ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆನ್ಸೆಕ್ಸ್, ನಿಫ್ಟಿ ದಾಖಲೆ: ಹೂಡಿಕೆದಾರರ ಸಂಪತ್ತು ₹4.28 ಲಕ್ಷ ಕೋಟಿ ವೃದ್ಧಿ

Published 23 ಮೇ 2024, 15:43 IST
Last Updated 23 ಮೇ 2024, 15:43 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಗುರುವಾರವೂ ಗೂಳಿಯ ಓಟ ಮುಂದುವರಿದಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿವೆ. 

2023–24ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ₹2.11 ಲಕ್ಷ ಕೋಟಿ ಲಾಭಾಂಶ ಪಾವತಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ನೀಡಿರುವುದು ಸೂಚ್ಯಂಕಗಳು ಏರಿಕೆಯ ಪಥದಲ್ಲಿ ಸಾಗಲು ಸಹಕಾರಿಯಾಯಿತು. ಬ್ಯಾಂಕಿಂಗ್‌, ತೈಲ ಹಾಗೂ ಆಟೊ ಷೇರುಗಳ ಖರೀದಿಯೂ ಇದಕ್ಕೆ ನೆರವಾಯಿತು.

ಒಂದೇ ದಿನ ಹೂಡಿಕೆದಾರರ ಸಂಪತ್ತು ₹4.28 ಲಕ್ಷ ಕೋಟಿ ವೃದ್ಧಿಯಾಗಿದೆ.

ಜನವರಿ 29ರಂದು ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 75 ಸಾವಿರದ ಗಡಿ ಮುಟ್ಟಿತ್ತು. ಆ ಬಳಿಕ ಏರಿಳಿತ ಕಂಡಿತ್ತು. 1,196 ಅಂಶ ಏರಿಕೆ (ಶೇ 1.61ರಷ್ಟು) ಕಂಡು 75,418 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ದಿನದ ವಹಿವಾಟಿನ ಒಂದು ಹಂತದಲ್ಲಿ 1,278 ಅಂಶ ಏರಿಕೆ ಕಂಡು, 75,499ಕ್ಕೆ ತಲುಪಿತ್ತು.

ರಾಷ್ಟ್ರೀಯ ಷೇರು‍ಪೇಟೆ ಸೂಚ್ಯಂಕ ನಿಫ್ಟಿ 369 ಅಂಶ ಏರಿಕೆಯಾಗಿ (ಶೇ 1.64ರಷ್ಟು) 22,967 ಅಂಶಗಳಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 22,993 ಅಂಶಗಳಿಗೆ ಮುಟ್ಟಿತ್ತು. 

ಸೆನ್ಸೆಕ್ಸ್ ಗುಚ್ಛದಲ್ಲಿನ ಮಹೀಂದ್ರ ಆ್ಯಂಡ್‌ ಮಹೀಂದ್ರ, ಎಲ್‌ ಆ್ಯಂಡ್ ಟಿ, ಎಕ್ಸಿಸ್‌ ಬ್ಯಾಂಕ್‌, ಮಾರುತಿ, ಅಲ್ಟ್ರಾಟೆಕ್‌ ಸಿಮೆಂಟ್‌, ಇಂಡಸ್ಇಂಡ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಟೈಟನ್‌, ಟಿಸಿಎಸ್‌ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ಸನ್‌ಫಾರ್ಮಾ, ಎನ್‌ಟಿಪಿಸಿ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹420 ಲಕ್ಷ ಕೋಟಿ (5.5 ಟ್ರಿಲಿಯನ್‌ ಡಾಲರ್‌) ದಾಟಿದೆ. ಎನ್‌ಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮೌಲ್ಯವೂ ₹416 ಕೋಟಿ  (5 ಟ್ರಿಲಿಯನ್ ಡಾಲರ್‌) ದಾಟಿದೆ.

‘ಕೇಂದ್ರಕ್ಕೆ ದಾಖಲೆ ಪ್ರಮಾಣದಲ್ಲಿ ಲಾಭಾಂಶ ನೀಡಲು ಆರ್‌ಬಿಐ ಒಪ್ಪಿಗೆ ನೀಡಿದೆ. ಇದು ಆರ್ಥಿಕ ಸದೃಢತೆಗೆ ಸಾಕ್ಷಿಯಾಗಿದೆ. ಮಾರುಕಟ್ಟೆಯ ನಿರೀಕ್ಷೆಯಂತೆ ಲೋಕಸಭಾ ಚುನಾವಣಾ ಫಲಿತಾಂಶ ಬಂದರೆ ಜೂನ್‌ ಮೊದಲ ವಾರದಲ್ಲಿ ನಿಫ್ಟಿ ಹೊಸ ದಾಖಲೆ ಬರೆಯುವ ಸಾಧ್ಯತೆಯಿದೆ’ ಎಂದು ಆಕ್ಸಿಸ್‌ ಸೆಕ್ಯುರಿಟೀಸ್‌ನ ಮುಖ್ಯಸ್ಥ ನೀರಜ್ ಚಡಾವರ್ ಹೇಳಿದ್ದಾರೆ.

ಟೋಕಿಯೊ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಸೋಲ್‌, ಶಾಂಘೈ, ಹಾಂಗ್‌ಕಾಂಗ್‌ ಮಾರುಕಟ್ಟೆ ಇಳಿಕೆ ಕಂಡಿವೆ. ಯುರೋಪ್‌ ಮಾರುಕಟ್ಟೆಗಳು ಏರಿಕೆ ದಾಖಲಿಸಿದ್ದರೆ, ಬುಧವಾರದ ವಹಿವಾಟಿನಲ್ಲಿ ವಾಲ್‌ಸ್ಟ್ರೀಟ್‌ ಇಳಿಕೆ ಕಂಡಿದೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾತೈಲವು ಶೇ 0.33ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 82.17ಕ್ಕೆ ತಲುಪಿದೆ. 

ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹686 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT