ಶನಿವಾರ, ಫೆಬ್ರವರಿ 27, 2021
19 °C
ಸುಧಾರಣಾ ಕ್ರಮಗಳ ಜಾರಿ ವಿಶ್ವಾಸ: ಸೂಚ್ಯಂಕ ಏರಿಕೆ

ಬಜೆಟ್‌ನತ್ತ ಷೇರುಪೇಟೆ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಷೇರುಪೇಟೆಯ ಹೂಡಿಕೆದಾರರು ಕೇಂದ್ರ ಬಜೆಟ್‌ನತ್ತ ಗಮನ ಕೇಂದ್ರೀಕರಿಸಿದ್ದಾರೆ. ಅರ್ಥವ್ಯವಸ್ಥೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಆರ್ಥಿಕ ಸುಧಾರಣಾ ಕ್ರಮಗಳು ಘೋಷಣೆಯಾಗುವ ವಿಶ್ವಾಸದಲ್ಲಿದ್ದಾರೆ.

ದೇಶದ ಆರ್ಥಿಕ ಪ್ರಗತಿಯು ಐದು ವರ್ಷಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಇದರಿಂದಾಗಿ ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ನಡೆಯಿತು. 

2019–20ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಸಮೀಕ್ಷೆ ಅಂದಾಜು ಮಾಡಿದೆ. ಇದರಿಂದ ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿಯೂ  ಸೂಚ್ಯಂಕಗಳು ಏರಿಕೆ ಕಂಡುಕೊಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 69 ಅಂಶ ಏರಿಕೆ ಕಂಡು 39,008 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 30 ಅಂಶ ಹೆಚ್ಚಾಗಿ 11,946 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗಳಿಕೆ: ಭಾರ್ತಿ ಏರ್‌ಟೆಲ್‌, ಟಾಟಾ ಮೋಟರ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಹೀರೊ ಮೋಟೊಕಾರ್ಪ್‌, ಏಷ್ಯನ್‌ ಪೇಂಟ್ಸ್‌ ಮತ್ತು ಪವರ್‌ ಗ್ರಿಡ್‌ ಕಂಪನಿಗಳು ಶೇ 2.53ರವರೆಗೂ ಏರಿಕೆ ಕಂಡುಕೊಂಡಿವೆ.

ಇಳಿಕೆ: ಯೆಸ್‌ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌, ವೇದಾಂತ, ಸನ್‌ ಫಾರ್ಮಾ, ಟಾಟಾ ಸ್ಟೀಲ್, ಎಲ್‌ಆ್ಯಂಡ್‌ಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎನ್‌ಟಿಪಿಸಿ ಶೇ 3.56ರವರೆಗೂ ಇಳಿಕೆ ಕಂಡಿವೆ.

ರೂಪಾಯಿ ಮೌಲ್ಯ ಏರಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 39 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ
₹ 68.50ರಂತೆ ವಿನಿಮಯಗೊಂಡಿತು.

ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಕರೆನ್ಸಿಗಳ ಮೌಲ್ಯ ಏರಿಕೆ, ಕಚ್ಚಾ ತೈಲ ದರ ಇಳಿಕೆ ಮತ್ತು ಷೇರುಪೇಟೆಯ ಸಕಾರಾತ್ಮಕ ವಹಿವಾಟಿನಿಂದ ರೂಪಾಯಿ ಮೌಲ್ಯದಲ್ಲಿ ವೃದ್ಧಿಯಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಬ್ರೆಂಟ್ ತೈಲ ದರ ಶೇ 0.13ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 63.74 ಡಾಲರ್‌ಗಳಂತೆ ಮಾರಾಟವಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.