್‌ ಬ್ಯಾಂಕ್‌ ಷೇರಿನ ಮೌಲ್ಯ ಶೇ 5ರಷ್ಟು ಏರಿಕೆ:

ಮಾರ್ಚ್‌ ತ್ರೈಮಾಸಿಕದಲ್ಲಿ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ಇದರಿಂದ ಬ್ಯಾಂಕ್‌ನ ಷೇರಿನ ಮೌಲ್ಯ ಶೇ 5ರಷ್ಟು ಏರಿಕೆಯಾಗಿದೆ. 

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ₹1,624ಕ್ಕೆ ಮುಟ್ಟಿದೆ. ಷೇರಿನ ಮೌಲ್ಯ ಏರಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ₹15,406 ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್‌ ₹3.22 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT