ಮುಂಬೈ: ಐ.ಟಿ ಮತ್ತು ರಿಲಯನ್ಸ್ ಇಂಡಸ್ಟ್ರಿಸ್ ಷೇರುಗಳ ಖರೀದಿ ಹೆಚ್ಚಳದಿಂದಾಗಿ ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ಸಕಾರಾತ್ಮಕ ವಹಿವಾಟು ನಡೆಯಿತು.
ಸೋಲ್, ಟೋಕಿಯೊ, ಶಾಂಘೈ ಹಾಗೂ ಹಾಂಗ್‌ಕಾಂಗ್ ಮಾರುಕಟ್ಟೆಯು ಗಳಿಕೆ ಕಂಡಿದ್ದು ಇದಕ್ಕೆ ವರದಾನವಾಯಿತು. ಷೇರು ಸೂಚ್ಯಂಕಗಳ ಏರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ₹7.30 ಲಕ್ಷ ಕೋಟಿ ಹೆಚ್ಚಳವಾಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,330 ಅಂಶ ಏರಿಕೆ (ಶೇ 1.68ರಷ್ಟು) ಕಂಡು 80,436 ಅಂಶಗಳಲ್ಲಿ ಸ್ಥಿರಗೊಂಡಿತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಅತಿಹೆಚ್ಚು ಏರಿಕೆ ಕಂಡು ದಿನ ಇದಾಗಿದೆ. ದಿನದ ವಹಿವಾಟಿನಲ್ಲಿ 1,412 ಅಂಶ ಏರಿಕೆ ಕಂಡಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 397 ಅಂಶ ಏರಿಕೆ (ಶೇ 1.65ರಷ್ಟು) ಕಂಡು, 24,541 ಅಂಶಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿತು.
ಸೆನ್ಸೆಕ್ಸ್ ಗುಚ್ಛದಲ್ಲಿನ ಟೆಕ್ ಮಹೀಂದ್ರ, ಮಹೀಂದ್ರ ಆ್ಯಂಡ್ ಮಹೀಂದ್ರ, ಟಾಟಾ ಮೋಟರ್ಸ್, ಅಲ್ಟ್ರಾಟೆಕ್ ಸಿಮೆಂಟ್, ಟಿಸಿಎಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಸನ್ ಫಾರ್ಮಾ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಶೇ 1.8ರಷ್ಟು ಹಾಗೂ ಸ್ಮಾಲ್‌ಕ್ಯಾಪ್ ಶೇ 1.7ರಷ್ಟು ಏರಿಕೆ ಕಂಡಿದೆ.
ಜಪಾನ್ ಕರೆನ್ಸಿ ಯೆನ್ ಮೌಲ್ಯವು ಸ್ಥಿರತೆ ಕಾಯ್ದುಕೊಂಡಿದೆ. ಹಾಗಾಗಿ, ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಅಮೆರಿಕದಲ್ಲಿ ಚಿಲ್ಲರೆ ಮಾರಾಟವು ಸದೃಢಗೊಂಡಿದೆ. ಇದರಿಂದ ಗ್ರಾಹಕರ ವೆಚ್ಚದಲ್ಲಿ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ ಉದ್ಯೋಗಗಳ ಸೃಷ್ಟಿಯಲ್ಲಿ ಏರಿಕೆಯಾಗಿದೆ. ಇದು ಆರ್ಥಿಕ ಹಿಂಜರಿತದ ಭೀತಿಯ ಶಮನಕ್ಕೆ ನೆರವಾಗಿದೆ. ಈ ಅಂಶಗಳು ದೇಶೀಯ ಷೇರುಪೇಟೆಗಳ ಏರಿಕೆಗೆ ನೆರವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಬುಧವಾರ ನಡೆದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,595 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹2,236 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆ ಅಂಕಿಅಂಶ ತಿಳಿಸಿವೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಶೇ 1.22ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 80.05 ಡಾಲರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.