ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರುಪೇಟೆ: ಸಕಾರಾತ್ಮಕ ವಹಿವಾಟು

Published 13 ಮೇ 2024, 15:40 IST
Last Updated 13 ಮೇ 2024, 15:40 IST
ಅಕ್ಷರ ಗಾತ್ರ

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಟಿಸಿಎಸ್‌ ಷೇರುಗಳ ಖರೀದಿ ಹೆಚ್ಚಿದ್ದರಿಂದ ದೇಶದ ಷೇರುಪೇಟೆಯಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಬೆಳಿಗ್ಗಿನ ವಹಿವಾಟಿನಲ್ಲಿ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಿದ್ದರಿಂದ ಕುಸಿತ ಕಂಡಿದ್ದ ಸೂಚ್ಯಂಕಗಳು, ಬಳಿಕ ಚೇತರಿಕೆಯ ಹಾದಿಗೆ ಮರಳಿದವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 111 ಅಂಶ ಏರಿಕೆ (ಶೇ 0.15ರಷ್ಟು) ಕಂಡು 72,776 ಅಂಶಗಳಲ್ಲಿ ಸ್ಥಿರಗೊಂಡಿತು. ಒಂದು ಹಂತದಲ್ಲಿ 798 ಅಂಶ ಕುಸಿತ ಕಂಡು, 71,866 ಅಂಶಕ್ಕೆ ಮುಟ್ಟಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 48 ಅಂಶ ಏರಿಕೆ (ಶೇ 0.22ರಷ್ಟು) ಕಂಡು 22,104 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಏಷ್ಯನ್‌ ಪೇಂಟ್ಸ್‌, ಸನ್‌ ಫಾರ್ಮಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಟಿಸಿಎಸ್‌, ಎಕ್ಸಿಸ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಎಲ್‌ ಆ್ಯಂಡ್‌ ಟಿ, ಐಸಿಐಸಿಐ ಬ್ಯಾಂಕ್‌ ಹಾಗೂ ಪವರ್‌ ಗ್ರಿಡ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್‌, ಟೈಟನ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ನೆಸ್ಲೆ ಇಂಡಿಯಾ ಷೇರಿನ ಮೌಲ್ಯದಲ್ಲಿ ಕುಸಿತವಾಗಿದೆ.

ಸೋಲ್‌, ಟೋಕಿಯೊ, ಶಾಂಘೈ ಮಾರುಕಟ್ಟೆಗಳು ಇಳಿಕೆ ದಾಖಲಿಸಿದ್ದರೆ, ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ₹2,117 ಕೋಟಿ ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಷೇರುಪೇಟೆಯ ಅಂಕಿ–ಅಂಶಗಳು ತಿಳಿಸಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯಲ್ಲಿ ಶೇ 0.28ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 83.02 ಡಾಲರ್‌ ಆಗಿದೆ.

ಟಾಟಾ ಮೋಟರ್ಸ್‌ಗೆ ₹29 ಸಾವಿರ ಕೋಟಿ ನಷ್ಟ

ಮುಂಬೈ: ಟಾಟಾ ಮೋಟರ್ಸ್ ಷೇರಿನ ಮೌಲ್ಯದಲ್ಲಿ ಶೇ 8ರಷ್ಟು ಕುಸಿತವಾಗಿದ್ದು ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹29016 ಕೋಟಿ ಇಳಿಕೆಯಾಗಿದೆ.

ಬಿಎಸ್ಇಯಲ್ಲಿ ಷೇರಿನ ಮೌಲ್ಯವು ಶೇ 8.32ರಷ್ಟು ಕುಸಿದಿದ್ದು ಪ್ರತಿ ಷೇರಿನ ಬೆಲೆ ₹959.80 ಆಗಿದೆ. ವಹಿವಾಟಿನ ಒಂದು ಸಂದರ್ಭದಲ್ಲಿ ಶೇ 9.44ರಷ್ಟು ಇಳಿಕೆ ಕಂಡಿತ್ತು.

ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 8.33ರಷ್ಟು ಕುಸಿದಿದ್ದು ಪ್ರತಿ ಷೇರಿನ ಬೆಲೆ ₹959.40 ಆಗಿದೆ.  ಕಂಪನಿಯ ಒಟ್ಟು ಎಂ–ಕ್ಯಾಪ್‌ ₹3.19 ಲಕ್ಷ ಕೋಟಿ ಆಗಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭದಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಆದರೆ ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಲಾಭದಲ್ಲಿ ಹೆಚ್ಚಳವಾಗಿಲ್ಲ. ಇದರಿಂದ ಷೇರಿನ ಮೌಲ್ಯ ಕುಸಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT