ಭಾನುವಾರ, ಜೂನ್ 26, 2022
21 °C

ಒಳನೋಟ: ತೈಲ ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ಪೆಟ್ರೋಲ್‌ ದರದಲ್ಲಿ ಆಗಿರುವ ಏರಿಳಿತ

ದಿನ ದಿನವೂ ಏರುತ್ತಲೇ ಇರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಜನರನ್ನು ಹೈರಾಣಾಗಿಸಿದೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ಲೀಟರ್‌ ಪೆಟ್ರೋಲ್‌ ದರವು ₹100ರ ಗಡಿ ದಾಟಿದೆ. ತೈಲೋತ್ಪನ್ನಗಳ ಬೆಲೆ ಏರಿಕೆಯು ಜನ ಜೀವನದ ಎಲ್ಲ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರುತ್ತದೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ ಆದಾಯ ನಷ್ಟ ಅಥವಾ ಕಡಿತವಾಗಿರುವ ಈ ಸಂದರ್ಭದಲ್ಲಿ ಪೆಟ್ರೋಲ್‌ ಬೆಲೆಯೂ ಏರಿಕೆಯಾಗಿ ಜನ ಜೀವನವನ್ನು ಇನ್ನಷ್ಟು ದುಸ್ತರಗೊಳಿಸಿದೆ

ಸರ್ಕಾರಗಳ ಬೊಕ್ಕಸ ತುಂಬಿಸುತ್ತಿರುವ ತೈಲ ತೆರಿಗೆ

ತೈಲೋತ್ಪನ್ನ ದರ ನಿಯಂತ್ರಣ ಸಿಗದ ಹಾಗೆ ಏರಿಕೆಯಾಗುತ್ತಿದ್ದರೆ, ಅತ್ತ ಸರ್ಕಾರದ ಬೊಕ್ಕಸವೂ ಭರ್ತಿಯಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹ ಶೇ 300ರಷ್ಟು ಏರಿಕೆಯಾಗಿದೆ. ಇದು ಲೋಕಸಭೆಗೆ ಸರ್ಕಾರವೇ ನೀಡಿದ ಮಾಹಿತಿ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ವರ್ಷದಲ್ಲಿ (2014–15) ಕೇಂದ್ರವು ಪೆಟ್ರೋಲ್‌ನಿಂದ ₹29,279 ಕೋಟಿ, ಡೀಸೆಲ್‌ನಿಂದ ₹42,881 ಕೋಟಿ ಸಂಗ್ರಹಿಸಿತ್ತು.

2020–21ರ ಹಣಕಾಸು ವರ್ಷದ ಮೊದಲ ಹತ್ತು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌, ಮತ್ತು ಡೀಸೆಲ್‌ನಿಂದ ₹2.94 ಲಕ್ಷ ಕೋಟಿ ಸಂಗ್ರಹಿಸಿದೆ. ಸಚಿವ ಅನುರಾಗ್ ಠಾಕೂರ್ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.

ಅದೇ ರೀತಿ ನೈಸರ್ಗಿಕ ಅನಿಲದ ಮೇಲಿನ ತೆರಿಗೆಯಿಂದಲೂ ದೊಡ್ಡ ಮೊತ್ತದ ಸಂಪನ್ಮೂಲ ಸಂಗ್ರಹವಾಗಿದೆ. 2014–15ನೇ ಸಾಲಿನಲ್ಲಿ ₹74,158 ಕೋಟಿ ಇತ್ತು. ಇದು 2020 ಏಪ್ರಿಲ್‌ನಿಂದ 2021 ಜನವರಿ ಅವಧಿಯಲ್ಲಿ ₹2.95 ಲಕ್ಷ ಕೋಟಿಗೆ ಏರಿಕೆಯಾಗಿದೆ. ಏಳು ವರ್ಷಗಳ ಹಿಂದೆ ಶೇ 5.4ರಷ್ಟಿದ್ದ ವರಮಾನವು ಪ್ರಸ್ತುತ ಶೇ 12.2ಕ್ಕೆ ಏರಿಕೆಯಾಗಿದೆ.

2014ರಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮೇಲೆ ₹9.48 ಸುಂಕ ವಿಧಿಸಲಾಗುತ್ತಿತ್ತು. ಪ್ರಸ್ತುತ ಅದು ₹32.90ಕ್ಕೆ ಏರಿಕೆಯಾಗಿದೆ. ಡೀಸೆಲ್‌ ಸಹ ₹3.56ರಿಂದ ₹31.80ಗೆ ಏರಿಕೆ ಕಂಡಿದೆ. ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ ಕೇಂದ್ರದ ಮಾದರಿಯನ್ನು ಅನುಸರಿಸುತ್ತಿವೆ. ಕೇಂದ್ರ ವಿಧಿಸುವಷ್ಟೇ ತೆರಿಗೆಯನ್ನು ರಾಜ್ಯ ಸರ್ಕಾರಗಳೂ ವಿಧಿಸುವ ಮೂಲಕ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಧಿಸುವ ತೆರಿಗೆಯನ್ನು ವಾಹನ ಸವಾರರು ಪಾವತಿಸಬೇಕಿದೆ. ಹೀಗಾಗಿ ಪ್ರತೀ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‌ ಮೇಲೆ ಸರಿಸುಮಾರು ಶೇ 60ರಷ್ಟು ತೆರಿಗೆ ಇದೆ.

2020ರಲ್ಲಿ ಶುರುವಾದ ಕೋವಿಡ್‌ ಆರ್ಭಟದಿಂದ ಲಾಕ್‌ಡೌನ್ ಹೇರಬೇಕಾದ ಸ್ಥಿತಿ ನಿರ್ಮಾಣವಾಯಿತು.  ವ್ಯಾಪಾರ, ಉದ್ದಿಮೆಗಳು ಸ್ಥಗಿತಗೊಂಡಿದ್ದರಿಂದ ಸರ್ಕಾರದ ವರಮಾನಕ್ಕೆ ಭಾರಿ ಪೆಟ್ಟು ಬಿದ್ದಿತು. ಹೀಗಾಗಿ ಸರ್ಕಾರವು ನೆಚ್ಚಿಕೊಂಡಿದ್ದು ತೈಲೋತ್ಪನ್ನ ಹಾಗೂ ಅಬಕಾರಿ ಸುಂಕವನ್ನು. ಜನರು ಕೋವಿಡ್ ಹಾಗೂ ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ತೈಲ ಬೆಲೆಯನ್ನು ಇಳಿಸುತ್ತಿಲ್ಲ. ಇರುವ ಅತಿಮುಖ್ಯ ವರಮಾನ ಮೂಲವನ್ನು ಕಳೆದುಕೊಳ್ಳಲು ಸರ್ಕಾರ ಸಿದ್ಧವಿಲ್ಲ ಎಂದು ತಜ್ಞರು ಹೇಳುತ್ತಾರೆ.

ಉತ್ಪಾದನೆ ಕಡಿತ

ನಮ್ಮ ಅಗತ್ಯದ ಶೇ 80ಕ್ಕೂ ಹೆಚ್ಚಿನ ತೈಲವನ್ನು ನಾವು ಆಮದು ಮಾಡಬೇಕಾಗಿರುವುದರಿಂದ ಬೇರೆಬೇರೆ ದೇಶಗಳಿಂದ ಕಚ್ಚಾತೈಲದ ಸಾಗಾಣಿಕೆಗೇ ದೊಡ್ಡ ವೆಚ್ಚ ತಗಲುತ್ತದೆ. 

ಕೋವಿಡ್ ಸಂದರ್ಭದಲ್ಲಿ ಬೇಡಿಕೆ ಕುಸಿತ ಹಾಗೂ ಇನ್ನೂ ಹಲವು ಕಾರಣಗಳಿಂದ ತೈಲೋತ್ಪಾದನಾ ರಾಷ್ಟ್ರಗಳು ಉತ್ಪಾದನೆಯನ್ನು ಕಡಿತಗೊಳಿಸಿದ್ದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿ, ಕಚ್ಚಾ ತೈಲದ ದರ ಏರಿದೆ. 

ತೈಲ ದುಬಾರಿಯಾಗುತ್ತಿದ್ದರೂ ಕೇಂದ್ರ ಸರ್ಕಾರ ಸುಂಕ ಇಳಿಸಲು ನಿರಾಕರಿಸಿದೆ. ಬೆಲೆ ಏರಿಕೆಯಿಂದ ಗ್ರಾಹಕರಿಗೆ ಸ್ವಲ್ಪ ಸಾಂತ್ವನ ನೀಡಲು ಕೆಲವು ತಿಂಗಳ ಹಿಂದೆ ಒಂದೆರಡು ರಾಜ್ಯಗಳು ವ್ಯಾಟ್‌ ಅನ್ನು ಸ್ವಲ್ಪ ಮಟ್ಟಿಗೆ ಇಳಿಸಿದವು. ಆದರೆ, ಕೇಂದ್ರವು ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.

ವಿದೇಶಿ ವಿನಿಮಯ ದರದಲ್ಲಿ ಏರುಪೇರಾಗುತ್ತಿರುವುದು ಮತ್ತು ತೈಲ ಸಂಸ್ಕರಣಾ ಕಂಪನಿಗಳು ದಿನನಿತ್ಯವೂ ದರ ಪರಿಷ್ಕರಣೆ ಮಾಡುವುದು ಸಹ ಬೆಲೆ ಏರಿಕೆಗೆ ತನ್ನದೇ ಆದ ಕಾಣಿಕೆ ನೀಡಿವೆ.

ಶತಕ ಬಾರಿಸಿದ ಪೆಟ್ರೋಲ್

ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರವು ₹100 ಗಡಿ ದಾಟಿ ದಾಖಲೆ ಬರೆದಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಪೆಟ್ರೋಲ್ ಶತಕ ಬಾರಿಸಿದೆ. ವಿವಿಧ ರಾಜ್ಯಗಳಲ್ಲಿ ವ್ಯಾಟ್ ಮತ್ತು ಸಾರಿಗೆ ತೆರಿಗೆ ಭಿನ್ನವಾಗಿರುವ ಕಾರಣ, ದರದಲ್ಲಿ ವ್ಯತ್ಯಾಸವಿದೆ. ಹೀಗಾಗಿ ಚಿಲ್ಲರೆ ಮಾರಾಟದಲ್ಲಿ ರಾಜ್ಯಗಳ ನಡುವೆ ದರದಲ್ಲಿ ಭಿನ್ನತೆಯಿದೆ. ರಾಜಸ್ಥಾನದಲ್ಲಿ ಅತಿಹೆಚ್ಚು ವ್ಯಾಟ್ ವಿಧಿಸಲಾಗುತ್ತದೆ. ಹೀಗಾಗಿ ಬೆಲೆ ದುಬಾರಿ ಎನಿಸಿದೆ.

ನಿಯಂತ್ರಣಮುಕ್ತ ಎಂಬ ಪ್ರಹಸನ

ಭಾರತದಲ್ಲಿ ತೈಲ ದರವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ, ವೆಚ್ಚ ಮತ್ತು ಲಾಭವನ್ನು ಲೆಕ್ಕ ಹಾಕಿ ಇಂಡಿಯನ್‌ ಆಯಿಲ್‌, ಎಚ್‌ಪಿಸಿಎಲ್‌ನಂತಹ ತೈಲ ಮಾರಾಟ ಕಂಪನಿಗಳೇ ಪೆಟ್ರೋಲ್‌, ಡೀಸೆಲ್‌ ದರ ನಿಗದಿ ಮಾಡುತ್ತವೆ. ತೈಲ ದರದ ನಿಯಂತ್ರಣವನ್ನು ಸರ್ಕಾರವು ಹಂತ ಹಂತವಾಗಿ ಕೈಬಿಟ್ಟಿದೆ. 2002ರಲ್ಲಿ ಎಟಿಎಫ್‌ (ವಿಮಾನದಲ್ಲಿ ಬಳಸುವ ತೈಲ), 2010ರಲ್ಲಿ ಪೆಟ್ರೋಲ್‌ ಮತ್ತು 2014ರಲ್ಲಿ ಡೀಸೆಲ್‌ನ ನಿಯಂತ್ರಣವನ್ನು ಸರ್ಕಾರ ಕೈಬಿಟ್ಟಿದೆ. 

ಇದು ನಿಜವೇ ಆದರೂ ವಾಸ್ತವ ಹಾಗೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಭಾರಿ ಪ್ರಮಾಣದ ತೆರಿಗೆ, ಸೆಸ್‌ ವಿಧಿಸುತ್ತಿವೆ. ತೈಲ ದರ ಹೆಚ್ಚಾದಷ್ಟು ಸರ್ಕಾರಗಳಿಗೆ ಲಾಭ ಹೆಚ್ಚು. ತೈಲ ಬೆಲೆಯು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಎಂಬುದರಿಂದ ಗ್ರಾಹಕನಿಗೆ ಯಾವ ಲಾಭವೂ ಇಲ್ಲ. ಏಕೆಂದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾದ ಕೂಡಲೇ ತೈಲ ಮಾರಾಟ ಕಂಪನಿಗಳು ಪೆಟ್ರೋಲ್‌–ಡೀಸೆಲ್‌ ದರ ಏರಿಸುತ್ತವೆ. ಕಚ್ಚಾ ತೈಲದ ಬೆಲೆ ಇಳಿದಾಗ ಪೆಟ್ರೋಲ್‌–ಡೀಸೆಲ್‌ ದರ ಗಣನೀಯವಾಗಿ ಕುಸಿದ ನಿದರ್ಶನ ಇಲ್ಲ. ಒಂದು ವೇಳೆ ತೈಲ ದರ ಕಡಿಮೆಯಾದರೆ, ಸರ್ಕಾರಗಳು ತೆರಿಗೆ ದರ ಹೆಚ್ಚಿಸಿ ಪೆಟ್ರೋಲ್‌–ಡೀಸೆಲ್‌ ದುಬಾರಿಯಾಗಿಯೇ ಇರುವಂತೆ ಮಾಡುತ್ತವೆ. 

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳಿಗೆ ಏಪ್ರಿಲ್‌–ಮೇ ತಿಂಗಳಲ್ಲಿ ಚುನಾವಣೆ ನಡೆದಿದೆ. ಫೆಬ್ರುವರಿ 23ರಿಂದಲೇ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಗೆ ತಡೆ ಬಿದ್ದಿದೆ. ಮೇ 2ರಂದು ಚುನಾವಣೆಯ ಫಲಿತಾಂಶ ಹೊರಬಿತ್ತು. ಮೇ 4ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಆರಂಭವಾಯಿತು. ಚುನಾವಣೆಯ ಸಂದರ್ಭದಲ್ಲಿ ಈ ಹಿಂದೆಯೂ ತೈಲ ದರ ಏರಿಕೆ ಸ್ಥಗಿತಗೊಂಡ ಉದಾಹರಣೆ ಇದೆ. ತೈಲ ದರವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲದೇ ಇದ್ದರೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲ. 

* 2016ರ ಆರಂಭದ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಕೇಂದ್ರ ಸರ್ಕಾರವು ಆಗ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಇದರಿಂದ ಕಚ್ಚಾತೈಲದ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ವರ್ಗಾವಣೆಯಾಗಿರಲಿಲ್ಲ

* ನಂತರದ ದಿನಗಳಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಯಿತು. ಆದರೆ ಕೇಂದ್ರ ಸರ್ಕಾರವು ಅಬಕಾರಿ ಸುಂಕದ ಪ್ರಮಾಣವನ್ನು ಇಳಿಕೆ ಮಾಡದ ಕಾರಣ, ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟದ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು

* 2020ರ ಮಾರ್ಚ್‌ನಲ್ಲಿ ಕೋವಿಡ್‌ನ ಕಾರಣದಿಂದ ದೇಶದಾದ್ಯಂತ ಲಾಕ್‌ಡೌನ್ ಜಾರಿಯಾಯಿತು. ಆರ್ಥಿಕತೆ ಬಹುತೇಕ ಸ್ಥಗಿತವಾದ ಕಾರಣ, 2020ರ ಮಾರ್ಚ್ 20ರಂದು ಇದ್ದ ಇಂಧನದ ಬೆಲೆಯನ್ನೇ ಮುಂದಿನ ಆದೇಶದವರೆಗೆ ನಿಗದಿಮಾಡಲಾಯಿತು. ಈ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಹಲವು ಪಟ್ಟು ಇಳಿಕೆಯಾದರೂ, ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟದ ಬೆಲೆಯನ್ನು ಇಳಿಸಲಿಲ್ಲ. ಅಬಕಾರಿ ಸುಂಕ ಮತ್ತು ಇತರ ಸೆಸ್‌ಗಳ ಪ್ರಮಾಣವನ್ನು ಏರಿಕೆ ಮಾಡಿಕೊಂಡು, ಸರ್ಕಾರವು ಒಂದೇ ಬೆಲೆಯನ್ನು ಕಾಯ್ದುಕೊಂಡಿತು. ಹೀಗಾಗಿ ಕಚ್ಚಾತೈಲ ಬೆಲೆ ಇಳಿಕೆಯ ಲಾಭ ಗ್ರಾಹಕನಿಗೆ ವರ್ಗವಾಗಲೇ ಇಲ್ಲ

* 2020ರ ಸೆಪ್ಟೆಂಬರ್ 29ರಂದು ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಆದರೆ, ಅಕ್ಟೋಬರ್ 1ರಿಂದ ನವೆಂಬರ್ 20ರವರೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಬರೋಬ್ಬರಿ 40 ದಿನಗಳ ಕಾಲ ಈ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಚುನಾವಣೆ ಘೋಷಣೆಯಾಗಿ, ಫಲಿತಾಂಶ ಬರುವರೆಗೂ ಒಂದೇ ಬೆಲೆಯನ್ನು ಕಾಯ್ದುಕೊಳ್ಳಲಾಗಿತ್ತು

* 2021ರ ಫೆಬ್ರುವರಿ 27ರಂದು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಅಂದಿನಿಂದಲೇ ಪೆಟ್ರೋಲ್‌-ಡೀಸೆಲ್ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಬದಲಾವಣೆ ನಿಲ್ಲಿಸಲಾಯಿತು. ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಯಿತು. ಈ ಅವಧಿಯಲ್ಲಿ ಎರಡು ಬಾರಿ ಮಾತ್ರ ಪೆಟ್ರೋಲ್‌-ಡೀಸೆಲ್ ಬೆಲೆಯನ್ನು ಬದಲಾವಣೆ ಮಾಡಲಾಗಿತ್ತು

ಆಧಾರ: ಇಂಧನ ಸಚಿವಾಲಯದ ಪೆಟ್ರೋಲಿಯಂ ಇಂಧನ ಬೆಲೆ ವಿಶ್ಲೇಷಣಾ ಘಟಕದ ವರದಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು