ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಟುಬಿ’ ಖರೀದಿಗೆ ಶೇಕ್‌ಡೀಲ್‌

Last Updated 21 ಜನವರಿ 2020, 19:30 IST
ಅಕ್ಷರ ಗಾತ್ರ

ಕೈಗಾರಿಕಾ ಸರಕುಗಳ ಖರೀದಿ ಮತ್ತು ಪೂರೈಕೆಯ ದೇಶದ ಅತಿದೊಡ್ಡ ಬಿಟುಬಿ ಇ–ಕಾಮರ್ಸ್‌ ತಾಣಗಳಲ್ಲಿ ಒಂದಾಗಿರುವ ಬೆಂಗಳೂರಿನ ನವೋದ್ಯಮ ಶೇಕ್‌ಡೀಲ್‌ ( ShakeDeal) ಕೈಗಾರಿಕೆಗಳಲ್ಲಿ ಬಳಕೆಯಾಗುವ ಸರಕುಗಳನ್ನು ಪೂರೈಸುವ ಇ–ಕಾಮರ್ಸ್‌ ತಾಣವಾಗಿ ಗಮನ ಸೆಳೆಯುತ್ತಿದೆ. ಕೈಗಾರಿಕಾ ಘಟಕಗಳು ಮತ್ತು ಉದ್ದಿಮೆ ಸಮೂಹಗಳ ಅಗತ್ಯಗಳೆಲ್ಲವನ್ನು ಇಲ್ಲಿ ಒಂದೆಡೆಯೇ ಪಡೆಯಬಹುದು. ಸರಕುಗಳ ತಯಾರಿಕೆ ಹಂತದಲ್ಲಿ ಬಳಕೆಯಾಗುವ ಸಾಮಗ್ರಿ ಸೇರಿದಂತೆ ಕೈಗಾರಿಕೆಗಳ ಉತ್ಪಾದನೆ ಚಟುವಟಿಕೆಗಳಲ್ಲಿ ಬೇಕಾಗುವ ಸರಕುಗಳನ್ನು ಸಗಟು ರೂಪದಲ್ಲಿ ಪೂರೈಸುವ ಆನ್‌ಲೈನ್‌ ವಹಿವಾಟಿನಲ್ಲಿ ಈ ನವೋದ್ಯಮವು ತೊಡಗಿಕೊಂಡಿದೆ. ಸರಕು ತಯಾರಿಕೆಯ ಉದ್ದಿಮೆಗಳಲ್ಲದೆ ಬ್ಯಾಂಕಿಂಗ್‌, ಹಣಕಾಸು, ಐಟಿ, ಮತ್ತಿತರ ಕ್ಷೇತ್ರಗಳಲ್ಲಿ ಕೈಗಾರಿಕಾ ಸರಕುಗಳನ್ನು ಉದ್ದಿಮೆದಾರರಿಂದ ಉದ್ದಿಮೆದಾರರಿಗೆ ಪೂರೈಸುತ್ತಿದೆ. ಉದ್ದಿಮೆದಾರರ ಮಧ್ಯೆ ನಡೆಯುವ ಸರಕುಗಳ ಖರೀದಿ, ಪೂರೈಕೆಯ ವಹಿವಾಟಿನ ಸಂಪರ್ಕಕೊಂಡಿಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಪವರ್‌ ಟೂಲ್ಸ್‌, ಸುರಕ್ಷತಾ ಪರಿಕರ, ಕಚೇರಿಗಳಲ್ಲಿ ಬಳಕೆಯಾಗುವ ಸ್ಟೇಷನರಿ ಉತ್ಪನ್ನ, ಪ್ಯಾಕೇಜಿಂಗ್‌ ಉದ್ದೇಶಕ್ಕೆ ಬಳಕೆಯಾಗುವ ಪರಿಕರಗಳನ್ನು ಒದಗಿಸುತ್ತಿದೆ. ಸರಕುಗಳ ನಿರ್ವಹಣೆ ಮತ್ತು ಪ್ಯಾಕೇಜಿಂಗ್‌ ಅಗತ್ಯಗಳನ್ನೂ ಇದು ಪೂರೈಸುತ್ತದೆ. ಪ್ರಮುಖ ಬ್ರ್ಯಾಂಡ್‌ನ ಉತ್ಪನ್ನಗಳನ್ನು ತಯಾಉದ್ದಿಮೆಗಳಿಗೆ ಪೂರೈಸುವ ಅತ್ಯಂತ ವಿಶ್ವಾಸಾರ್ಹ ನವೋದ್ಯಮವಾಗಿ ಬೆಳೆಯುತ್ತಿದೆ. ದೇಶದಾದ್ಯಂತ ಡೀಲರ್‌ ಮತ್ತು ವಿತರಕರ ವ್ಯಾಪಕ ಜಾಲದ ಮೂಲಕ ವಹಿವಾಟನ್ನು ವಿಸ್ತರಿಸುತ್ತಿದೆ.

ಉದ್ದಿಮೆಗಳಿಗೆ ಅಗತ್ಯವಾಗಿ ಬೇಕಾದ 40 ಬಗೆಯ ಸರಕುಗಳನ್ನು ಇಲ್ಲಿ ನಾಲ್ಕು ಪ್ರಮುಖ ಭಾಗಗಳಾದ ಕೈಗಾರಿಕೆ, ಕಚೇರಿ ಅಗತ್ಯ, ಪ್ಯಾಕೇಜಿಂಗ್‌ ಮತ್ತು ಕಾರ್ಪೊರೇಟ್‌ ಗಿಫ್ಟ್‌ಗಳೆಂದು ವಿಂಗಡಿಸಿ ವಹಿವಾಟು ನಡೆಸಲಾಗುತ್ತಿದೆ. ಕೈಗಾರಿಕೆ, ಕಟ್ಟಡ ನಿರ್ಮಾಣ, ಕಚೇರಿ ಮತ್ತು ವೈದ್ಯಕೀಯ ಪರಿಕರಗಳನ್ನೂ ಪೂರೈಸುತ್ತಿದೆ. ದಕ್ಷ ಪೂರೈಕೆ ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಕಾರ್ಪೊರೇಟ್‌ಗಳು, ಕೈಗಾರಿಕೆಗಳು ತಮಗೆ ಅಗತ್ಯವಾದ ಪರಿಕರಗಳನ್ನು ಆನ್‌ಲೈನ್‌ನಲ್ಲಿ ಸಗಟು ರೂಪದಲ್ಲಿ ಖರೀದಿಸುವುದನ್ನು ಇದು ಸುಲಭಗೊಳಿಸಿದೆ.

‘ಕಾರ್ಪೊರೇಟ್‌ ಗಿಫ್ಟ್‌ ವಹಿವಾಟು ಹಬ್ಬದ ದಿನಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಬೃಹತ್‌ ವಹಿವಾಟಿನ ಪ್ರಮುಖ ಕಂಪನಿಗಳು ಕೈಗೆತ್ತಿಕೊಂಡ ಪ್ರತಿಯೊಂದು ಯೋಜನೆಗಳಿಗೆ ಸಂಬಂಧಿಸಿದಂತೆ ವರ್ಷದ ಉದ್ದಕ್ಕೂ ತಮ್ಮ ವಹಿವಾಟಿನ ಪಾಲುದಾರರಿಗೆ ಕೊಡುಗೆಗಳನ್ನು ನೀಡುತ್ತಲೇ ಇರುತ್ತವೆ. ಹಲವು ಕಂಪನಿಗಳು ತಮ್ಮ ಸರಕುಗಳ ಮಾರಾಟ ಉತ್ತೇಜಿಸಲು ವರ್ಷದ ಉದ್ದಕ್ಕೂ ಬೇರೆ, ಬೇರೆ ಸಂದರ್ಭಗಳಲ್ಲಿ ಡೀಲರ್ಸ್‌ಗಳಿಗೆ ಗಿಫ್ಟ್‌ಗಳನ್ನು ಕೊಡುತ್ತಲೇ ಇರುತ್ತವೆ. ಈ ಕಾರ್ಪೊರೇಟ್‌ ಗಿಫ್ಟ್‌ಗಳಲ್ಲಿ 90 ಬಗೆಗಳಿವೆ. ಹೀಗಾಗಿ ಅದರ ವಹಿವಾಟಿನ ಗಾತ್ರ ದೊಡ್ಡದಿದೆ’ ಎಂದು ಸಹ ಸ್ಥಾಪಕ ಆಕಾಶ್ ಹೆಗ್ಡೆ ಹೇಳುತ್ತಾರೆ.

ಸಿಂಗಪುರ ಮತ್ತು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿ ಭಾರತಕ್ಕೆ ಮರಳಿರುವ ಅವಳಿ ಸೋದರರಾದ ಆಕಾಶ್‌ ಮತ್ತು ಅಕ್ಷಯ್‌ ಹೆಗ್ಡೆ (28) ಮತ್ತು ಬೆಂಗಳೂರಿನ ಸಂತೋಷ್‌ ರೆಡ್ಡಿ (35) ಅವರು ಈ ನವೋದ್ಯಮದ ಸಹ ಸ್ಥಾಪಕರು. ಕುಟುಂಬದ ಉದ್ದಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮುಂದಾಗಿದ್ದ ಹೆಗ್ಡೆ ಸೋದರರಿಗೆ ಸಮಾನ ಮನಸ್ಕರಾದ ಸಂತೋಷ ಜತೆಯಾಗಿದ್ದಾರೆ. ಎಂಜಿನಿಯರ್‌ ಪದವೀಧರರಾಗಿರುವ ಈ ಮೂವರೂ ತಂತ್ರಜ್ಞಾನ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಸರಕು ಪೂರೈಕೆ ವಹಿವಾಟಿನಲ್ಲಿ ಅಮೆರಿಕದಲ್ಲಿ ಪರಿಣತಿ ಪಡೆದಿರುವ ಅಕ್ಷಯ್‌, ಸಿಂಗಪುರದಲ್ಲಿ ಇ–ಕಾಮರ್ಸ್‌ ವಹಿವಾಟಿನ ಅನುಭವ ಹೊಂದಿರುವ ಆಕಾಶ್‌ ಮತ್ತು ಮೈಂಡ್‌ಟ್ರೀನಲ್ಲಿ 8 ವರ್ಷ ಕೆಲಸ ಮಾಡಿರುವ ಸಂತೋಷ್ ತಮ್ಮೆಲ್ಲ ಅನುಭವ ಧಾರೆ ಎರೆದು ಈ ನವೋದ್ಯಮವನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ.

ಆರಂಭದಲ್ಲಿ ಮೂವರೂ ಸೇರಿಕೊಂಡು ಕೆ ಆರ್‌. ಮಾರುಕಟ್ಟೆಯಲ್ಲಿ ಕಚೇರಿ ಆರಂಭಿಸಿದ್ದರು. ಆರು ತಿಂಗಳ ಕಾಲ ಎಲ್ಲ ಮಾರಾಟಗಾರರ ಜತೆ ಮಾತನಾಡಿ ವಹಿವಾಟನ್ನು ಪರಿಚಯಿಸಿದ್ದರು. ಮಾರಾಟಗಾರರ ವಹಿವಾಟು ಹೆಚ್ಚಿಸಲು ಆರ್ಡರ್‌ ಒದಗಿಸಿ ತಮ್ಮ ನವೋದ್ಯಮಕ್ಕೆ ಗಟ್ಟಿ ಬುನಾದಿ ಹಾಕಿದ್ದರು. ಆರಂಭದಲ್ಲಿ ಈ ಮೂವರೂ ತಮ್ಮ ಸ್ವಂತ ದುಡಿಮೆಯ ಹಣ ತೊಡಗಿಸಿ ಈ ನವೋದ್ಯಮವನ್ನು ಮುನ್ನಡೆಸಿದ್ದರು. ಆನಂತರ ಮಾರಾಟಗಾರರೇ ಇವರನ್ನು ಹುಡುಕಿಕೊಂಡು ಬರುವಂತಾಯಿತು.

‘ಸರಕುಗಳ ಖರೀದಿ ಮತ್ತು ಪೂರೈಕೆಯಲ್ಲಿ ಹೊಸ ಪರಿಕಲ್ಪನೆಯಾಗಿರುವ ಕ್ಲೌಡ್‌ ಫುಲ್‌ಫಿಲ್‌ಮೆಂಟ್‌ ಸೆಂಟರ್‌ ಬಳಸಿ ವಹಿವಾಟು ನಿರ್ವಹಿಸಲಾಗುತ್ತಿದೆ. ರಿಲಯನ್ಸ್‌, ಅದಾನಿ ಮತ್ತಿತರ ದೊಡ್ಡ ಕಂಪನಿಗಳ ಜತೆ ವಾರ್ಷಿಕ ದರ ಗುತ್ತಿಗೆಯಡಿ (ಎಆರ್‌ಸಿ) ಸರಕುಗಳನ್ನು ಪೂರೈಸಲಾಗುತ್ತಿದೆ. ಖರೀದಿದಾರರಿಗೆ ಉತ್ತಮ ಬೆಲೆಗೆ ಸರಕುಗಳನ್ನು ಮಾರಾಟ ಮಾಡುವುದರಿಂದ ವಹಿವಾಟು ವಿಸ್ತರಣೆಯಾಗುತ್ತಿದೆ’ ಎಂದು ಆಕಾಶ್‌ ಹೇಳುತ್ತಾರೆ.

ಅಮೆರಿಕದ ಹೂಡಿಕೆ ಕಂಪನಿ ವೊರಾ ವೆಂಚರ್ಸ್‌ ಹಣ ತೊಡಗಿಸಿದ ನಂತರ ವಹಿವಾಟು ಹೆಚ್ಚಳಗೊಂಡಿದೆ. ಶೇಕ್‌ಡೀಲ್‌ ತಾಣದಲ್ಲಿ ಖರೀದಿಸುವ ಸರಕುಗಳಿಗೆ ಜಿಎಸ್‌ಟಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಬಹುದು. ‘ನಿಫ್ಟಿ 250’ ಯಲ್ಲಿ ಇರುವ ಬಹುತೇಕ ಕಂಪನಿಗಳನ್ನು ಈ ವರ್ಷಾಂತ್ಯದ ವೇಳೆಗೆ ತಮ್ಮ ವಹಿವಾಟಿನ ವ್ಯಾಪ್ತಿಗೆ ತರುವುದು ಇವರ ಸದ್ಯದ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT