ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಹೆಚ್ಚಿದ ಮಾರಾಟ ಒತ್ತಡ

ಆರ್ಥಿಕ ವೃದ್ಧಿ ದರ ಕುಸಿತ ಮುನ್ನೋಟದ ಪ್ರಭಾವ
Last Updated 4 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕಿಂಗ್‌ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ತಯಾರಿಕಾ ಕಂಪನಿಗಳ ಷೇರುಗಳಲ್ಲಿನ ತೀವ್ರ ನಷ್ಟದ ಕಾರಣಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 434 ಅಂಶಗಳಷ್ಟು ಭಾರಿ ಕುಸಿತ ಕಂಡಿತು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರದ ಮುನ್ನೋಟವನ್ನು ಶೇ 6.9 ರಿಂದ ಶೇ 6.1ಕ್ಕೆ ತಗ್ಗಿಸಿರುವುದು ಷೇರುಪೇಟೆಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

ದಿನದ ಆರಂಭದಲ್ಲಿ ಸೂಚ್ಯಂಕವು 300 ಅಂಶಗಳಷ್ಟು ಏರಿಕೆ ಕಂಡಿತ್ತು. ದಿನದಂತ್ಯದಲ್ಲಿ ಈ ಗಳಿಕೆಗೆ ಎರವಾಯಿತು. ವಹಿವಾಟಿನ ಅಂತ್ಯದಲ್ಲಿ 434 ಅಂಶಗಳನ್ನು ಕಳೆದುಕೊಂಡು 37,673 ಅಂಶಗಳಿಗೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 139 ಅಂಶಗಳಿಗೆ ಎರವಾಗಿ 11,174 ಅಂಶಗಳಿಗೆ ಇಳಿಯಿತು.

ಆರ್‌ಬಿಐ, ರೆಪೊ ದರ ತಗ್ಗಿಸಿರುವುದರ ಜತೆಗೆ ಆರ್ಥಿಕತೆ ಬಗ್ಗೆ ಮೃದು ಧೋರಣೆ ತಳೆದಿದ್ದರೂ ಷೇರುಪೇಟೆಯು ಇದಕ್ಕೆ ನಕಾರಾತ್ಮಕವಾಗಿ ಸ್ಪಂದಿಸಿದೆ. ಅದರಲ್ಲೂ ಬ್ಯಾಂಕ್‌ ಷೇರುಗಳಲ್ಲಿ ಹೆಚ್ಚಿನ ಮಾರಾಟ ಒತ್ತಡ ಕಂಡು ಬಂದಿತು.

‘ಬಡ್ಡಿ ದರ ಕಡಿಮೆಯಾಗುವುದರಿಂದ ಬ್ಯಾಂಕ್‌ಗಳ ಲಾಭದ ಪ್ರಮಾಣ ಕಡಿಮೆಯಾಗಲಿದೆ. ಆರ್ಥಿಕ ಪ್ರಗತಿಯ ಮುನ್ನೋಟವು ಕಳವಳಕಾರಿಯಾಗಿದೆ. ಈ ವರ್ಷದಲ್ಲಿ ಇದುವರೆಗೆ ಶೇ 1.35ರಷ್ಟು ರೆಪೊ ದರ ಕಡಿತ ಮಾಡಲಾಗಿದೆ. ಆರ್ಥಿಕತೆಗೆ ಬೆಂಬಲ ನೀಡುವಂತಹ ಹಣಕಾಸು ಕ್ರಮಗಳನ್ನು ಕೈಗೊಳ್ಳಲು ಇನ್ನು ಮುಂದೆ ಆರ್‌ಬಿಐಗೆ ಸೀಮಿತ ಅವಕಾಶ ಇದೆ’ ಎಂದು ಮಾರುಕಟ್ಟೆ ತಜ್ಞ ಗೌರವ್‌ ದುವಾ ವಿಶ್ಲೇಷಿಸಿದ್ದಾರೆ.

‘ಬ್ಯಾಂಕಿಂಗ್‌ ವಲಯದಲ್ಲಿ ಹೊಸ ಸಮಸ್ಯೆಗಳು ಸೃಷ್ಟಿಯಾಗಿರುವುದು ಮತ್ತು ವೃದ್ಧಿ ದರವನ್ನು ಕೆಳಮುಖವಾಗಿ ಪರಿಷ್ಕರಿಸಿರುವುದರಿಂದ ಹೂಡಿಕೆದಾರರಿಗೆ ನಿರಾಶೆಯಾಗಿದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಗಳಿಕೆ ಕಂಡ ಷೇರುಗಳು: ಟಿಸಿಎಸ್‌, ಇನ್ಫೊಸಿಸ್‌, ಒಎನ್‌ಜಿಸಿ, ಟೆಕ್‌ ಮಹೀಂದ್ರಾ, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಎನ್‌ಟಿಪಿಸಿ ಷೇರುಗಳು ಶೇ 1.03ರಷ್ಟು ಲಾಭ ಕಂಡಿವೆ.

ಷೇರುಗಳ ನಷ್ಟ

ಬ್ಯಾಂಕ್‌; ನಷ್ಟದ ಪ್ರಮಾಣ (%)

ಕೋಟಕ್‌ ಮಹೀಂದ್ರಾ ಬ್ಯಾಂಕ್‌;3.46

ಐಸಿಐಸಿಐ ಬ್ಯಾಂಕ್‌;3.17

ಎಚ್‌ಡಿಎಫ್‌ಸಿ ಬ್ಯಾಂಕ್‌;2.79

ಎಸ್‌ಬಿಐ; 2

ಆ್ಯಕ್ಸಿಸ್‌ ಬ್ಯಾಂಕ್‌;1.81

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT