ಶನಿವಾರ, ಜುಲೈ 2, 2022
24 °C
ಹೂಡಿಕೆದಾರರ ಸಂಪತ್ತು ₹ 12 ಲಕ್ಷ ಕೋಟಿ ಹೆಚ್ಚಳ

ಪುಟಿದೆದ್ದ ಸೆನ್ಸೆಕ್ಸ್, ನಿಫ್ಟಿ: ಹೂಡಿಕೆದಾರರ ಸಂಪತ್ತು ₹ 12 ಲಕ್ಷ ಕೋಟಿ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿ‍ಫ್ಟಿ ಮಂಗಳವಾರ ಶೇಕಡ 2.5ಕ್ಕಿಂತ ಹೆಚ್ಚು ಜಿಗಿದವು. ಇದು ಮೂರು ತಿಂಗಳಲ್ಲಿ ಸೂಚ್ಯಂಕಗಳು ಕಂಡ ಅತಿದೊಡ್ಡ ಏರಿಕೆ.

ಲೋಹ, ಇಂಧನ, ಬ್ಯಾಂಕಿಂಗ್ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿಸಿದ್ದು ಈ ಏರಿಕೆಗೆ ಕಾರಣವಾಯಿತು ಎಂದು ವರ್ತಕರು ತಿಳಿಸಿದ್ದಾರೆ. ಸೆನ್ಸೆಕ್ಸ್ 1,344 ಅಂಶ ಹಾಗೂ ನಿಫ್ಟಿ 417 ಅಂಶ ಏರಿಕೆ ಕಂಡವು.

‘ಹಲವು ದಿನಗಳ ನಂತರ ಷೇರುಪೇಟೆಗಳು ಪುಟಿದೆದ್ದಿವೆ. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಕಂಡುಬಂದ ಆಶಾಭಾವನೆಯು ದೇಶದ ಷೇರುಪೇಟೆಗಳ ಮೇಲೆಯೂ ಪರಿಣಾಮ ಬೀರಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಹಾಂಗ್‌ಕಾಂಗ್‌, ಟೋಕಿಯೊ, ಸೋಲ್ ಷೇರುಪೇಟೆಗಳು ಕೂಡ ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.49ರಷ್ಟು ಜಾಸ್ತಿಯಾಗಿ ಪ್ರತಿ ಬ್ಯಾರೆಲ್‌ಗೆ 114.8 ಡಾಲರ್‌ಗೆ ತಲುಪಿದೆ.

ಮಂಗಳವಾರದ ವಹಿವಾಟು ತೇಜಿ ಇದ್ದ ಕಾರಣದಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 12 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ.

ಬಿಎಸ್‌ಇ ಸ್ಮಾಲ್‌ ಕ್ಯಾಪ್ ಸೂಚ್ಯಂಕ ಶೇ 2.78ರಷ್ಟು, ಮಿಡ್‌ ಕ್ಯಾಪ್ ಸೂಚ್ಯಂಕ ಶೇ 2.51ರಷ್ಟು ಏರಿಕೆ ಕಂಡಿವೆ. ಬಿಎಸ್‌ಇಯ ಎಲ್ಲಾ ವಲಯಗಳ ಸೂಚ್ಯಂಕಗಳು ಏರಿಕೆ ಕಂಡಿವೆ.

ಮತ್ತೆ ಕುಸಿದ ರೂಪಾಯಿ

ಮಂಗಳವಾರದ ವಹಿವಾಟಿನ ಒಂದು ಹಂತದಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77.79ಕ್ಕೆ ಕುಸಿದಿತ್ತು. ದಿನದ ಕೊನೆಯಲ್ಲಿ ತುಸು ಚೇತರಿಕೆ ಕಂಡು 77.44ಕ್ಕೆ ತಲುಪಿತು.

ಷೇರುಪೇಟೆಗಳಲ್ಲಿ ನಡೆದ ಏರಿಕೆಯ ವಹಿವಾಟು ಕೂಡ ರೂಪಾಯಿ ಮೌಲ್ಯವರ್ಧನೆಗೆ ನೆರವಾಯಿತು.

‘ಕಚ್ಚಾ ತೈಲದ ಬೆಲೆ ಹೆಚ್ಚಳ ಹಾಗೂ ಹಣದುಬ್ಬರ ಏರಿಕೆಯ ಕಾರಣದಿಂದಾಗಿ ರೂಪಾಯಿ ಮೌಲ್ಯವು ಮಂಗಳವಾರ ಕುಸಿದಿತ್ತು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು