ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಹಲಸಿಗೆ ವಿಶಿಷ್ಟ ಮಾರುಕಟ್ಟೆ

Last Updated 25 ಮಾರ್ಚ್ 2020, 3:12 IST
ಅಕ್ಷರ ಗಾತ್ರ

ಫೆಬ್ರುವರಿಯ ಮಧ್ಯದಲ್ಲಿ ಕೇರಳದ ಮೂಲೆಯಲ್ಲೊಂದು ಹಲಸು ಮಾರುಕಟ್ಟೆ ಸದ್ದುಗದ್ದಲವಿಲ್ಲದೆ ಆರಂಭವಾಗಿದೆ. ಇದನ್ನು ಸರ್ಕರಿ ಸಂಸ್ಥೆ ‘ವೆಜಿಟೇಬಲ್ ಆಂಡ್ ಫ್ರೂಟ್ ಪ್ರಮೋಶನ್ ಕೌನ್ಸಿಲ್ ಆಫ್ ಕೇರಳ (ವಿಎಫ್‍ಪಿಸಿಕೆ)‘ ಇಡುಕ್ಕಿ ಜಿಲ್ಲೆಯ ಕಲಯಂತಾನಿ ಎಂಬಲ್ಲಿ ಆರಂಭಿಸಿದೆ.

ಈವರೆಗೆ, ಬಾಳೆಕಾಯಿ ಅಥವಾ ಉಳಿದ ಹಣ್ಣು ತರಕಾರಿಗಳಿಗಿರುವಂತೆ, ಹಲಸಿಗೆ ರಾಜ್ಯದಲ್ಲೆಲ್ಲೂ ಖಚಿತವಾಗಿ ಕೊಂಡುಕೊಳ್ಳುವ ಮಾರುಕಟ್ಟೆಯೇ - ಅಶ್ಯೂರ್ಡ್ ಮಾರ್ಕೆಟ್ - ಇರಲಿಲ್ಲ. ಈ ಚಾರಿತ್ರಿಕ ಮಾರುಕಟ್ಟೆ ಆರಂಭಿಸಲು ಕಾರಣ ಕೇರಳದ ಕೃಷಿ ಸಚಿವ ವಿ.ಎಸ್. ಸುನಿಲ್ ಕುಮಾರರ ಹುಮ್ಮಸ್ಸು.

ಹಲಸಿನ ಮಾರುಕಟ್ಟೆ ನಡೆಯುವುದು ಪ್ರತಿ ಶುಕ್ರವಾರ. ಇದರ ವಿಧಿವಿಧಾನ ಮತ್ತು ಪುನರ್ಮಾರಾಟದ ಬಗ್ಗೆ ವಿಎಫ್‍ಪಿಸಿಕೆ ತಿಂಗಳುಗಳಿಂದ ಪ್ಲಾನಿಂಗ್ ನಡೆಸಿದೆ. ಮೊದಲ ಒಂದು ತಿಂಗಳಲ್ಲಿ ಸಂಸ್ಥೆ ಕೃಷಿಕರಿಂದ ನಾಲ್ಕು ಟನ್ನಿನಷ್ಟು ಹಲಸು ಖರೀದಿಸಿದೆ.

ಬಕ್ಕೆ ಹಲಸಿಗೆ ಕೆ.ಜಿಗೆ ₹20 ಮತ್ತು ಬಿಳುವಕ್ಕೆ (ಅಂಬಲಿ, ಮೆತ್ತಗಿನ ಸೊಳೆಯದು) ₹15ರ ದರದಲ್ಲಿ ಕೊಳ್ಳುತ್ತಿದೆ. ಬರುವ ಹಲಸಿನ ಸರಾಸರಿ ತೂಕ 12 ಕೆ.ಜಿ. ಇದಕ್ಕೆ ಕೃಷಿಕರಿಗೆ ₹ 180 ಅಥವಾ ₹ 240 ಸಿಗುತ್ತದೆ. ವಿಎಫ್‍ಪಿಸಿಕೆಯ ಸದಸ್ಯರಾದ 25 ಕೃಷಿಕರು ಹಲಸು ತರುತ್ತಾರೆ.

ವಿಎಫ್‍ಪಿಸಿಕೆ ‘ಒಳ್ಳೆ ಬೆಲೆಗೆ ಖರೀದಿಸುತ್ತೇವೆ’ ಎಂದಾಗ ಬೆಳೆಗಾರರು ಓಡೋಡಿ ಹಲಸಿನಕಾಯಿ ತರುವ ಸ್ಥಿತಿ ಇಲ್ಲಿಲ್ಲ. ಒಂದೂವರೆ ದಶಕದಿಂದ ಖಾಸಗಿ ವ್ಯಾಪಾರಿಗಳು ಇಲ್ಲಿನ ಮನೆಮನೆಗೆ ಬಂದು ಎಳೆಹಲಸು ಕೊಯ್ದು ಒಯ್ಯುತ್ತಿದ್ದಾರೆ. ಇದು ನೇರ ಉತ್ತರ ಭಾರತಕ್ಕೆ ಸಾಗುತ್ತದೆ. ಒಂದು ಎಳೆ ಹಲಸಿಗೆ ₹15 ರಿಂದ ₹ 20 ಸಿಗುತ್ತದೆ. ಬಹುಪಾಲು ಕೃಷಿಕರಿಗೆ ವ್ಯಾಪಾರಿಗಳು ತಾವೇ ಕೊಯ್ದು ಕೈಯಲ್ಲಿ ಹಣವಿಟ್ಟು ಒಯ್ಯುವ ವ್ಯವಸ್ಥೆ ಸುಖ ಎನಿಸಿದೆ.

‘ನಮ್ಮ ಕೃಷಿಕರಿಗೆ ಅವರಿಗಾಗುತ್ತಿರುವ ನಷ್ಟದ ಅರಿವೇ ಇಲ್ಲ. ಹಿಂದೆ ಕೊಳೆತುಹೋಗುತ್ತಿದ್ದ ಹಲಸಿಗೆ ಈಗ ಇಷ್ಟು ಹಣ ಸಿಗುತ್ತಿದೆಯಲ್ಲಾ ಅಂದುಕೊಳ್ಳುತ್ತಿದ್ದಾರೆ‘, ಬೊಟ್ಟು ಮಾಡುತ್ತಾರೆ ಇಡುಕ್ಕಿ ಜಿಲ್ಲೆಯ ವಿಎಫ್‍ಪಿಸಿಕೆಯ ಉಪಪ್ರಬಂಧಕ ಜೋಮೋನ್, ‘ಬಕ್ಕೆ ಜಾತಿಯ ಎಳೆ ಹಲಸನ್ನೇ ಮಾರದೆ, ಎರಡು ತಿಂಗಳು ಬಲಿಯಲು ಬಿಟ್ಟರೆ, ಎಂಟುಹತ್ತು ಪಟ್ಟು ಹೆಚ್ಚು ಆದಾಯ ಬರುತ್ತದೆ. ಇದು ಅವರಿಗೆ ನಿಧಾನವಾಗಿ ಅರ್ಥವಾಗಬೇಕಷ್ಟೇ‘.

‘ಕೊಯ್ಯಲು ಆಳು ಸಿಗುವುದಿಲ್ಲ; ಕೂಲಿಯೂ ದುಬಾರಿ’ ಎನ್ನುವುದು ಇನ್ನೊಂದು ಸಮಸ್ಯೆ. ದೊಡ್ಡ ಹಲಸಿನಕ್ಕೆ ಮರ ಒಂದು ಸಲ ಏರಿ ಕೊಯ್ದರೆ ₹500 ರಿಂದ ₹600 ಕೊಡಬೇಕು. ಒಂದೆರಡೇ ಮರ ಏರಲು ಯಾರೂ ಸಿಗುವುದಿಲ್ಲ. ಇದಕ್ಕಾಗಿ ವಿಎಫ್‍ಪಿಸಿಕೆ ಇಬ್ಬರು ಕೊಯ್ಲುಗಾರರನ್ನು ಒಪ್ಪಿಸಿ ಕೃಷಿಕರಿಗೆ ಪರಿಚಯಿಸಿತು. ಆದರೀಗ, ನಿಶ್ಚಿತ ಆದಾಯ ಬರುತ್ತದೆ ಎಂದಾದಾಗ ಇವರ ಸೇವೆ ಇಲ್ಲದೆಯೇ ಕೊಯ್ಲು ನಡೆಯುತ್ತದೆ. ಕೃಷಿಕರು ಸ್ಥಳೀಯವಾಗಿಯೇ ಕೊಯ್ಲಿನ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.

ವಿಎಫ್‍ಪಿಸಿಕೆಯಿಂದ ತೊಡುಪುಳದ ‘ಕಾಡ್ಸ್’ (The Kerala Agricultural Development Society) ಸಂಸ್ಥೆ ಹಲಸನ್ನು ಖರೀದಿಸುತ್ತದೆ. ಕಾಡ್ಸ್‌ಗೆ ತೊಡುಪುಳ ಅಲ್ಲದೆ, ಎರ್ನಾಕುಲಂನಲ್ಲೂ , ತ್ರಿಶೂರಿನಲ್ಲಿ ಒಡಂಬಡಿಕೆಯದೂ ಮಳಿಗೆಗಳಿವೆ. ಅದು ಈ ಮೂರೂ ನಗರಗಳಲ್ಲಿ ಹಲಸನ್ನು ಮಾರುತ್ತದೆ.

ಶುಕ್ರವಾರ ಮಾರಿದ ಹಲಸಿನ ಹಣ ಮುಂದಿನ ಮಂಗಳವಾರದಂದು ಕೃಷಿಕರಿಗೆ ಸಿಗುತ್ತದೆ. ವಿಎಫ್‍ಪಿಸಿಕೆ ನಿರ್ವಹಣಾ ವೆಚ್ಚಕ್ಕಾಗಿ ಶೇ 5ರಷ್ಟು ಕಮಿಷನ್ ಮಾತ್ರ ಮುರಿದುಕೊಳ್ಳುತ್ತದೆ.

ಹಲಸಿನಲ್ಲಿ ಇನ್ನೊಂದು ದೊಡ್ಡ ಸಮಸ್ಯೆಯಿದೆ. ಹೊರಗಿನಿಂದಲೇ ಅದು ಬೆಳೆದು ಮಾಗಿದೆಯೇ, ಬಕ್ಕೆಯೇ, ಬಿಳುವನೇ, ಸೊಳೆ – ಅಂದರೆ ತಿನ್ನಬಹುದಾದ ಭಾಗ ಕಡಿಮೆಯೇ ಹೆಚ್ಚೇ, ಒಳಗೆ ಹಾಳಾಗಿದೆಯೇ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಮುನ್ನೂರು - ನಾನೂರು ರೂಪಾಯಿ ಪಾವತಿಸಿ ಒಯ್ದು ಕತ್ತರಿಸಿದಾಗ, ತಾವು ಅಂದಕೊಂಡಂತೆ ಇರದಿದ್ದರೆ ಹೇಗಾಗಬೇಡ? ಈ ಸಮಸ್ಯೆಯನ್ನು ಬಗೆಹರಿಸಲು ವಿಎಫ್‍ಪಿಸಿಕೆ ಸಾಕಷ್ಟು ತಲೆ ಹುಣ್ಣಾಗಿಸಿದೆ. ಕೊನೆಗೆ ಅವರಿಗೆ ಹೊಳೆದ ಪರಿಹಾರವೇ ‘ಗ್ರೋವರ್ ಟ್ರೇಸೆಬಿಲಿಟಿ’. ಅಥವಾ ‘ಬೆಳೆಗಾರನ ಪತ್ತೆ ವ್ಯವಸ್ಥೆ.’

ಹಲಸು ತರುವ ಕೃಷಿಕರು ಅದು ಬಕ್ಕೆಯೇ, ಬಿಳುವವೇ ಎಂದು ತಿಳಿಸಬೇಕು. ಹಗ್ಗ ಕಟ್ಟಿ ಇಳಿಸಿ ಅಥವಾ ಮೆತ್ತನೆಯ ಹಾಸಿಗೆಗೆ ಬೀಳಿಸಿ ಜಖಂ ಆಗದಂತೆ ನೋಡಬೇಕು. ಬೆಳೆದ ಕಾಯಿಯನ್ನಷ್ಟೇ ತರಬೇಕು. ಬೆಳೆದಿದೆಯೇ ಎಂದು ನೋಡಲು ಕಾಯಿಯಿಂದ ಚಿಕ್ಕ ತುಂಡು ಕತ್ತರಿಸಿ ತೆಗೆಯಬಾರದು.

ತೂಕ ಮಾಡಿದ ಮೇಲೆ ಹಲಸಿಗೊಂದು ಚೀಟಿ ಅಂಟಿಸುತ್ತಾರೆ. ಅದರಲ್ಲಿ ಕೃಷಿಕರ ಕೋಡ್ ಮತ್ತು ಹಲಸಿನ ತೂಕ ಇರುತ್ತದೆ. ಉದಾಹರಣೆಗೆ ‘V 6’ ಎಂದರೆ ಕೃಷಿಕ ಬೇಬಿ ಕೂಟುಂಗಲ್. ಈ ಚೀಟಿಯೇ ಸಂಸ್ಥೆಗೂ, ಬಳಕೆದಾರರಿಗೂ ‘ಬೆಳೆಗಾರನ ಪತ್ತೆ’ಯ ಕೀಲಿಕೈ.

ಅಪರೂಪಕ್ಕೆ ಕೆಲವೊಂದು ಹಲಸು ಕೊನೆ ಗ್ರಾಹಕನಿಗೆ ನಿರಾಸೆ ತರುವುದಿದೆ. ಬಲಿಯದೆ ಇರುವುದು ಮುಖ್ಯ ಸಮಸ್ಯೆ. ಬಕ್ಕೆ ಎಂದು ಮಾರಿರುವ ಹಲಸು ಬಿಳುವ ಆಗಿರುವುದು ಇನ್ನೊಂದು. ಒಳಗಡೆ ಹಾಳಾಗಿರುವುದು ಕೆಲವು. ಆದರೂ ಈ ಥರದ ದೂರುಗಳು ಹೆಚ್ಚಿರುವುದಿಲ್ಲ.

ಕಾಡ್ಸ್ ನ ಹಲಸು ಗ್ರಾಹಕರು ಸ್ಥಳೀಯ ಮನೆ ಬಳಕೆಯವರೇ. ಅಕಸ್ಮಾತ್ ಅವರು ಕತ್ತರಿಸಿದ ಹಲಸಿನ ಬಗ್ಗೆ ದೂರು ಇದ್ದರೆ, ನಿಗದಿತ ದಿನಗಳೊಳಗೆ ಅವರು ಫೋಟೊ ತೆಗೆದು ‘ಕಾಡ್ಸ್‌‘ ವಾಟ್ಸಪ್ ಮಾಡಬೇಕು. ಫೋಟೊದಲ್ಲಿ ‘ಟ್ರೇಸೆಬಿಲಿಟಿ ಸ್ಲಿಪ್ಪೂ’ ಇರಬೇಕು. ದೂರು ಕಾಡ್ಸ್‌ನಿಂದ ವಿಎಫ್‍ಪಿಸಿಕೆಗೆ ಫಾರ್ವರ್ಡ್ ಆಗುತ್ತದೆ. ದೂರು ಪುರಸ್ಕರಿಸುವಂಥದ್ದಾದರೆ, ಕೃಷಿಕರಿಗೆ ಪಾವತಿ ರದ್ದು. ಈ ದೂರಿನ ಸಚಿತ್ರ ಪ್ರತಿ ಮಾರ್ಕೆಟಿಂಗ್ ಕಮಿಟಿಗೂ ರವಾನೆಯಾಗುತ್ತದೆ. ಕಮಿಟಿಯ ಹತ್ತೂ ಸದಸ್ಯರು ಕೃಷಿಕರೇ.

‘ನನ್ನಲ್ಲಿ 10 ಹಳೆಯ ಹಲಸಿನ ಮರಗಳಿವೆ. ಈ ಮಾರುಕಟ್ಟೆಯಿಂದಾಗಿ ವರ್ಷಕ್ಕೆ ಮರವೊಂದರ ತಲಾ ₹3 ಸಾವಿರ ಆದಾಯ ನಿರೀಕ್ಷಿಸಬಹುದು‘ ಎನ್ನುತ್ತಾರೆ ಬೇಬಿ ಕೂಟುಂಗಲ್. ‘ಈ ಮಾರುಕಟ್ಟೆ ಯಶಸ್ವಿಯಾದರೆ ಜಿಲ್ಲೆಯ ಇನ್ನೂ ನಾಲ್ಕು ಕೇಂದ್ರಗಳಿಗೆ ಇದನ್ನು ವಿಸ್ತರಿಸಬೇಕೆಂದಿದ್ದೇವೆ‘ ಎನ್ನುತ್ತಾರೆ ವಿಎಫ್‍ಪಿಸಿಕೆಯ ಇಡುಕ್ಕಿ ಜಿಲ್ಲಾ ಪ್ರಬಂಧಕಿ ಬಿಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT